ಶೈಕ್ಷಣಿಕ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಶೈಕ್ಷಣಿಕ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ

January 20, 2021

ಮೈಸೂರು, ಜ.19(ಪಿಎಂ)- ಶೈಕ್ಷಣಿಕ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಶೈಕ್ಷಣಿಕ ಸಾಲ ಮನ್ನಾ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯಾದ್ಯಂತ ಹಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್‍ಗಳಲ್ಲಿ ಲಕ್ಷಾಂತರ ರೂ. ಸಾಲ ಪಡೆದು ತಮ್ಮ ಶಿಕ್ಷಣ ಪೂರೈಸಿದ್ದಾರೆ. ಆದರೆ ನಿರುದ್ಯೋಗ ಸಮಸ್ಯೆ ಜೊತೆಗೆ ಕೋವಿಡ್ ಸಮಸ್ಯೆ ಯಿಂದ ಸಾಲ ಮರುಪಾವತಿ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಆದರೆ ಬ್ಯಾಂಕ್ ಗಳು ಸಾಲ ಮರುಪಾವತಿಗೆ ಒತ್ತಡ ಹಾಕುತ್ತಿವೆ ಎಂದು ಕಿಡಿಕಾರಿದರು. ಈ ಹಿಂದಿನ ಮೈತ್ರಿ ಸರ್ಕಾರ ಶೈಕ್ಷಣಿಕ ಸಾಲ ಮನ್ನಾ ಮಾಡಲು ತೀರ್ಮಾನ ಕೈಗೊಂಡಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಲಿಲ್ಲ. ಈ ಕೂಡಲೇ ಸರ್ಕಾರ ಶೈಕ್ಷಣಿಕ ಸಾಲ ಮನ್ನಾ ಮಾಡುವ ಆದೇಶ ಹೊರಡಿಸಬೇಕು. ಜೊತೆಗೆ ವಿದ್ಯಾರ್ಥಿಗಳ ಮೇಲೆ ಬ್ಯಾಂಕ್‍ಗಳು ಹೇರುತ್ತಿರುವ ಒತ್ತಡವನ್ನು ನಿಲ್ಲಿಸುವಂತೆ ತಕ್ಷಣ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮಿತಿ ಮುಖಂಡರಾದ ಕೆ.ಅಭಿಷೇಕ್, ಪುಟ್ಟಸ್ವಾಮಿಗೌಡ, ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »