ಮೈಸೂರು,ಜ.19(ಆರ್‍ಕೆಬಿ)-ಕಳೆದ 2 ತಿಂಗಳಿಂದ ದೆಹಲಿ ಯಲ್ಲಿ ಕೊರೆಯುವ ಚಳಿಯಲ್ಲೂ ಪ್ರತಿಭಟನೆ ನಡೆಸುತ್ತಿರುವ ರೈತರು ಜ.26ರ ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ಜಾಥಾ ನಡೆಸುತ್ತಿದ್ದು, ಅದೇ ದಿನ ಬೆಂಗಳೂರಿನಲ್ಲಿ ರೈತ ಸಂಘಟನೆಗಳು ಟ್ರಾಕ್ಟರ್ ರ್ಯಾಲಿ ನಡೆಸುತ್ತಿರುವುದಾಗಿ ರೈತಸಂಘ ಮತ್ತು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವ ರಾಜು ತಿಳಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯ ವಿವಿಧ ತಾಲೂಕುಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಟ್ರಾಕ್ಟರ್, ಬೈಕ್, ಟೆಂಪೋಗಳಲ್ಲಿ ಆಗಮಿಸ ಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಟ್ರಾಕ್ಟರ್ ರ್ಯಾಲಿಯ ಕರಪತ್ರವನ್ನು ರೈತಸಂಘದ ಮುಖಂಡರು ಬಿಡುಗಡೆ ಮಾಡಿದರು. ಸುದ್ದಿ ಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ ಹಾಗೂ ವಿವಿಧ ತಾಲೂಕು ಗಳ ಅಧ್ಯಕ್ಷರು ಉಪಸ್ಥಿತರಿದ್ದರು.