ತಿಂಗಳಲ್ಲಿ ವಿಜಯನಗರ 4ನೇ ಹಂತದ ಟ್ಯಾಂಕ್‍ನಿಂದ ನೀರು ಸರಬರಾಜು
ಮೈಸೂರು

ತಿಂಗಳಲ್ಲಿ ವಿಜಯನಗರ 4ನೇ ಹಂತದ ಟ್ಯಾಂಕ್‍ನಿಂದ ನೀರು ಸರಬರಾಜು

January 20, 2021

ಮೈಸೂರು,ಜ.19(ಆರ್‍ಕೆ)- ಮೋಟಾರ್ ಅಳವಡಿಸಿ ತಿಂಗಳೊಳಗಾಗಿ ಹೊಸ ಟ್ಯಾಂಕ್ ನಿಂದ ವಿಜಯನಗರ 4ನೇ ಹಂತದ ನಿವಾಸಿಗಳಿಗೆ ಕುಡಿಯುವ ನೀರು ಸರಬ ರಾಜು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಭರವಸೆ ನೀಡಿದರು.

ವಿಜಯನಗರ 4ನೇ ಹಂತದಲ್ಲಿ ಮುಡಾ ದಿಂದ ನಿರ್ಮಿಸಿರುವ 13 ಎಂಎಲ್‍ಡಿ ನೀರು ಸಂಗ್ರಹ ಸಾಮಥ್ರ್ಯದ ಟ್ಯಾಂಕ್ ಅನ್ನು ಪರಿಶೀಲಿಸಿದ ಅವರು, ಕಾಮಗಾರಿ ಪೂರ್ಣಗೊಂಡಿದ್ದರೂ, ಬಡಾವಣೆಗೆ ಸಮರ್ಪಕ ನೀರು ಪೂರೈಸದಿರುವ ಬಗ್ಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮೋಟಾರ್ ಅನ್ನು ಟ್ಯಾಂಕ್‍ನ ಸ್ವಲ್ಪ ತಳಮಟ್ಟಕ್ಕೆ ಅಳವಡಿಸಿ ದಲ್ಲಿ ಸಂಪೂರ್ಣವಾಗಿ ನೀರಿನ ಬಳಕೆ ಯಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಈ ಕೆಲಸ ಮುಗಿಸಿ ಸುತ್ತಲಿನ ಬಡಾವಣೆಗೆ ನೀರು ಸರಬರಾಜು ಮಾಡಲಾಗುತ್ತದೆ ಎಂದರು.

ನಂತರ ಬಡಾವಣೆಯ ನಿವಾಸಿಗಳ ಕುಂದು-ಕೊರತೆ ವಿಚಾರಣೆ ಸಭೆಯ ಆರಂಭದಲ್ಲಿ ಮಾತನಾಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮುಡಾದಿಂದ ಅಭಿವೃದ್ಧಿಪಡಿಸಿರುವ ಬಡಾವಣೆ ನಿವಾಸಿ ಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಸಲುವಾಗಿ ಶಾಸಕ ಜಿ.ಟಿ. ದೇವೇಗೌಡರ ಒತ್ತಾಯದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾವು ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿದ್ದೇವೆ. ಸಮಸ್ಯೆ ಬಗ್ಗೆ ನಿವಾಸಿಗಳಿಂದ ಅಹವಾಲು ಸ್ವೀಕರಿ ಸಲು ಸಭೆ ಏರ್ಪಡಿಸಿರುವುದಾಗಿ ತಿಳಿಸಿದರು.

ಒಂದೇ ಬಾರಿಗೆ ಎಲ್ಲಾ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳುವ ಸಲುವಾಗಿ, ಯಾವ ಯಾವ ಕೆಲಸವಾಗಬೇಕೆಂಬುದನ್ನು ಖುದ್ದು ಪರಿಶೀಲಿಸಿ ಕಾಮಗಾರಿಯ ಡಿಪಿಆರ್ ತಯಾರಿಸಿದಲ್ಲಿ ಮುಡಾದಿಂದ ಹಣ ಬಿಡು ಗಡೆಗೆ ಇರುವ ಮಿತಿಯನ್ನು ತೆಗೆದು ಅನು ಮತಿ ಕೊಡಿಸುವ ಸಲುವಾಗಿ ಈ ಸಭೆ ಏರ್ಪ ಡಿಸಲಾಗಿದೆ ಎಂದು ಅವರು ತಿಳಿಸಿದರು.

ವಿಜಯನಗರ 4ನೇ ಹಾಗೂ 3ನೇ ಹಂತದ ಬಡಾವಣೆಯ ರಸ್ತೆ ಗುಂಡಿ ಮುಚ್ಚಬೇಕು, ಅರ್ಧಕ್ಕೆ ನಿಂತಿರುವ ಬಸವನಹಳ್ಳಿ ಮುಖ್ಯ ರಸ್ತೆ ಡಾಂಬರೀಕರಣ ಕೆಲಸ ಪೂರ್ಣ ಗೊಳಿಸಬೇಕು, ನಿತ್ಯ ನೀರು ಸರಬರಾಜು, ಕುಡುಕರ ಹಾವಳಿ, ನಾಯಿಗಳ ಕಾಟ, ಮೋರಿಯ ವಾಸನೆ ತಪ್ಪಿಸಬೇಕು, ಕಟ್ಟಡ ತ್ಯಾಜ್ಯ, ಕೋಳಿ ತ್ಯಾಜ್ಯ ಸುರಿಯುವುದನ್ನು ತಪ್ಪಿಸಬೇಕೆಂದು ನಿವಾಸಿಗಳು ಸಚಿವರಿಗೆ ಸಮಸ್ಯೆಗಳ ಸುರಿಮಳೆಗೈದರು.

ಪಾರ್ಕ್ ಅಭಿವೃದ್ಧಿ, ದೇವಸ್ಥಾನ ನಿರ್ಮಿ ಸಲು ಅವಕಾಶ, ಸಿಎ ನಿವೇಶನ ಮಂಜೂ ರಾತಿ, ಧ್ಯಾನ ಮಂದಿರ, ಯುಜಿಡಿ ಮಾರ್ಗದ ಮಿಸ್ಸಿಂಗ್ ಲಿಂಕ್ ಸರಿಪಡಿಸುವುದು, ಹಿರಿಯ ನಾಗರಿಕರಿಗೆ ವಿಶ್ರಾಂತಿ ತಾಣ, ಸೆಪ್ಟಿಕ್ ಟ್ಯಾಂಕ್, ಬೀದಿದೀಪ, ಹಾಸನ ಜಿಲ್ಲಾ ಬಳಗಕ್ಕೆ ಸಿಎ ನಿವೇಶನ, ಅಗೆದಿರುವ ಒಳಚರಂಡಿ ನೀರು ಮೈದಾನಕ್ಕೆ ಹರಿಯುತ್ತಿರುವುದನ್ನು ತಪ್ಪಿಸು ವುದೂ ಸೇರಿದಂತೆ ಅಲ್ಲಿನ ನಿವಾಸಿಗಳು ಮನವಿಗಳ ಸಲ್ಲಿಸಿದರು. ನೀವು ಮೈಸೂ ರನ್ನು ರಾಮರಾಜ್ಯ ಮಾಡುವುದು ಬೇಡ, ರಸ್ತೆ ಗುಂಡಿಗಳನ್ನು ಮುಚ್ಚಿ, ಕುಡಿಯಲು ಸರಿಯಾಗಿ ನೀರು ಕೊಡಿ ಎಂದು ವಿಜಯನಗರ 4ನೇ ಹಂತದ ನಿವಾಸಿಗಳು ಸಚಿವರನ್ನು ಒತ್ತಾಯಿಸಿದರು.

ಈ ಎಲ್ಲಾ ಕೆಲಸವನ್ನು ಕೈಗೆತ್ತಿಕೊಂಡು ಒಂದೇ ಬಾರಿಗೆ ಸಮಸ್ಯೆ ಪರಿಹರಿಸಲು ಮುಡಾಗಿರುವ ಮಿತಿಗಳನ್ನು ಸಡಿಲಗೊಳಿಸಿ ಕಾಮಗಾರಿಗೆ ತಾವು ಸರ್ಕಾರದಿಂದ ಅನು ಮತಿ ಕೊಡಿಸುವುದಾಗಿ ಸಚಿವ ಸೋಮ ಶೇಖರ್, ನಿವಾಸಿಗಳಿಗೆ ಭರವಸೆ ನೀಡಿ ದರು. ಡಾ.ಬಿ.ಪಿ.ಮೂರ್ತಿ, ವಿಜಯಲಕ್ಷ್ಮಿ, ಸುಶೀಲಾ, ಮಂಜು, ರಂಗೇಗೌಡ, ಸೋಮೇ ಗೌಡ, ಚೆಲುವರಾಜು ಸೇರಿದಂತೆ ವಿಜಯ ನಗರ 4ನೇ ಹಂತದ ಸುಮಾರು 50ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಪಾಲ್ಗೊಂಡು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವ, ಶಾಸಕರ ಗಮನ ಸೆಳೆದರು. ಶಾಸಕ ಎಲ್.ನಾಗೇಂದ್ರ, ವಸ್ತುಪ್ರದರ್ಶನ ಪ್ರಾಧಿ ಕಾರದ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಕಾರ್ಯ ದರ್ಶಿ ಎಂ.ಕೆ.ಸವಿತಾ, ಸೂಪರಿಂಟೆಂಡಿಂಗ್ ಇಂಜಿನಿಯರ್ ಶಂಕರ್, ನಗರ ಯೋಜಕ ಸದಸ್ಯ ಜಯಸಿಂಹ, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಸೇರಿದಂತೆ ಹಲವು ಅಧಿಕಾರಿ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

Translate »