ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

August 10, 2021

ತಿ.ನರಸೀಪುರ,ಆ.9(ಎಸ್‍ಕೆ)-ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಪ್ರಜಾ ಸತ್ತಾತ್ಮಕ ಯುವ ಜನ ಫೆಡರೇಷನ್ ಆಶ್ರಯದಲ್ಲಿ ಗ್ರಾಪಂ ನೌಕರರು ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ತಾಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಜಮಾವಣೆಗೊಂಡ ನೂರಾರು ಮಂದಿ ಕಾರ್ಯ ಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ಜನ ಫೆಡರೇಷನ್‍ನ ಸಿ.ಪುಟ್ಟಮಲ್ಲಯ್ಯ ಮಾತನಾಡಿ, ದೇಶ ದಲ್ಲೆಡೆ ಮಕ್ಕಳು, ಗರ್ಭಿಣಿಯರು ಪೌಷ್ಟಿಕಾಂಶ ಕೊರತೆ ಹಾಗೂ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ ಆಹಾರ ಅಗತ್ಯ ವಸ್ತುಗಳ ಕಾಯಿದೆ ತಿದ್ದುಪಡಿ, ಇಂಧನ ಬೆಲೆಗಳ ಏರಿಕೆ, ಭೂಸುಧಾರಣೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಮಸೂದೆಗಳ ತಿದ್ದುಪಡಿ, ಸಾರ್ವಜನಿಕ ಲಾಭ ದಾಯಕ ಸರ್ಕಾರಿ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕ ಮಸೂದೆ ತಿದ್ದುಪಡಿಯಿಂದಾಗಿ ನಿರುದ್ಯೋಗ ಸೃಷ್ಟಿ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿ ಖಂಡನೀಯ ಎಂದರು.

ಸರ್ಕಾರಗಳು ಉದ್ಯೋಗ ಅಥವಾ ವೇತನ ಕಡಿತ ಮಾಡಬಾರದು. ಕೊರೊನಾ ಸಂಕಷ್ಟದಲ್ಲಿನ ಉದ್ಯೋಗ ಹಾಗೂ ವೇತನ ನಷ್ಟಕ್ಕೆ ಪರಿಹಾರ ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಕ್ಷರ ದಾಸೋಹ(ಬಿಸಿಯೂಟ) ಹಾಗೂ ಗ್ರಾಪಂ ನೌಕರರನ್ನು ಖಾಯಂಗೊಳಿಸಿ, ಬಾಕಿ ಇರುವ ವೇತನ ಪಾವತಿಸಬೇಕು. ಪೆಟ್ರೋಲಿಯಂ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕುಮಾರ ಸ್ವಾಮಿ ಮಾತನಾಡಿದರು. ಆನಂತರ ಶಿರಸ್ತೇದಾರ್ ಕೃಷ್ಣ ಮೂರ್ತಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ಯಲ್ಲಿ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಉಮಾ, ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಮಾದೇಶ್, ಕೆ.ನೀಲಾವತಿ, ಶಾಂತಮ್ಮ, ಚಂದ್ರಮ್ಮ, ಗೌರಮ್ಮ, ರೈತ ಸಂಘದ ಮಹ ದೇವಸ್ವಾಮಿ, ಈ.ರಾಜು, ತಾರಾ, ಮಂಜುಳಾ, ಅನ್ನಪೂರ್ಣ, ಎಸ್.ರಾಜು, ಸುಧಾ, ದಾಕ್ಷಾಯಿಣಿ, ಗೀತಾ ಮತ್ತಿತರರಿದ್ದರು.

Translate »