ಮುಡಾದಿಂದ 90 ಕೋಟಿ ರೂ. ವೆಚ್ಚದಲ್ಲಿ  ಕಬಿನಿ ಹೆಚ್ಚುವರಿ ಕುಡಿಯುವ ನೀರು ಯೋಜನೆ
ಮೈಸೂರು

ಮುಡಾದಿಂದ 90 ಕೋಟಿ ರೂ. ವೆಚ್ಚದಲ್ಲಿ ಕಬಿನಿ ಹೆಚ್ಚುವರಿ ಕುಡಿಯುವ ನೀರು ಯೋಜನೆ

July 21, 2021

ಮೈಸೂರು, ಜು.20(ಆರ್‍ಕೆಬಿ)- ಮೈಸೂರಿನ ನೈರುತ್ಯ ಭಾಗದ ಪ್ರದೇಶಗಳಲ್ಲಿ ಮುಡಾ ಅಭಿವೃದ್ಧಿ ಪಡಿಸಿದ ಬಡಾವಣೆಗಳು ಹಾಗೂ ಮುಡಾ ಅನು ಮೋದಿತ ಖಾಸಗಿ ಬಡಾವಣೆಗಳಿಗೆ ನಿರಂತರ ನೀರು ಸರಬರಾಜು ಮಾಡುವ 90 ಕೋಟಿ ರೂ. ವೆಚ್ಚದ ಕಬಿನಿ ಕುಡಿಯುವ ನೀರಿನ ನವೀಕೃತ ಯೋಜನೆಗೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಂಗಳವಾರ ಹೆಚ್.ಡಿ.ಕೋಟೆ ರಸ್ತೆಯಲ್ಲಿರುವ ಬಿದರಗೂಡು ಬಳಿ ಕಬಿನಿಯಿಂದ ನೀರೆತ್ತುವ ಕಾರ್ಯಾಗಾರ, ಕೆಂಬಾಳು ನೀರು ಶುದ್ಧೀಕರಣ ಘಟಕ ಮತ್ತು ಉದ್ಬೂರು ಗೇಟ್ ಬಳಿಯಿರುವ ಶುದ್ಧ ಕುಡಿಯುವ ನೀರು ಸರಬ ರಾಜು ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕಬಿನಿ ನದಿಯಿಂದ ಹೆಚ್ಚುವರಿ ಕುಡಿ ಯುವ ನೀರು ಪಡೆಯುವ ಉದ್ದೇಶದಿಂದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಸೂಚನೆ ಮೇರೆಗೆ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಮುಡಾ, ಕೆಪಿಟಿಸಿಎಲ್, ಸೆಸ್ಕ್, ವಾಣಿ ವಿಲಾಸ ನೀರು ಸರಬರಾಜು ಮಂಡಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಮೊದಲಿಗೆ ಬಿದರಗೂಡು ಬಳಿ ಕಬಿನಿ ನದಿ ಪಾತ್ರದಲ್ಲಿರುವ ಕಚ್ಛಾ ನೀರೆತ್ತುವ ಯಂತ್ರಾ ಗಾರಕ್ಕೆ ಭೇಟಿ ಕೊಟ್ಟು, ಅಲ್ಲಿ ಯಂತ್ರಗಳನ್ನು ಪರಿ ಶೀಲಿಸಿದರು. ಬಳಿಕ ಕೆಂಬಾಳು
ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ, ಅಲ್ಲಿ ಹೆಚ್ಚುವರಿಯಾಗಿ ಅಳವಡಿಸಬೇಕಿರುವ ಪಂಪ್‍ಗಳ ಬಗ್ಗೆ ಮಾಹಿತಿ ಪಡೆದರು. ನಂತರ ಶುದ್ಧ ನೀರು ಸರಬರಾಜು ಮಾಡುವ ಉದ್ಬೂರು ಗೇಟ್ ಬಳಿಯ ಘಟಕಕ್ಕೆ ಭೇಟಿ ನೀಡಿ, ಅಲ್ಲಿಂದ 14 ಕಿ.ಮೀ.ವರೆಗೆ ನೀರು ಸರಬರಾಜು ಮಾಡಲು ಅಗತ್ಯವಾದ ಯಂತ್ರೋಪಕರಣ, ವಿದ್ಯುತ್ ಸಂಪರ್ಕ ಇನ್ನಿತರೆ ವಿಚಾರಗಳ ಬಗ್ಗೆ ಪರಿಶೀಲಿಸಿದರು. ಅಲ್ಲಿ ಸ್ಥಾಪಿಸಲಾದ ನೀರಿನ ಪಂಪಿಂಗ್, ಸಂಸ್ಕರಣೆ ಮತ್ತು ಸರಬರಾಜು ಸ್ಥಾವರಗಳ ಕಾರ್ಯವನ್ನು ಪರಿಶೀಲಿಸಿದರು. 90 ಕೋಟಿ ವೆಚ್ಚದ ಮಹತ್ವಾಕಾಂಕ್ಷೆಯ ಯೋಜನೆಯು ಮುಡಾ ಅಭಿವೃದ್ಧಿಪಡಿಸಿದ ಬಡಾವಣೆಗಳು ಮತ್ತು ಅನುಮೋದಿತ ಖಾಸಗಿ ಬಡಾವಣೆಗಳಿಗೆ ನಿರಂತರ ನೀರು ಪೂರೈಸುವ ಗುರಿ ಹೊಂದಿದೆ. ಮೊದಲು ಬೀದರಗೂಡು ಕಚ್ಛಾ ನೀರೆತ್ತುವ ಯಂತ್ರಾಗಾರದಲ್ಲಿ 180 ಎಂಎಲ್‍ಡಿ (ದಿನಕ್ಕೆ ಮಿಲಿಯನ್ ಲೀಟರ್) ನೀರು ಪಂಪ್ ಮಾಡುವ ಸಾಮಥ್ರ್ಯ ಹೊಂದಿದೆ. ಇದರಲ್ಲಿ, 60 ಎಂಎಲ್‍ಡಿಯಷ್ಟು ಮೈಸೂರು ನಗರದ ಕೆಲವು ಭಾಗಗಳಿಗೆ ಮಾತ್ರ ಸರಬರಾಜು ಮಾಡಲಾಗುತ್ತಿದೆ. ಮುಡಾ ಮತ್ತು ಖಾಸಗಿ ಲೇ ಔಟ್‍ಗಳು ಇನ್ನಿತರೆ ಸಂಬಂಧಿತ ಬಳಕೆಗಳಿಗೆ ನೀರನ್ನು ನೀಡಲಾಗುತ್ತಿದೆ. ಉಳಿದ 120 ಎಂಎಲ್‍ಡಿ ನೀರನ್ನು ಬಳಸಲು ಮುಡಾ ಯೋಜಿಸಿದೆ.

ಕಚ್ಛಾ ನೀರೆತ್ತುವ ಸ್ಥಳದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 11 ಕೆವಿ ವಿದ್ಯುತ್ ಕೇಂದ್ರವನ್ನು 66 ಕೆವಿಗೆ ಹೆಚ್ಚಿಸುವ ಬಗ್ಗೆ ಸಮಗ್ರ ವರದಿಯನ್ನು ಸಿದ್ಧಪಡಿಸು ವಂತೆ ರಾಜೀವ್ ಅಧಿಕಾರಿಗಳನ್ನು ಕೇಳಿದರು. ಇದರಿಂದಾಗಿ ಬಿದರಗೂಡಿಗೆ ಹತ್ತಿರದಲ್ಲಿ ಹರಿಯುವ ಕಬಿನಿ ನದಿಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಪಡೆಯಬಹುದು. ಸ್ಥಳದಲ್ಲಿ ಕೇವಲ 450 ಹೆಚ್‍ಪಿ ವಾಟರ್ ಪಂಪ್ ಅಳವಡಿಸಲಾಗಿದೆ. ಇದರ ಸಾಮಥ್ರ್ಯವನ್ನು 1150 ಹೆಚ್‍ಪಿ ಸಾಮಥ್ರ್ಯದ ಇನ್ನೂ ಮೂರು ಪಂಪ್‍ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕೆ.ಮಾದೇಶ್, ಎಸ್.ಬಿ.ಎಂ.ಮಂಜು, ಎಂ.ಲಕ್ಷ್ಮೀದೇವಿ, ಎಂ.ಎನ್.ನವೀನ್‍ಕುಮಾರ್, ಲಿಂಗಯ್ಯ, ಮುಡಾ ಆಯುಕ್ತ ಡಾ.ಡಿ.ಬಿ. ನಟೇಶ್, ಎಸ್‍ಇ ಶಂಕರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಪ್ಪ, ಎಇಇ ಆಸಿಫ್ ಇಕ್ಬಾಲ್, ಎಇ ಚನ್ನಬಸವೇಗೌಡ, ವಾಣಿವಿಲಾಸ ನೀರು ಸರಬರಾಜು ಇಂಜಿನಿಯರ್‍ಗಳಾದ ಸುವರ್ಣ, ಭರತ್‍ಕುಮಾರ್ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Translate »