ಹಲ್ಲೆ ಖಂಡಿಸಿ ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿಯಿಂದ ನಾಳೆ `ಕರಾಳದಿನ’ ಆಚರಣೆ
ಮೈಸೂರು

ಹಲ್ಲೆ ಖಂಡಿಸಿ ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿಯಿಂದ ನಾಳೆ `ಕರಾಳದಿನ’ ಆಚರಣೆ

April 22, 2020
  • ಇಂದು ರಾತ್ರಿ ಆಸ್ಪತ್ರೆಗಳೆದುರು ದೀಪ ಬೆಳಗಿಸಲಿರುವ ವೈದ್ಯಲೋಕ
  • ಹಲ್ಲೆಕೋರರ ಕಠಿಣ ಶಿಕ್ಷೆಗೊಳಪಡಿಸುವ ಕಾನೂನು ಜಾರಿಗೆ ಆಗ್ರಹ

ಮೈಸೂರು, ಏ.21(ಎಂಕೆ)- ವೈದ್ಯಕೀಯ ಲೋಕದ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯ ಕೀಯ ಸಂಘ (ಐಎಂಎ) ಕರೆ ನೀಡಿರು ವಂತೆ ರಾಜ್ಯದಲ್ಲಿಯೂ ಏ.23ರಂದು `ಕರಾಳ ದಿನ’ ಆಚರಿಸಲಾಗುವುದು. ಅಂದು ಎಲ್ಲಾ ವೈದ್ಯಕೀಯ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ.ಮಧು ಸೂದನ ಕಾರಿಗನೂರು ತಿಳಿಸಿದ್ದಾರೆ.

ಅಲ್ಲದೇ, ಐಎಂಎ ಕರೆ ಮೇರೆಗೆ ರಾಜ್ಯದಲ್ಲಿಯೂ ಏ.22ರ ರಾತ್ರಿ 9 ಗಂಟೆಗೆ ಎಲ್ಲಾ ಆಸ್ಪತ್ರೆಗಳ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗಳ ಮುಂದೆ ದೀಪ ಬೆಳಗಿಸುವರು ಎಂದಿದ್ದಾರೆ. ದೇಶದ ವಿವಿಧೆಡೆ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ದೇಶಾದ್ಯಂತ ಆಸ್ಪತ್ರೆಗಳ ಮುಂದೆ ಹಾಗೂ ವೈದ್ಯರು ಮನೆಗಳಲ್ಲಿದ್ದರೆ ಮನೆ ಮುಂದೆ ಬುಧವಾರ ರಾತ್ರಿ 9ಕ್ಕೆ ಮೊಂಬತ್ತಿ ಹಚ್ಚಿ ಸಾಂಕೇತಿಕವಾಗಿ ಪ್ರತಿಭಟಿಸುವಂತೆ ಐಎಂಎ ಕರೆ ನೀಡಿದೆ. ರಾಜ್ಯದಲ್ಲಿಯೂ ಎಲ್ಲಾ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆ ಮತ್ತು ಮನೆಗಳ ಮುಂದೆ ದೀಪ ಬೆಳಗಿಸುವರು. ಐಎಂಎ ರಾಜ್ಯ ಘಟಕದ ಎಲ್ಲಾ ಸದಸ್ಯರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವರು ಎಂದು ಡಾ.ಮಧುಸೂದನ ಕಾರಿಗನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶಾದ್ಯಂತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇರುವುದು ತೀರಾ ಕಳವಳಕಾರಿಯಾಗಿದೆ. ಇದು ನಾಗರಿಕ ಸಮಾಜಕ್ಕೆ ಶೋಭೆ ತರುವಂತಹುದಲ್ಲ. ವೈದ್ಯಕೀಯ ಲೋಕದವರ ಮೇಲೆ ಹಲ್ಲೆ ನಡೆಸುವವರನ್ನು ಕಠಿಣವಾಗಿ ಶಿಕ್ಷಿಸುವ ಕಾನೂನು ತರಬೇಕೆಂದು ಕೇಂದ್ರ ಸರಕಾರ ಒತ್ತಾಯಿಸಲಾಗುವುದು. ದೇಶಕ್ಕೆ ಶ್ವೇತ ವಸ್ತ್ರಧಾರಿಗಳ ಎಚ್ಚರಿಕೆ ಇದಾಗಿದೆ ಎಂದಿದ್ದಾರೆ.

Translate »