ವಲಸೆ ಕಾರ್ಮಿಕರಿಗೆ ಪ್ರತಿನಿತ್ಯ ದಿನಸಿ ಕಿಟ್ ವಿತರಣೆಗೆ ಚಾಲನೆ
ಮೈಸೂರು

ವಲಸೆ ಕಾರ್ಮಿಕರಿಗೆ ಪ್ರತಿನಿತ್ಯ ದಿನಸಿ ಕಿಟ್ ವಿತರಣೆಗೆ ಚಾಲನೆ

April 22, 2020

ಬೆಂಗಳೂರು, ಏ.21(ಕೆಎಂಶಿ)- ಉದ್ಯೋಗ ಅರಸಿ ರಾಜ್ಯಕ್ಕೆ ಆಗಮಿಸಿ, ರಾಜ್ಯದಲ್ಲೇ ನೆಲೆಸಿ ರುವ ವಲಸೆ ಕಾರ್ಮಿಕರಿಗೆ ಪ್ರತಿದಿನ ಎರಡು ಲಕ್ಷ ದಿನಸಿ ಕಿಟ್ (ಗ್ರಾಸರಿ ಕಿಟ್) ವಿತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಇಂದು ಪ್ರಕಟಿಸಿದರು.

ಕರ್ನಾಟಕ ಪೊಲೀಸ್ ಇಲಾಖೆಯ ಅಂಗ ಸಂಸ್ಥೆ ಎನಿಸಿರುವ ನಾಗರಿಕ ರಕ್ಷಣಾ ವಿಭಾಗ ಹಾಗೂ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣಾ ಕಾನ್‍ಷಿಯಸ್‍ನೆಸ್ (ಇಸ್ಕಾನ್)ನ ಅಕ್ಷಯ ಪಾತ್ರ ಫೌಂಡೇಷನ್‍ನ ಸ್ವಯಂ ಸೇವಕರು ಕಾರ್ಮಿಕ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಾಗಿ ಬೆಂಗಳೂರು ಅರಮನೆಯ ತ್ರಿಪುರವಾಸಿನಿ ಆವರಣದಲ್ಲಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅನುದಾನದ ನೆರವಿನಿಂದ ದಿನಸಿ ಕಿಟ್ ಸಿದ್ಧಪಡಿಸುವ ಪ್ರಧಾನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ಗಮನಿಸಿ, ಸ್ವಯಂ ಸೇವಕರೊಂದಿಗೆ ಮಾತುಕತೆ ನಡೆ ಸಿದ ನಂತರ ಅವರು ಮಾಧ್ಯಮದ ವರೊಂದಿಗೆ ಮಾತನಾಡುತ್ತಿದ್ದರು.

ಪ್ರತಿ ದಿನಸಿ ಕಿಟ್‍ನಲ್ಲಿ ಉತ್ತಮ ಗುಣ ಮಟ್ಟದ ಐದು ಕೆಜಿ ಅಕ್ಕಿ, ಎರಡು ಕೆಜಿ ತೊಗರಿ ಬೇಳೆ, 250 ಗ್ರಾಂ ಕಡಲೆ (ದೇಸಿ ಚೆನ್ನಾ), 500 ಗ್ರಾಂ ರಿಫೈಂಡ್ ಆಯಿಲ್, ತಲಾ 200 ಗ್ರಾಂ ರಸಂ ಪುಡಿ ಮತ್ತು ಸಾಂಬಾರ್ ಪುಡಿ, 100 ಗ್ರಾಂ ಹಸಿಖಾರದ ಪುಡಿ, 200 ಗ್ರಾಂ ಉಪ್ಪಿನಕಾಯಿ, 500 ಗ್ರಾಂ ಸಕ್ಕರೆ, ಎರಡು ಕೆ.ಜಿ ಗೋಧಿ ಹಿಟ್ಟು ಅಥವಾ ಇಡ್ಲಿ ರವೆ ಇರುತ್ತದೆ. ಪ್ರತಿ ಕಿಟ್‍ನಲ್ಲಿ ಓರ್ವ ವ್ಯಕ್ತಿ ದಿನಕ್ಕೆ ಎರಡು ಬಾರಿಯಂತೆ 21 ದಿನ ಊಟ ತಯಾರಿಸಿಕೊಳ್ಳುವಷ್ಟು ದಿನಸಿ ಪದಾರ್ಥಗಳಿವೆ ಎಂದು ಸಚಿವರು ಹೇಳಿದರು.

ಕರ್ನಾಟಕ ನಾಗರಿಕ ರಕ್ಷಣಾ ಪಡೆಯನ್ನು ಅತ್ಯುತ್ತಮ ಸೇವಾ ಸಂಸ್ಥೆ ಎಂದು ಕೇಂದ್ರ ಸರ್ಕಾರ ಮನ್ನಣೆ ನೀಡಿದೆ ಎಂಬುದನ್ನು ಸ್ಮರಿಸಿದ ಬಸವರಾಜ ಬೊಮ್ಮಾಯಿ ಅವರು ಸರ್ಕಾರದಿಂದ ಯಾವುದೇ ವೇತನ ಪಡೆಯ ದೆಯೇ ತಮ್ಮ ವಾಹನಗಳಿಗೆ ತಮ್ಮ ವೆಚ್ಚದಲ್ಲೇ ಇಂಧನ ಭರಿಸಿ ಸ್ವಯಂ-ಪ್ರೇರಿತರಾಗಿ ಕಾರ್ಯನಿರ್ವಹಿಸುವ ನಾಗರಿಕ ರಕ್ಷಣಾ ಪಡೆಯ ಕ್ಷಿಪ್ರ ಸ್ಪಂದನಾ ತಂಡದ ಸ್ವಯಂ ಸೇವಕರನ್ನು ಸೈಲೆಂಟ್ ವಾರಿಯರ್ಸ್ (ಸದ್ದಿ ಲ್ಲದೆ ಕಾರ್ಯ ನಿರ್ವಹಿಸುವ ಸೇನಾನಿಗಳು) ಎಂದು ಬಣ್ಣಿಸಿದರು. ಅಂತೆಯೇ, ಕೊರೊನಾದಂತಹ ಕಠಿಣ ಪರಿಸ್ಥಿತಿ ಯಲ್ಲೂ ಸೇವಾ-ಮನೋಭಾವದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ನಾಗರಿಕ ರಕ್ಷಣಾ ಪಡೆಯ ಸ್ವಯಂ ಸೇವಕರ ಸೇವೆ ಅಭಿನಂದನೀಯ ಹಾಗೂ ಅನು ಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ಷಯ ಪಾತ್ರ ಫೌಂಡೇಷನ್‍ನ ಸಂವಹನ ವಿಭಾಗದ ಮುಖ್ಯಸ್ಥ ನವೀನ ನೀರದ ದಾಸ ಅವರು ಮಾತನಾಡಿ, ಇಸ್ಕಾನ್ ಸಂಸ್ಥೆಯು ಸ್ವಯಂ-ಪ್ರೇರಿತವಾಗಿ ಈವರೆಗೆ ನಗರದ ವಿವಿಧೆಡೆಗಳಲ್ಲಿ 80,000 ಕ್ಕೂ ಹೆಚ್ಚು ದಿನಸಿ ಪದಾರ್ಥಗಳ ಕಿಟ್ ವಿತರಣೆ ಮಾಡಿದೆ. ಅಲ್ಲದೆ, ಪ್ರತಿ ದಿನವೂ ದಿನಸಿ ಕಿಟ್ ಸಿದ್ಧಪಡಿಸುವ ಕಾಯಕದಲ್ಲಿ ತನ್ನ ಪರಿಣತಿ ಮತ್ತು ಅನುಭವವನ್ನು ಹಂಚಿಕೊಂಡು ಸರ್ಕಾರದ ಜೊತೆಗೆ ಸಹಕರಿಸುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಒಂದು ನೂರಕ್ಕೂ ದ್ವಿ-ಚಕ್ರ ವಾಹನಗಳಲ್ಲಿ ಸಾಗಿ ಬಂದ ನಾಗರಿಕ ರಕ್ಷಣಾ ಪಡೆಯ ಹಂಗರ್ ಸೇವಿ ಯರ್ಸ್ ಸ್ವಯಂ ಸೇವಕರ ವಾಹನ ಪಡೆಗೆ (ಹಸಿವು ನಿವಾರಕ ಸ್ವಯಂ ಸೇವಕರ ವಾಹನ ಪಡೆಗೆ) ದಿನಸಿ ಕಿಟ್ ಹಸ್ತಾಂತರಿಸುವ ಮೂಲಕ ಗೃಹ ಸಚಿವರು ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆರಕ್ಷಕ ಮಹಾ ನಿರ್ದೇಶಕರು, ಗೃಹ ರಕ್ಷಕ ದಳದ ಮಹಾ ಸಮಾದೇಷ್ಟರು, ನಾಗರಿಕ ರಕ್ಷಕ ನಿರ್ದೇಶಕರು, ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಮಹಾ ನಿರ್ದೇಶಕ ಎ.ಎಂ.ಪ್ರಸಾದ್, ಕರ್ನಾಟಕ ನಾಗರಿಕ ರಕ್ಷಣಾ ಪಡೆಯ ಕ್ಷಿಪ್ರ ಸ್ಪಂದನಾ ತಂಡದ ಮುಖ್ಯಸ್ಥ ಡಾ. ಪಿ.ಆರ್.ಎಸ್. ಚೇತನ್ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Translate »