ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ವಿಜಯನಗರದಲ್ಲಿ ಪ್ರತಿಭಟನೆ
ಮೈಸೂರು

ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ವಿಜಯನಗರದಲ್ಲಿ ಪ್ರತಿಭಟನೆ

April 3, 2021

ಮೈಸೂರು, ಏ.2- ಮೈಸೂರು ಮಹಾನಗರ ಪಾಲಿಕೆ ಪ್ರಸಕ್ತ ಹಣಕಾಸು ವರ್ಷದಿಂದ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ಖಂಡಿಸಿ ವಿಜಯನಗರ 1 ಮತ್ತು 2ನೇ ಹಂತದ ನಿವಾಸಿಗಳು ಆರ್‍ಕೆ ಕಾರ್ನರ್ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಪೆÇ್ರ.ಗೋಪಾಲ್ ಮಾತನಾಡಿ, ಕೊರೊನಾದಿಂದಾಗಿ ಕೆಲಸ ಇಲ್ಲದೆ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂಥ ವೇಳೆ ತೆರಿಗೆ ಏರಿಸಿರುವುದು ಅಸಮಂಜಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಬಡಾವಣೆ ನಿವಾಸಿಗಳು ಪ್ರತಿವರ್ಷ ತೆರಿಗೆ ಪಾವತಿಸುತ್ತಿದ್ದರೂ ಪಾಲಿಕೆ ಮಾತ್ರ ಇಲ್ಲಿನ ರಸ್ತೆ, ಚರಂಡಿಗಳನ್ನು ದುರಸ್ತಿಪಡಿಸುವ ಗೋಜಿಗೇ ಹೋಗಿಲ್ಲ. ಇದು ಹೀಗೆ ಮಂದುವರಿದರೆ ಕರ ನಿರಾಕರಣೆ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ತೆರಿಗೆ ಹಣ ಸಂಗ್ರಹಿಸುವಲ್ಲಿ ಪಾಲಿಕೆ ಸೋತಿದೆ. ಈಗಿರುವಾಗ ಶೇ.15ರಷ್ಟು ತೆರಿಗೆ sಹೆಚ್ಚಿಸಲು ಮುಂದಾಗಿರುವುದು ಅವೈಜ್ಞಾನಿಕ. ಕೂಡಲೆ ತೆರಿಗೆ ಹೆಚ್ಚಳ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಚಾಮರಾಜ ಕ್ಷೇತ್ರ ಉಪಾಧ್ಯಕ್ಷ ಕುಮಾರ್ ಗೌಡ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ರವಿ, ಶಂಕರ್, ಮಹದೇವಪ್ಪ, ಶ್ರೀನಿವಾಸ್, ರಾಜಶೇಖರ್, ತಿಪ್ಪೇ ಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »