ಶಿಕ್ಷಕರ ವೇತನ ಬಡ್ತಿ  ಕಡಿತ ನಿರ್ಧಾರಕ್ಕೆ ಖಂಡನೆ
ಮೈಸೂರು

ಶಿಕ್ಷಕರ ವೇತನ ಬಡ್ತಿ  ಕಡಿತ ನಿರ್ಧಾರಕ್ಕೆ ಖಂಡನೆ

August 4, 2018

ಮೈಸೂರು: ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜಿನ ಉಪನ್ಯಾಸಕರು, ಪ್ರಾಂಶುಪಾಲರು ಸೇರಿದಂತೆ ಒಟ್ಟು 2.50 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ 2016 ಮತ್ತು 2018ರಲ್ಲಿ ಸೇರ್ಪಡೆ ಮಾಡಿದ್ದ 2 ವೇತನ ಬಡ್ತಿಯನ್ನು ಹಣಕಾಸು ಇಲಾಖೆ ಏಕಾಏಕಿ ಪ್ರತ್ಯೇಕಗೊಳಿಸಲು ಮುಂದಾಗಿರುವುದನ್ನು ದಕ್ಷಿಣ ಶಿಕ್ಷಕರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ. ನಿರಂಜನಮೂರ್ತಿ ಇಂದಿಲ್ಲಿ ಖಂಡಿಸಿದರು.

ತಾನು ಮಾಡಿರುವ ತಪ್ಪನ್ನು ಶಿಕ್ಷಕರ ವೇತನಕ್ಕೆ ಸರ್ಜರಿ ಮಾಡುವ ಮೂಲಕ ಸರಿಪಡಿಸಲು ಮುಂದಾಗಿರುವ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಶಿಕ್ಷಕರಿಗೆ ಕಾಲ ಕಾಲಕ್ಕೆ ಬಡ್ತಿ ನೀಡಿ ಪ್ರೋತ್ಸಾಹಿಸುವ ಹೊರತಾಗಿ ಫಲಿತಾಂಶದ ನೆಪದಲ್ಲಿ ಶಿಕ್ಷಕರಿಗೆ ತೀವ್ರ ಮುಜುಗರ ಉಂಟು ಮಾಡುವಂತೆ ವೇತನ ಕಡಿತ ನಿರ್ಧಾರ ನಾಚಿಕೆಗೇಡು ಎಂದರು. ಈ ಮಧ್ಯೆ ಶಿಕ್ಷಕರಿಗೆ ನಿರಂತರವಾಗಿ ಅನ್ಯಾಯವಾಗಲಿದೆ ಎಂದು ಕಿಡಿ ಕಾರಿದರು.

ಪ್ರತಿ ತಿಂಗಳು ಸೂಕ್ತ ಸಮಯದಲ್ಲಿ ವೇತನ ಬಿಡುಗಡೆ ಮಾಡಬೇಕು. ಹಲವು ವರ್ಷಗಳ ಅವರ ಬೇಡಿಕೆಯನ್ನು ಸರ್ಕಾರ ತಕ್ಷಣ ಈಡೇರಿಸದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಖಾಯಂ ಕುಲಪತಿ ನೇಮಿಸಲು ಒತ್ತಾಯ: ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಖಾಯಂ ಕುಲಪತಿಗಳನ್ನು ನೇಮಿಸುವ ಮೂಲಕ ಶತಮಾನದ ಇತಿಹಾಸವಿರುವ ಮೈಸೂರು ವಿವಿಯ ಘನತೆಯನ್ನು ಕಾಪಾಡುವಂತೆಯೂ ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಂಡಿಕೇಟ್ ಸದಸ್ಯ ಜಗದೀಶ್, ನಿವೃತ್ತ ಪ್ರಾಂಶುಪಾಲರಾದ ನಾಗರಾಜ್, ಕುಮಾರಸ್ವಾಮಿ ಉಪಸ್ಥಿತರಿದ್ದರು.

Translate »