ಮಂಡ್ಯದಲ್ಲಿ ಆಹಾರ ಕಿಟ್ ನೀಡದ ಆರೋಪ ಸ್ಲಂ ನಿವಾಸಿಗಳ ಪ್ರತಿಭಟನೆ
ಮಂಡ್ಯ

ಮಂಡ್ಯದಲ್ಲಿ ಆಹಾರ ಕಿಟ್ ನೀಡದ ಆರೋಪ ಸ್ಲಂ ನಿವಾಸಿಗಳ ಪ್ರತಿಭಟನೆ

April 21, 2020

ನಗರಸಭಾ ಆಯುಕ್ತರು, ಪೊಲೀಸರ ಮಧ್ಯಪ್ರವೇಶ: ಸಾಮಗ್ರಿ ಪೂರೈಕೆಗೆ ಭರವಸೆ
ಮಂಡ್ಯ, ಏ.20(ನಾಗಯ್ಯ)- ಲಾಕ್‍ಡೌನ್ ನಂತರ ಆಹಾರ ಸಾಮಗ್ರಿ ಸೇರಿದಂತೆ ಯಾವುದೇ ಸೌಲಭ್ಯ ನೀಡದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ನಗರದ ಹೊಸಹಳ್ಳಿ ಬಡಾವಣೆಯ ಗುರುಮಠ ಸ್ಲಂನ ನಿವಾಸಿಗಳು ಸೋಮವಾರ ಬೆಳಿಗ್ಗೆ ಪ್ರತಿಭಟನೆಗೆ ಮುಂದಾದ ಘಟನೆ ಜರುಗಿದೆ.

ಸ್ಲಂನ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಗುಂಪುಗೂಡಿ ಹೊಸಹಳ್ಳಿ ಮುಖ್ಯರಸ್ತೆಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಮುಂದಾಗುತ್ತಿ ದ್ದಂತೆ ಅಲ್ಲಿಯೇ ಬಂದೋಬಸ್ತ್‍ನಲ್ಲಿದ್ದ ಪೊಲೀಸರು ಅವರನ್ನು ತಡೆದರು. ಈ ಸಂದರ್ಭ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಮಹಿಳೆಯರು ತಮಗೆ ಯಾವುದೇ ಆಹಾರ ಸಾಮಗ್ರಿ ಸೇರಿದಂತೆ ಇನ್ನಿತರೆ ಸೌಲತ್ತು ದೊರೆಯುತ್ತಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಇಲ್ಲಿನ ಜನರ ಸಮಸ್ಯೆ ನಿವಾರಿಸಬೇಕೆಂದು ಪಟ್ಟು ಹಿಡಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಗರಸಭಾಯುಕ್ತ ಲೋಕೇಶ್ ಮತ್ತು ಡಿವೈಎಸ್‍ಪಿ ನವೀನ್ ಕುಮಾರ್, ಎಸ್‍ಐ ಶರತ್ ಕುಮಾರ್ ಹಾಗೂ ಇತರೆ ಅಧಿಕಾರಿ ಗಳ ತಂಡ ನಿವಾಸಿಗಳನ್ನು ಸಮಾಧಾನಪಡಿಸಿದರು.

144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ರೀತಿ ಗುಂಪು ಸೇರುವುದು ಸರಿಯಲ್ಲ, ಪ್ರತಿಯೊ ಬ್ಬರೂ ಇಲ್ಲಿಂದ ನಿಮ್ಮ ಮನೆಗೆ ತೆರಳಿದರೆ ಅಲ್ಲಿಗೇ ಬಂದು ನಿಮ್ಮ ಸಮಸ್ಯೆ ಆಲಿಸಲಾಗುವುದು ಎಂದು ಮನವರಿಕೆ ಮಾಡಿದ ನಂತರ ನಿವಾಸಿಗಳು ವಾಪಸ್ಸಾದರು. ಬಳಿಕ ಗುರುಮಠ ಸ್ಲಂಗೆ ತೆರಳಿದ ಪೌರಾಯುಕ್ತ ಲೋಕೇಶ್ ಮತ್ತು ಪೊಲೀಸ್ ಅಧಿಕಾರಿಗಳು ಅಲ್ಲಿನ ಪ್ರಮುಖ ಮಹಿಳೆಯರನ್ನು ಕರೆದು ಸಮಸ್ಯೆಗಳನ್ನು ಆಲಿಸಿದರು.

ಈ ಸ್ಲಂ ನಲ್ಲಿ 65 ಕುಟುಂಬಗಳಿದ್ದು ಗಾರೆ ಕೆಲಸ, ಪೈಂಟ್ ಕೆಲಸ, ಮರಗೆಲಸ ಸೇರಿದಂತೆ ಇತರೆ ಕೆಲಸ ಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಲಾಕ್‍ಡೌನ್ ಬಳಿಕ ಯಾವುದೇ ಕೆಲಸವಿಲ್ಲದೆ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಇತರೆ ಬಹುತೇಕ ಸ್ಲಂಗಳಿಗೆ ಆಹಾರ ಸಾಮಗ್ರಿ ಮತ್ತು ತರಕಾರಿಗಳನ್ನು ವಿತರಿಸಲಾಗುತ್ತಿದೆ. ಆದರೆ ಈ ಸ್ಲಂಗೆ ಯಾವುದೇ ಸೌಲಭ್ಯ ನೀಡದೆ ಇಬ್ಬಗೆ ನೀತಿ ಅನುಸರಿಸಲಾಗುತ್ತಿದೆ. 4 ದಿನಗಳಿಗೊಮ್ಮೆ ಹಾಲನ್ನು ನೀಡಲಾಗುತ್ತಿದೆ ಎಂದು ದೂರಿದರು.

ಸಮಸ್ಯೆ ಆಲಿಸಿದ ಪೌರಾಯುಕ್ತ ಲೋಕೇಶ್, ಉಚಿತ ಪಡಿತರ ವಿತರಣೆ ಮಾಹಿತಿ ಪಡೆದುಕೊಂಡು, ಆಹಾರ ಸಾಮಗ್ರಿ ವಿತರಣೆಯಾಗದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ ಭಾನುವಾರ ಜನಶಕ್ತಿ ಹಾಗೂ ನೆಲದನಿ ಬಳಗದವರು ಆಹಾರ ಕಿಟ್ ವಿತರಿ ಸಿರುವ ಅಂಶ ಬೆಳಕಿಗೆ ಬಂತು. ಈ ಬಗ್ಗೆ ನೆಲದನಿಯ ಲಂಕೇಶ್, ಜನಶಕ್ತಿಯ ಸಿದ್ದರಾಜು ಇತರರು ಸ್ಥಳಕ್ಕಾಗಮಿಸಿ 53 ಕುಟುಂಬಗಳಿಗೆ ಆಹಾರ ಕಿಟ್ ನೀಡಲಾಗಿದೆ ಎಂದರು.

ವಿಷಯ ತಿಳಿಯುತ್ತಿದ್ದಂತೆಯೇ ಪ್ರತಿಭಟನೆಗೆ ಮುಂದಾ ಗಿದ್ದವರನ್ನು ತರಾಟೆಗೆ ತೆಗೆದುಕೊಂಡ ಪೌರಾಯುಕ್ತರು ಸೌಲಭ್ಯ ತಲುಪುತ್ತಿದ್ದರೂ ಈ ರೀತಿ ಮನೆಯಿಂದ ಹೊರ ಪ್ರತಿಭಟನೆಗೆ ಮುಂದಾಗಿರುವ ಕ್ರಮ ಸರಿಯಲ್ಲ. ಯಾವುದೇ ಸಮಸ್ಯೆಯಿದ್ದರೂ ದೂರವಾಣಿ ಮೂಲಕ ವಿಷಯ ತಿಳಿಸಿ ದರೆ ಎಲ್ಲಾ ರೀತಿಯ ಸೌಕರ್ಯ ಒದಗಿಸಿ ಕೊಡಲಾಗು ವುದು. ಮುಂದೆ ಈ ರೀತಿ ಪ್ರತಿಭಟನೆಯಂತಹ ವರ್ತನೆ ತೋರುವುದು ಸರಿಯಲ್ಲ ಎಂದು ತಿಳಿ ಹೇಳಿದರು.

ಬಳಿಕ ಅಲ್ಲಿನ 65 ಕುಟುಂಬಗಳ ಪಟ್ಟಿ ಪಡೆದುಕೊಂಡ ಪೌರಾಯುಕ್ತ ಲೋಕೇಶ್ ಮಾಧ್ಯಮಗಳೊಂದಿಗೆ ಮಾತ ನಾಡಿ, ನಗರದಲ್ಲಿ 35 ಸ್ಲಂಗಳಿವೆ. ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಈ ಸ್ಲಂ ನಿವಾಸಿಗಳಿಗೆ 2 ತಿಂಗಳ ಪಡಿತರವನ್ನು ಉಚಿತವಾಗಿ ನೀಡಲಾಗಿದ್ದು ಪಡಿತರ ಚೀಟಿ ಇಲ್ಲದ 10 ಕುಟುಂಬಗಳಿದ್ದು ಪಡಿತರ ನೀಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ನಗರದಲ್ಲಿನ ಸ್ಲಂಗಳಲ್ಲು 23 ಸಾವಿರ ಕುಟುಂಬ ಗಳಿವೆ ಪ್ರತಿನಿತ್ಯವೂ 8 ಸಾವಿರ ಲೀ ಹಾಲು ಬರುತ್ತಿದೆ. ಹೀಗಾಗಿ ಎಲ್ಲರಿಗೂ ಏಕಕಾಲಕ್ಕೆ ಹಾಲು ನೀಡಲು ಸಾಧ್ಯವಿಲ್ಲ. ಹೀಗಾಗಿ 3 ದಿನಕ್ಕೊಮ್ಮೆ ಹಾಲು ವಿತರಿ ಸಲಾಗುತ್ತಿದೆ. ಜನತೆ ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ ನಗರಸಭೆ ಎಇಇ ರವಿಕುಮಾರ್, ಕಂದಾಯಾಧಿಕಾರಿ ಚಂಪಶ್ರೀ, ಸ್ಥಳೀಯ ಮುಖಂಡರಾದ ಶಿವಲಿಂಗೇಗೌಡ, ನಾಗೇಶ್, ಶೇಖರ್ ಮತ್ತಿತರರಿದ್ದರು.

Translate »