ಮೈಸೂರು, ಏ.26(ಎಸ್‍ಬಿಡಿ)- ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರ ವರ್ತನೆ ಖಂಡಿಸಿ, ಮೈಸೂರು ಕನ್ನಡ ವೇದಿಕೆ ಕಾರ್ಯ ಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ಮೈಸೂರಿನ ಮಹದೇವಪುರದಲ್ಲಿ ಪ್ರತಿಭಟನೆ ನಡೆಸಿ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು, ಅಧಿಕಾರಿಗಳೊಡನೆ ಮಾಧ್ಯಮದವರೂ ಸಹ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಬಗ್ಗೆ ಮಾಹಿತಿ ಯ ಜತೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಿರುವಾಗ ಕೆ.ಟಿ.ಶ್ರೀಕಂಠೇಗೌಡರು ಮಾಧ್ಯಮದ ವರೊಂದಿಗೆ ವರ್ತಿಸಿದ ರೀತಿ ಸರಿಯಲ್ಲ ಎಂದು ಖಂಡಿಸಿದರು.
ಸರ್ಕಾರದ ಸೂಚನೆಯಂತೆ ಪತ್ರಕರ್ತರಿಗೆ ಆರೋಗ್ಯ ಪರೀಕ್ಷೆ ಏರ್ಪಡಿಸಿದ್ದ ಸ್ಥಳಕ್ಕೆ ಕೆ.ಟಿ. ಶ್ರೀಕಂಠೇಗೌಡರು ಹಾಗೂ ಅವರ ಪುತ್ರ ಬಂದು, ತಮ್ಮ ನಿವಾಸದ ಬಳಿ ಪರೀಕ್ಷೆ ನಡೆಸದಂತೆ ಅಡ್ಡಿಪಡಿಸಿದ್ದಲ್ಲದೆ, ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳೀಯರನ್ನು ಎತ್ತಿಕಟ್ಟಿ ದುಂಡಾ ವರ್ತನೆ ಮೆರೆದಿದ್ದಾರೆ. ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಪ್ರದೇಶ, ಕೋವಿಡ್ ಆಸ್ಪತ್ರೆ ಆಸುಪಾಸಿನಲ್ಲಿರುವ ಸಾಮಾನ್ಯ ಜನರಿಗೂ ಅರಿವಿದೆ. ಆರೋಗ್ಯ ಸೇವೆಗೆ ಯಾರೂ ಅಡ್ಡಿಪಡಿ ಸದೆ ಸಾಮಾಜಿಕ ಜವಾಬ್ದಾರಿಯಿಂದ ನಡೆದುಕೊಳ್ಳು ತ್ತಿದ್ದಾರೆ. ಆದರೆ ಕೆ.ಟಿ.ಶ್ರೀಕಂಠೇಗೌಡರು ಜನಪ್ರತಿನಿಧಿ ಯಾಗಿ ಹೀಗೆ ನಡೆದುಕೊಳ್ಳಬಾರದಿತ್ತು. ಯಾರೇ ಆಗಲಿ ಕೊರೊನಾ ವಿರುದ್ಧ ಹೋರಾಟ ಮಾಡು ತ್ತಿರುವವರನ್ನು ಗೌರವದಿಂದ ಕಾಣಬೇಕು. ಇವರ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಕಿರಣ್ ಕುಮಾರ್, ನಾಗರಾಜು, ಚೆಲುವರಾಜು, ಸ್ವಾಮಿ, ಲಿಂಗರಾಜು, ಶಿವಪ್ಪ ಮತ್ತಿರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.