ನಿರಾಶ್ರಿತರ ಶಿಬಿರದಲ್ಲಿನ ರೂಢಿಗಳು ಮನೆಯಲ್ಲೂ ಮುಂದುವರಿದರೆ ಉತ್ತಮ ವ್ಯಕ್ತಿತ್ವ ರೂಪಿತ
ಮೈಸೂರು

ನಿರಾಶ್ರಿತರ ಶಿಬಿರದಲ್ಲಿನ ರೂಢಿಗಳು ಮನೆಯಲ್ಲೂ ಮುಂದುವರಿದರೆ ಉತ್ತಮ ವ್ಯಕ್ತಿತ್ವ ರೂಪಿತ

April 27, 2020

ಬಹದ್ದೂರ್ ಛತ್ರದ ಶಿಬಿರದಲ್ಲಿ ಬಸವ ಜಯಂತಿಯಲ್ಲಿ ಡಿಸಿಪಿ ಎ.ಎನ್.ಪ್ರಕಾಶ್‍ಗೌಡ ಕಿವಿಮಾತು
ಮೈಸೂರು, ಏ.26(ಎಸ್‍ಪಿಎನ್)- ಕೊರೊನಾ ಹಿನ್ನೆಲೆಯಲ್ಲಿ ನಿರಾಶ್ರಿತರ ಶಿಬಿರದಲ್ಲಿ ರೂಢಿಸಿ ಕೊಂಡಿರುವ ಶಿಸ್ತು, ಸಂಯಮ, ಧ್ಯಾನ, ಯೋಗ ಮೊದಲಾದ ಉತ್ತಮ ಚಟುವಟಿಕೆಗಳನ್ನು ತಮ್ಮ ಮನೆಗೆ ಹಿಂದಿರುಗಿನ ನಂತರವೂ ಉಳಿಸಿಕೊಂ ಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಎ.ಎನ್.ಪ್ರಕಾಶ್‍ಗೌಡ ಹೇಳಿದರು.

ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ನಿರಾಶ್ರಿತರ ಶಿಬಿರದಲ್ಲಿ `ವೀರವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘ’ದಿಂದ ಭಾನುವಾರ ಆಯೋ ಜಿಸಿದ್ದ ಬಸವ ಜಯಂತಿ ಆಚರಣೆ ಕಾರ್ಯಕ್ರಮ ದಲ್ಲಿ ಅವರು ಕೊರೊನಾ ವಾರಿಯರ್ಸ್‍ಗೆ `ಕಾಯಕ ಯೋಗಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.

ಕಳೆದ ತಿಂಗಳಿಂದ ಈ ಕಲ್ಯಾಣ ಮಂಟಪದಲ್ಲಿ ತಂಗಿರುವ ನಿರಾಶ್ರಿತರಿಗೆ ಅನೇಕ ತಜ್ಞರು, ಹಿರಿಯ ರಂಗಕರ್ಮಿಗಳು ವಿವಿಧ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ್ದಾರೆ. ಬದುಕಿನ ಮಹತ್ವ ತಿಳಿಸಿ ಕೊಟ್ಟಿದ್ದಾರೆ. ನಿಮ್ಮಲ್ಲಿರುವ ಪ್ರತಿಭೆಗಳನ್ನು ಅನಾವ ರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ನಿಮ್ಮ ಊರಿಗೆ ತೆರಳಿದ ನಂತರವೂ ಈ ಶಿಬಿರದಲ್ಲಿ ರೂಢಿಸಿಕೊಂಡ ಆದರ್ಶ ನಡೆ ನುಡಿಗಳನ್ನು ಹಾಗೇ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

12ನೇ ಶತಮಾನದ ಜಗಜ್ಯೋತಿ ಬಸವೇಶ್ವರರು ವಚನ ಚಳವಳಿ ಮೂಲಕ ಸಾಮಾಜಿಕ ಪರಿಕಲ್ಪನೆ, ಅಸ್ಪøಶ್ಯತೆ ನಿವಾರಣೆ ಹಾಗೂ ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಎಲ್ಲರಿಗೂ ಸಮಾನತೆ, ಕಾಯಕ ತತ್ವವನ್ನು ಬೋಧಿಸಿದರು. ಅವರ ಆದರ್ಶ ತತ್ವಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಉತ್ತಮ ಪ್ರಜೆ ಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ರಂಗಕರ್ಮಿ ಮಂಡ್ಯ ರಮೇಶ್ ಮಾತನಾಡಿ, ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿ ರುವ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿಗಳ ಕಾರ್ಯವನ್ನು ಸಾರ್ವ ಜನಿಕವಾಗಿ ಗುರುತಿಸಿ `ಕಾಯಕ ಯೋಗಿ ಪ್ರಶಸ್ತಿ’ ಪ್ರದಾನ ಮಾಡುತ್ತಿರುವುದು ಉತ್ತಮ ಕ್ರಮ ಎಂದರು.

12ನೇ ಶತಮಾನದಲ್ಲಿಯೇ ಅನುಭವ ಮಂಟಪ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಬಸವಣ್ಣನವರ ತತ್ವಾದರ್ಶಗಳು ಪ್ರಜಾಪ್ರಭುತ್ವದ ಬುನಾದಿ ಎಂದರೆ ತಪ್ಪಾಗಲಾರದು ಎಂದರು.

ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಎಲ್.ವಿ.ಲೋಕೇಶ್ ಕುಮಾರ್ ಮಾತನಾಡಿ, ಬಸವಣ್ಣ ನವರ ಸಂದೇಶದಂತೆ ಸಂಕಷ್ಟ ಸಂದರ್ಭದಲ್ಲಿ ಎಲ್ಲಾ ಧರ್ಮದವರು ಒಂದಾಗಿ ಸಮಸ್ಯೆಯನ್ನು ಎದುರಿಸಬೇಕು. ಬಸವಣ್ಣನವರ ಹೇಳಿದ `ದಯ ವಿಲ್ಲದ ಧರ್ಮ ಯಾವುದಯ್ಯ, ದಯವೇ ಧರ್ಮದ ಮೂಲವಯ್ಯ’ ಎಂಬ ವಚನದ ಸಾಲುಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ರಾಷ್ಟ್ರದ ಪ್ರಗತಿಗೆ ಕೈ ಜೋಡಿಸಿದಂತೆ ಎಂದು ನುಡಿದರು

ಕೊರೊನಾ ವಾರಿಯರ್ಸ್‍ಗೆ ಸನ್ಮಾನ: ಈ ವೇಳೆ ಹಿರಿಯ ವೈದ್ಯ ಡಾ.ಗೋವಿಂದಶೆಟ್ಟಿ, ನಂಜರಾಜ ಬಹದ್ದೂರ್ ಛತ್ರದ ಉಸ್ತುವಾರಿ ಡಾ.ವರ್ಷ, ಮೇಲ್ ನರ್ಸ್ ಧನಂಜಯ, ಪೊಲೀಸ್ ಸಿಬ್ಬಂದಿ ಮಾದಶೆಟ್ಟಿ, ಆಶಾ ಕಾರ್ಯ ಕರ್ತೆ ಸುಮಯಾ ಫಿರ್ದೋಸ್ ಹಾಗೂ ಪೌರಕಾರ್ಮಿಕ ವೆಂಕಟೇಶ್ ಅವರಿಗೆ `ಕಾಯಕ ಯೋಗಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೀರವನಿತೆ ರಾಣಿ ಚೆನ್ನಮ್ಮ ಸ್ವಯಂಸೇವಾ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ವಿ.ಮಲ್ಲೇಶ್, ಉಪಾಧ್ಯಕ್ಷ ರೋ.ವಿರೂಪಾಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕಾನ್ಯ ಎಸ್.ಶಿವಮೂರ್ತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್, ಮಲ್ಲಿ ಕಾರ್ಜುನ ಸ್ವಾಮಿ, ವಕೀಲ ಮಹದೇವ ಪ್ರಸಾದ್, ಸುರೇಶ್, ಡಾ.ಎಸ್.ವಿಶ್ವನಾಥ್, ಪರಶಿವಮೂರ್ತಿ, ಜನತಾ ನಗರ ಮಂಜು ಮತ್ತಿತರರಿದ್ದರು.

ಕಾರ್ಯಕ್ರಮ ನಂತರ ಸಂಘದ ಪದಾಧಿಕಾರಿ ಗಳು ಗನ್‍ಹೌಸ್ ಬಳಿಯಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂಜ ರಾಜ ಬಹದ್ದೂರ್ ಛತ್ರ, ಯೂತ್ ಹಾಸ್ಟೆಲ್, ಗೋವಿಂದರಾವ್ ಮೆಮೊರಿಯಲ್ ಹಾಲ್ ಹಾಗೂ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣ ಮಂಟಪದಲ್ಲಿದ್ದ ನಿರಾಶ್ರಿತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

Translate »