ಮೈಸೂರು, ಜು.2(ಎಂಟಿವೈ)- ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಐಎಲ್‍ಐ ಹಾಗೂ ಉಸಿರಾಟ ಸಮಸ್ಯೆಗೆ ತುತ್ತಾದವರು ಹೆಚ್ಚಿನ ಸಂಖ್ಯೆಯಲ್ಲಿ ಕೆ.ಆರ್.ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಆರ್ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯ ಪ್ರಮಾಣದಲ್ಲಿ ಪಿಪಿಇ ಕಿಟ್, ಮಾಸ್ಕ್ ಮತ್ತು ಅಗತ್ಯ ಸುರಕ್ಷಾ ಪರಿಕರಗಳನ್ನು ನೀಡಲಾಗುತ್ತಿದೆ ಎಂದು ಕೆ.ಆರ್.ಆಸ್ಪತ್ರೆ ಡೀನ್ ಮತ್ತು ಡೈರೆಕ್ಟರ್ ಡಾ. ಸಿ.ಪಿ.ನಂಜರಾಜ್ ತಿಳಿಸಿದ್ದಾರೆ.
ಕೆ.ಆರ್.ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು ಸೇರಿದಂತೆ ವಿವಿಧ ಗ್ರೂಪ್‍ಗಳ ಸಿಬ್ಬಂದಿಗಳ ಹಿತ ಕಾಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಸಂದರ್ಭ ದಲ್ಲಿ ಬಳಸಲು ಪಿಪಿಇ ಕಿಟ್, ಕಡ್ಡಾಯ ಬಳಕೆಗೆ ಮಾಸ್ಕ್, ಗ್ಲೌಸ್ ನೀಡಲಾಗಿದೆ. ಎಲ್ಲಾ ಸಿಬ್ಬಂದಿಗಳ ಅಗತ್ಯಕ್ಕೆ ತಕ್ಕಂತೆ ಸುರಕ್ಷತಾ ಸಾಧನ ದಾಸ್ತಾನು ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆಯಾಗಿರುವ ಹಿನ್ನೆಲೆಯಲ್ಲಿ ರೋಗಿಗಳು, ವೈದ್ಯಕೀಯ ಸಿಬ್ಬಂದಿ, ವಿವಿಧ ವಿಭಾಗಗಳ ಸಿಬ್ಬಂದಿ, ರೋಗಿಗಳ ಪೋಷಕರಿಗೆ ಆತಂಕವಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕೆಲವರು ಗೊಂದಲ ಸೃಷ್ಟಿಸುವ ನಿಟ್ಟಿನಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಪಿಪಿಇ ಕಿಟ್, ಮಾಸ್ಕ್ ಇಲ್ಲ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.