ಮೈಸೂರು, ಜು.26(ಪಿಎಂ)- ವಿಶೇಷ ಪ್ರಕರಣದಡಿಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾ ವಣೆ ಪ್ರಕ್ರಿಯೆ ಮುಂದೂಡುವಂತೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪತ್ರ ಮುಖೇನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರಲ್ಲಿ ಕೋರಿದ್ದಾರೆ.
ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ `ಸಿ’ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ವಿಶೇಷ ಪ್ರಕರಣದಡಿ ವರ್ಗಾವಣೆಗೆ ಜು.23ರಂದು ಆನ್‍ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಇದನ್ನು ತಾತ್ಕಾಲಿಕವಾಗಿ ಮುಂದೂಡಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ವಿಶೇಷ ಪ್ರಕರಣದಡಿ ವರ್ಗಾವಣೆ ಪ್ರಕ್ರಿಯೆ ಮುಂದುವರಿಸುವಂತೆ ವಿನಂತಿಸಿದ್ದಾರೆ. ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಯಿಂದ ಅನ್ಯಾಯವಾದ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರಿಗೆ ಮುಂದಿನ ಸಾಲಿನಲ್ಲಿ ನಡೆಯುವ ವರ್ಗಾ ವಣೆಗೂ ಮುನ್ನ ಸೂಕ್ತವಾದ ಬದಲಾವಣೆ ಮಾಡಿಕೊಡುವುದಾಗಿ ವಿಧಾನ ಪರಿಷತ್‍ನ ಕಲಾಪದಲ್ಲಿ ವಾಗ್ದಾನ ನೀಡಿದ್ದೀರಿ. ಅಲ್ಲದೆ, ಕಳೆದ 4 ವರ್ಷಗಳಿಂದ ಸಾಮಾನ್ಯ ವರ್ಗಾವಣೆ ಮಾಡದಿರುವುದ ರಿಂದ ಬಹುತೇಕ ಉಪನ್ಯಾಸಕರು ತುಂಬಾ ತೊಂದರೆಗೊಳ ಗಾಗಿದ್ದಾರೆ ಎಂದು ಸಚಿವರ ಗಮನಕ್ಕೆ ತಂದಿದ್ದಾರೆ.
ಕೋವಿಡ್-19 ಪರಿಸ್ಥಿತಿಯಲ್ಲಿಯೂ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಪದವಿಪೂರ್ವ ಶಿಕ್ಷಣದ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯವನ್ನು ಅಚ್ಚು ಕಟ್ಟಾಗಿ ಮಾಡಿದ್ದು, ಆ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಇಂತಹವರಿಗೆ ಸಾಮಾನ್ಯ ವರ್ಗಾವಣೆಯಿಂದ ನಿರಾಶೆ ಉಂಟು ಮಾಡಬಾರದಾಗಿ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಬಡ್ತಿ ನೀಡಿ, ಪ್ರಾಂಶುಪಾಲರ ಹುದ್ದೆ ಭರ್ತಿ ಮಾಡಿ: ನಿಯಮಾನು ಸಾರ ಸಾಮಾನ್ಯ ವರ್ಗಾವಣೆಯ ಮಸೂದೆಗೆ ಕೂಡಲೇ ಅನುಮತಿ ನೀಡಬೇಕು. ಸಾಮಾನ್ಯ ವರ್ಗಾವಣೆಯ ನಂತರ ಹೊಸದಾಗಿ ಆಯ್ಕೆಗೊಂಡಿರುವ 1,203 ಉಪನ್ಯಾಸಕರಿಗೆ ಸ್ಥಳ ನಿಯುಕ್ತಿಗೊಳಿಸಿ ತಕ್ಷಣ ಆದೇಶ ನೀಡಬೇಕೆಂದು ಆಗ್ರಹಿಸಿರುವ ಎಂಎಲ್‍ಸಿ ಮರಿತಿಬ್ಬೇ ಗೌಡರು, ಕಳೆದ 1 ವರ್ಷದಿಂದ ಸುಮಾರು 350 ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಆದರೆ ಈ ಸಂಬಂಧ ಈವರೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಯಾವುದೇ ಕ್ರಮ ಅನುಸರಿಸಿಲ್ಲ. ಹೀಗಾಗಿ ಅರ್ಹರಿರುವ ಉಪನ್ಯಾಸಕರ ಪಟ್ಟಿಗೆ ಅನುಮೋದನೆ ನೀಡಿ ಕೂಡಲೇ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.