ಮೈಸೂರು, ಜು.26(ಎಂಟಿವೈ)- ಕೊರೊನಾ ಸೋಂಕಿತ ರಿಗೆ ಆರೋಗ್ಯ ಸೇವೆ ಒದಗಿಸಲು ರಾಜ್ಯದಲ್ಲಿ ಕೆಪಿಸಿಸಿ ಯಿಂದ 300ಕ್ಕೂ ಹೆಚ್ಚು ವೈದ್ಯರನ್ನು ನಿಯೋಜಿಸಲಾಗಿದೆ. ಪ್ರತಿ ತಾಲೂಕಿಗೆ ಒಬ್ಬರು ವೈದ್ಯರನ್ನು ನಿಯೋಜಿಸ ಲಾಗಿದ್ದು, ಅವರಿಗೆ ನೆರವಾಗಲು ಪಕ್ಷದ ಕಾರ್ಯಕರ್ತ ರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ತಿಳಿಸಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಮೈಸೂರು ಜಿಲ್ಲಾ ಗ್ರಾಮಾಂತರ ಸಮಿತಿ ಹಮ್ಮಿಕೊಂಡಿದ್ದ `ಆರೋಗ್ಯ ಹಸ್ತ’ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿದ ಅವರು, ರಾಜ್ಯ ಸರ್ಕಾರ ಸೋಂಕು ತಡೆಗಟ್ಟಲು ಹಾಗೂ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸೋಂಕಿತರು ಪರದಾಡುವಂತಾಗಿದೆ. ಕೋವಿಡ್ ಸುರಕ್ಷತಾ ಸಾಮಗ್ರಿ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆಸಿ ಸಾವಿರಾರು ಕೋಟಿ ರೂ. ಲೂಟಿ ಮಾಡುವುದಕ್ಕೆ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ. ರಾಜ್ಯದ ಜನರ ಹಿತವನ್ನು ಬಲಿಕೊಟ್ಟಿದೆ. ಈ ಹಿನ್ನೆಲೆ ಕೆಪಿಸಿಸಿ ನೆರವಿಗೆ ಮುಂದಾಗಿದ್ದು, ರಾಜ್ಯಾದ್ಯಂತ `ಆರೋಗ್ಯ ಹಸ್ತ’ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.
ಕೊರೊನಾ ಸೋಂಕಿತರ ಚಿಕಿತ್ಸೆಗೆಂದು ಕೆಪಿಸಿಸಿ ನಿಯೋ ಜಿಸಿದ ವೈದ್ಯರೊಂದಿಗೆ ಸೇವೆ ಸಲ್ಲಿಸಲು ಪಂಚಾಯಿತಿ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲಾಗು ವುದು. ಥರ್ಮಲ್ ಸ್ಕ್ರೀನಿಂಗ್À, ಆಕ್ಸಿ ಮೀಟರ್ ಬಳಕೆ ಕುರಿತು ತಿಳಿಸಿಕೊಡಲಾಗುವುದು. ಬಳಿಕ ಪಕ್ಷದ ಕಾರ್ಯಕರ್ತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರತಿಮನೆಗೂ ತೆರಳಿ ಪರೀಕ್ಷೆ ನಡೆಸಲಿದ್ದಾರೆ. ಬಳಿಕ ಬರುವ ವರದಿಯನ್ನು ತಾಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು. ಇಂಥ ಕಾರ್ಯಕ್ರಮವನ್ನು ಕಾರ್ಯಕರ್ತರು ಯಶಸ್ವಿ ಗೊಳಿಸಬೇಕು ಎಂದು ಕೋರಿದರು.
ಲಾಕ್‍ಡೌನ್‍ನಿಂದ ಸಂತ್ರಸ್ತರಾದ ರೈತರು, ಅಸಂಘಟಿತ ವಲಯಗಳ ಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೆ ನೆರವಾಗುವಂತೆ ಒತ್ತಾಯಿಸಲಾಗಿದೆ. ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರ ರಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ ಎಂದರು.
ಶಾಸಕ ಹೆಚ್.ಪಿ.ಮಂಜುನಾಥ್ ಮಾತನಾಡಿ, ಕೋವಿಡ್ -19 ಬಂದ ಬಳಿಕ ಪಕ್ಷ ಸಂಘಟನೆಯೇ ಸವಾಲಾಗಿದೆ. ಹುಣ ಸೂರು ತಾಲೂಕಿನಲ್ಲೂ ಹಲವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಎಲ್ಲರೂ ಅಸಹಾಯಕರಾಗಿದ್ದಾರೆ. ಈ ವೇಳೆ ನಿಮ್ಮ ಕಾಳಜಿಯೊಂದಿಗೆ ಈ ಕಾರ್ಯವನ್ನು ಯಶಸ್ವಿಗೊಳಿಸಿ. ಜತೆಗೆ ಸುಳ್ಳಿನ ಕಂತೆ ಹೆಣೆಯುತ್ತಿರುವ ಬಿಜೆಪಿ ಬಗೆಗೂ ಜನರಿಗೆ ತಿಳಿಸಬೇಕಾಗಿದೆ. ರೈತ ಹಾಗೂ ಕಾರ್ಮಿಕ ವಿರೋಧಿಗಳ ವಿರುದ್ಧ ಕಾರ್ಯಕರ್ತರು ಮಾತನಾಡಬೇಕಿದೆ ಎಂದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸೋಂಕಿತರಿಗೆ ಆರೋಗ್ಯ ಸೇವೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳದೇ ಸರ್ಕಾರ ಕೈಚೆಲ್ಲಿ ಕೂತಿದೆ. ಬೆಡ್ ವ್ಯವಸ್ಥೆ ಮಾಡಿಕೊಳ್ಳದೆ ಪರದಾಡುತ್ತಿದೆ ಎಂದು ಟೀಕಿಸಿದರು. ಗ್ರಾಪಂ ಮಟ್ಟದ ಕಾರ್ಯಕರ್ತರು ಕೊರೊನಾ ನಿಯಂ ತ್ರಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಮಾತ ನಾಡಿದರು. ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ ಕುಮಾರ್, ಕಾಂಗ್ರೆಸ್ ಮುಖಂಡರಾದ ಸುನೀಲ್ ಬೋಸ್, ಮಹಿಳಾ ಘಟಕದ ಗ್ರಾಮಾಂತರ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಆರ್.ಪ್ರಕಾಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಸವರಾಜನಾಯಕ್, ಶಿವಕುಮಾರ್, ಹುಣಸೂರು ಬಸವಣ್ಣ, ಐಟಿ ಸೆಲ್ ಅಧ್ಯಕ್ಷ ಡೊನಾಲ್ಡ್, ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮಾಶಂಕರ್, ಮಾಧ್ಯಮ ವಕ್ತಾರ ಮಹೇಶ್, ಗಿರೀಶ್, ಪ್ರೊ. ಶಿವಕುಮಾರ್, ಕಾಂತರಾಜ್, ಕವಿತಾ ಕಾಳೆ, ಸುರೇಶ್ ಪಾಳ್ಯ ಇನ್ನಿತರರು ಉಪಸ್ಥಿತರಿದ್ದರು.