ಮೈಷುಗರ್‍ಗೆ ಶೀಘ್ರ ಕಾಯಕಲ್ಪ
News

ಮೈಷುಗರ್‍ಗೆ ಶೀಘ್ರ ಕಾಯಕಲ್ಪ

February 16, 2022

ಬೆಂಗಳೂರು, ಫೆ. 15- ಮಂಡ್ಯ ಭಾಗದ ರೋಗಗ್ರಸ್ಥ ಮೈಷುಗರ್ ಕಾರ್ಖಾನೆಗೆ ಶೀಘ್ರ ಕಾಯಕಲ್ಪ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಮೈಷುಗರ್ ಕಾರ್ಖಾನೆ ಅಭಿವೃದ್ಧಿ ಕುರಿತಂತೆ ವಿಧಾನಪರಿಷತ್‍ನಲ್ಲಿ ಸದಸ್ಯೆ ತೇಜಸ್ವಿನಿಗೌಡ ಕೇಳಿದ ಪ್ರಶ್ನೆಗೆ ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಈ ಹಿಂದೆ ಮೈಷುಗರ್ ಕಾರ್ಖಾನೆ ಬಗ್ಗೆ ಬಹಳ ಸಲ ಚರ್ಚೆ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಗಳ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದರು.

ರೈತರ ಹಿತ ಕಾಪಾಡುವ ದೃಷ್ಟಿಯಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಮುಖ ನಿರ್ಧಾರವನ್ನು ಕೈಗೊಂಡಿ ದ್ದಾರೆ. ಮಂಡ್ಯ ಭಾಗದ ಜನಪ್ರತಿನಿಧಿಗಳು, ರೈತರು, ರೈತ ಸಂಘಟನೆಗಳು ಸೇರಿಸಿ 2022-23ರ ಅವಧಿಯೊಳಗೆ ರೋಗಗ್ರಸ್ಥ ಅನ್ನುವ ಮೈಷುಗರ್‍ಗೆ ಕಾಯಕಲ್ಪ ನೀಡುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ತಾಂತ್ರಿಕ ಹಾಗೂ ಆರ್ಥಿಕ ಸಲಹೆ ಗಾರರನ್ನು ನೇಮಕ ಮಾಡಿ 3 ತಿಂಗಳೊಳಗಾಗಿ ವರದಿಯನ್ನು ತೆಗೆದುಕೊಂಡು ಮೈಷುಗರ್ ಕಾರ್ಖಾನೆಗೆ ಇರುವ ಇತಿ ಹಾಸವನ್ನು ಉಳಿಸುವ ಕಾರ್ಯವನ್ನು ಮಾಡಲಿದ್ದೇವೆ. ಈ ಸಂಬಂಧ ಸರ್ಕಾರ ಅಲ್ಲಿ ರಾಜಕಾರಣದ ಹೊರತಾಗ್ಯೂ ಮಂಡ್ಯ ಭಾಗದ ರೈತರ ಹಿತಕಾಪಾಡುವ ಸಂಬಂಧ ಮುಖ್ಯಮಂತ್ರಿಗಳು ಈ ತೀರ್ಮಾನ ಕೈಗೊಂಡಿದ್ದಾರೆ. ಬಹು ಬೇಗನೆ ಮೈಷುಗರ್ ಕಾರ್ಖಾನೆ ಭಾಗದ ಸಿಹಿಸುದ್ದಿಯನ್ನು ಸರ್ಕಾರದ ವತಿಯಿಂದ ಕೊಡಲಿದ್ದೇವೆ ಎಂದು ಸಚಿವರು ಹೇಳಿದರು. ಆದರೆ, ಈ ಸಿಹಿಸುದ್ದಿಯ ಖಚಿತ ದಿನಾಂಕವನ್ನು ಹೇಳಿ ಎಂದು ಸದಸ್ಯೆ ತೇಜಸ್ವಿನಿಗೌಡ ಪಟ್ಟು ಹಿಡಿದರು. ಆದರೆ, ರೋಗಗ್ರಸ್ಥ ಎಂಬ ಹಣೆಪಟ್ಟಿ ಹೊತ್ತಿರುವ ಮೈಷುಗರ್ ಕಾರ್ಖಾನೆಯನ್ನು ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ತಂಡ ಆಗಮಿಸಲಿದೆ. ಅವರಿಂದ ಆರ್ಥಿಕ ಹಾಗೂ ತಾಂತ್ರಿಕ ಸಲಹೆಯನ್ನು ಪಡೆದುಕೊಂಡು ಕಾಲಮಿತಿಯನ್ನು ನಿಗದಿ ಮಾಡುತ್ತೇವೆ. ಈ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿಗಳು ಅಂತಿಮ ಹಂತಕ್ಕೆ ತಂದಿದ್ದಾರೆ. ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶವನ್ನು ನೀಡ ಬೇಕೆಂದು ಸಚಿವರು ಮನವಿ ಮಾಡಿಕೊಂಡರು. ಈ ಸಮಸ್ಯೆ ಯನ್ನು ಶೀಘ್ರದಲ್ಲೇ ಬಗೆಹರಿಸುತ್ತೇವೆ ಎಂದು ಸರ್ಕಾರದ ಪರವಾಗಿ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.

Translate »