ಮೈಸೂರು ಅರಮನೆ ದಕ್ಷಿಣ ದ್ವಾರಕ್ಕೆ ‘ಅಂಬಾರಿ’ ಸ್ಥಳಾಂತರ
ಮೈಸೂರು

ಮೈಸೂರು ಅರಮನೆ ದಕ್ಷಿಣ ದ್ವಾರಕ್ಕೆ ‘ಅಂಬಾರಿ’ ಸ್ಥಳಾಂತರ

February 16, 2022

ಮೈಸೂರು, ಫೆ.15 (ಆರ್‍ಕೆ)-ಪ್ರವಾಸಿಗರು ಮತ್ತು ಸಾರ್ವಜನಿಕರ ನೀರಸ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಮೈಸೂರಿನ ಜೆಎಲ್‍ಬಿ ರಸ್ತೆಯ ಮಯೂರ ಹೋಟೆಲ್ ಆವರಣದಿಂದ ಕಾರ್ಯಾಚರಿಸುತ್ತಿದ್ದ ಅಂಬಾರಿ ಡಬಲ್ ಡೆಕ್ಕರ್ ಬಸ್‍ಗಳನ್ನು ಅರಮನೆ ದಕ್ಷಿಣ ದ್ವಾರಕ್ಕೆ ಸ್ಥಳಾಂತರಿಸಲಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ)ದ ವ್ಯವಸ್ಥಾಪಕ ನಿರ್ದೇಶಕ ಜಿ. ಜಗದೀಶ್ ಈ ಕುರಿತು ನಿರ್ಧಾರ ಕೈಗೊಂಡಿದ್ದು, ನಾಳೆ (ಫೆ.16)ಯಿಂದಲೇ ಡಬಲ್ ಡೆಕ್ಕರ್ ಬಸ್‍ಗಳು ಅರಮನೆ ದಕ್ಷಿಣ ದ್ವಾರ(ಗನ್ ಹೌಸ್ ಬಳಿ ಕಾಡಾ ಕಚೇರಿ ಎದುರು)ದ ವಾಹನ ನಿಲುಗಡೆ ಸ್ಥಳದಿಂದ ಕಾರ್ಯಾಚರಣೆ ನಡೆಸÀಲಿವೆ. ಪ್ರಸ್ತುತ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿರುವ ಜಗದೀಶ್ ಈ ಹಿಂದೆ ಮೈಸೂರು ನಗರಪಾಲಿಕೆ ಆಯುಕ್ತರಾಗಿದ್ದರಲ್ಲದೇ ಉಡುಪಿ ಜಿಲ್ಲೆ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಕೆಎಸ್ ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಇತ್ತೀಚೆಗಷ್ಟೇ ಮೈಸೂರಿಗೆ ಭೇಟಿ ನೀಡಿದಾಗ ಅಂಬಾರಿ ಬಸ್‍ಗೆ ಪ್ರವಾಸಿಗರಿಂದ ಪ್ರತಿಕ್ರಿಯೆ ಬರುತ್ತಿಲ್ಲ ಎಂಬುದನ್ನು ಅರಿತು ಈ ನಿರ್ಧಾರ ಕೈಗೊಂಡಿದ್ದಾರೆ.

ನಿಗಮವು 6 ಡಬಲ್ ಡೆಕ್ಕರ್ ಬಸ್‍ಗಳನ್ನು ವಿಶೇಷ ರೀತಿ ಯಲ್ಲಿ ವಿನ್ಯಾಸಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿತ್ತು. ಮೈಸೂರು ನಗರದ ಪಾರಂಪರಿಕ ಕಟ್ಟಡ, ಸ್ಮಾರಕ, ಇಲ್ಲಿನ ಹಸಿರೀಕರಣ, ನೈಸರ್ಗಿಕ ಸೊಬಗನ್ನು ಸವಿಯಲು ಅವಕಾಶ ಕಲ್ಪಿಸುವ ಸಲುವಾಗಿ 4 ಬಸ್‍ಗಳನ್ನು ಅಂಬಾರಿ ಹೆಸರಿನಲ್ಲಿ ಕಾರ್ಯಾ ಚರಿಸುತ್ತಿತ್ತು. ದಸರಾ ಮಹೋತ್ಸವ, ರಜಾದಿನ, ವಾರಾಂತ್ಯ ದಿನಗಳಲ್ಲಿ ಅಂಬಾರಿಗೆ ಉತ್ತಮ ಪ್ರತಿಕ್ರಿಯೆ ದೊರೆಯಿತಾದರೂ, ಕೊರೊನಾ ಪರಿಸ್ಥಿತಿಯಿಂದಾಗಿ ಪ್ರವಾಸಿಗರು ಮೈಸೂರಿಗೆ ಬಾರದಿರುವುದರಿಂದ ಹಾಗೂ ಹಲವು ಬಗೆಯ ಕೋವಿಡ್ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಡಬಲ್ ಡೆಕ್ಕರ್ ಬಸ್‍ನಲ್ಲಿ ಪ್ರಯಾಣಿಸು ವವರ ಸಂಖ್ಯೆ ಕ್ಷೀಣಿಸಿದೆ. 6 ಬಸ್‍ಗಳ ಪೈಕಿ 4 ಬಸ್‍ಗಳು ಮೈಸೂರಿ ನಲ್ಲಿ ಕಾರ್ಯಾಚರಿಸುತ್ತಿದ್ದವು. ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ ಕಾರಣ ಒಂದು ಅಂಬಾರಿ ಬಸ್ ಮಾತ್ರ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ 3 ಬಸ್‍ಗಳನ್ನು ಬನ್ನಿಮಂಟಪದ ಕೆಎಸ್‍ಆರ್‍ಟಿಸಿ ಡಿಪೋ ಆವರಣದಲ್ಲಿ ನಿಲ್ಲಿಸÀಲಾಗಿದೆ. ಇದೀಗ ಜ.5ರ ನಂತರವಂತೂ ಬಸ್‍ಗೆ ಪ್ರಯಾಣಿಕರೇ ಬಾರದಿರುವುದರಿಂದ ಐತಿಹಾಸಿಕ ಸ್ಮಾರಕ, ಪಾರಂಪರಿಕ ಕಟ್ಟಡ ವೀಕ್ಷಿಸುವ ಅಂಬಾರಿ ಟ್ರಿಪ್ ನೆನೆಗುದಿಗೆ ಬಿದ್ದಿತ್ತು. ಮೈಸೂರಿಗೆ ಬಂದು ನಿಗಮದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಜಿ.ಜಗದೀಶ್ ಜನರಿಗೆ ಸುಲಭವಾಗಿ ಗೋಚರಿಸುವಂತೆ ಮಾಡಬೇಕು. ಪ್ರವಾಸಿಗರು ಬರುವ ಸ್ಥಳದಲ್ಲಿ ‘ಅಂಬಾರಿ ಬಸ್’ ನಿಲ್ಲಿಸಿ ಅಲ್ಲಿಂದಲೇ ಸೇವೆ ಒದಗಿಸಬೇಕು ಎಂಬ ನಿರ್ಣಯ ಕೈಗೊಂಡರು. ಮತ್ತಷ್ಟು ಪ್ರಯಾಣಿಕರನ್ನು ಆಕರ್ಷಿಸಲು 250 ರೂ.ಗಳಿರುವ ಡಬಲ್ ಡೆಕ್ಕರ್ ಬಸ್ ಪ್ರಯಾಣ ದರವನ್ನು 150 ರೂ.ಗಳಿಗೆ ಇಳಿಸಲಾಗಿದೆ.

Translate »