ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆರ್.ರಘು ಕೌಟಿಲ್ಯ
ಮೈಸೂರು

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆರ್.ರಘು ಕೌಟಿಲ್ಯ

November 25, 2020

ಮೈಸೂರು, ನ.24(ಪಿಎಂ)- ಡಿ.ದೇವರಾಜ ಅರಸು ಹಿಂದು ಳಿದ ವರ್ಗಗಳ ಅಭಿವೃದ್ಧಿ ನಿಗ ಮದ ಅಧ್ಯಕ್ಷರಾಗಿ ಮೈಸೂರಿನ ಹಿರಿಯ ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ ಅವರನ್ನು ನೇಮಕ ಮಾಡಲಾಗಿದೆ.

ಆರ್.ರಘು ಕೌಟಿಲ್ಯ ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಕಾರ್ಯದರ್ಶಿ, ಪಕ್ಷದ ಸಹ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಪಕ್ಷದ ರಾಜ್ಯ ಉಪಾಧ್ಯಕ್ಷರೂ ಆದ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಆಪ್ತರು. ಈ ಹಿಂದೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಆರ್.ರಘು, ಅವರಿಗೆ ಇದೀಗ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ರಘು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಚುನಾವಣೆ ಸಂದರ್ಭದಲ್ಲಿ ಕಾಯಕ ಸಮಾಜಗಳ ಒಗ್ಗೂಡಿಸಿ, ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪಕ್ಷದ ಯುವ ಮುಖಂಡ ಎಲ್.ಆರ್. ಮಹದೇವಸ್ವಾಮಿ ಅವರನ್ನು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರ ನ್ನಾಗಿಯೂ, ಕಾಡಾ ಅಧ್ಯಕ್ಷರನ್ನಾಗಿ ಶಿವಲಿಂಗಯ್ಯ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾಗಿ ಚಾಮರಾಜ ನಗರದ ಎಂ.ರಾಮಚಂದ್ರ, ನಂಜನಗೂಡು ಎಸ್.ಮಹದೇವಯ್ಯ ಅವರನ್ನು ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ ಕೃಷ್ಣಪ್ಪಗೌಡ ಅವರನ್ನು ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಯಭಾಗ ವಿಧಾನಸಭಾ ಕ್ಷೇತ್ರದ ಶಾಸಕ ದುರ್ಯೋಧನ ಮಹಲಿಂಗಪ್ಪ ಐಹೊಳೆ ಅವರನ್ನು ನೇಮಿಸಲಾಗಿದೆ. ಅಲ್ಲದೆ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಂಗಳೂರು ಬಸವೇಶ್ವರನಗರದ ಬಾಬು ಪತ್ತಾರ್, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲೆಯ ಜಿ.ಕೆ.ಗಿರೀಶ್ ಉಪ್ಪಾರ್, ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಂಗಳೂರು ಜಯನಗರದ ಎಸ್.ನರೇಶ್‍ಕುಮಾರ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‍ಐ ಡಿಎಲ್) ಬೆಂಗಳೂರು ಸಂಸ್ಥೆಗೆ ಅಧ್ಯಕ್ಷರಾಗಿ ಬೆಂಗಳೂರು ಬನಶಂಕರಿಯ ಎಂ.ರುದ್ರೇಶ್, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಳ್ಳಾರಿಯ ಹೆಚ್.ಹನುಮಂತಪ್ಪ ಹಾಗೂ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಂಗಳೂರಿನ ಆರ್‍ಟಿ ನಗರದ ಸಿ.ಮುನಿಕೃಷ್ಣ ಅವರನ್ನು ನೇಮಕ ಮಾಡಲಾಗಿದೆ.

Translate »