ಮೈಸೂರು: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಅಸ್ತಿತ್ವಕ್ಕಾಗಿ ರಕ್ಷಣಾ ವ್ಯವಸ್ಥೆಯ ಇತಿಹಾಸದಲ್ಲಿ ರಫೆಲ್‍ನಂತಹ ದೊಡ್ಡ ಹಗರಣ ನಡೆಸುವ ಮೂಲಕ ಭದ್ರತಾ ವ್ಯವಸ್ಥೆಯನ್ನು ಸಡಿಲಗೊಳಿಸುವ ಹುನ್ನಾರ ಮಾಡಿದೆ ಎಂದು ಕೇಂದ್ರದ ಮಾಜಿ ಸಚಿವ ಪಲ್ಲಂ ರಾಜು ಆರೋಪಿಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಒಪ್ಪಂದವನ್ನು ಗಾಳಿಗೆ ತೂರಿ ಇದೀಗ 40 ಸಾವಿರ ಕೋಟಿ ರೂ.ಗಳ ಹಗರಣ ನಡೆಸುವುದರೊಂದಿಗೆ ಗೌಪ್ಯವಾಗಿಡಬೇಕಾದ ಭದ್ರತಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಗಳಿಗೆ ಸೋರಿಕೆ ಮಾಡುವಂತಹ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅವರು ದೂರಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತೀಯ ವಾಯುಸೇನೆಗೆ 126 ವಿಮಾನಗಳನ್ನು 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಉದ್ದೇಶಿಸಲಾಗಿತ್ತು. ದಸ್ಸಾಲ್ಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು 18 ವಿಮಾನಗಳನ್ನು ಹಾರಾಟದ ಸ್ಥಿತಿಯಲ್ಲಿ ಭಾರತಕ್ಕೆ ಕೊಡುವುದು, ಉಳಿದ 108 ವಿಮಾನಗಳನ್ನು ಬೆಂಗಳೂರಿನ ಹೆಚ್‍ಎಎಲ್ ಕಾರ್ಖಾನೆಗೆ ವಿಮಾನ ತಯಾರಿಸಲು ತಂತ್ರಜ್ಞಾನವನ್ನು ಕೊಡುವುದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ನಿಯಮಗಳನ್ನು ಗಾಳಿಗೆ ತೂರಿ 60 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದಾರೆ. ಅಲ್ಲದೇ ಹೆಚ್‍ಎಎಲ್‍ಗೆ ತಂತ್ರಜ್ಞಾನ ವರ್ಗಾವಣೆಗೆ ಯಾವುದೇ ಕ್ರಮ ಕೈಗೊಳ್ಳದೇ ಬಿಡಿ ಭಾಗಗಳ ತಯಾರಿಕೆಗೆ ಅನುಭವವೇ ಇಲ್ಲದೇ ರಿಲೈಯನ್ಸ್ ಡಿಫೆನ್ಸ್ ಅಂಡ್ ಎಂಜಿನಿಯರಿಂಗ್ ಲಿಮಿಟೆಡ್ 21 ಸಾವಿರ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ದೂರಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ವಿಮಾನಕ್ಕೆ 526.10 ಕೋಟಿ ರೂ. ಬೆಲೆ ನಿಗದಿಯಾಗಿತ್ತು. ಆದರೆ ನರೇಂದ್ರ ಮೋದಿಯವರ ಸರ್ಕಾರ ಒಂದು ವಿಮಾನಕ್ಕೆ 1670.70 ಕೋಟಿ ರೂ. ನೀಡುವುದಕ್ಕೆ ಒಪ್ಪಂದ ಮಾಡಿಕೊಂಡಿದೆ. 3 ವರ್ಷದ ಅವಧಿಯಲ್ಲಿ ಒಂದು ವಿಮಾನದ ಬೆಲೆ 3 ಪಟ್ಟು ಹೆಚ್ಚಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಸ್ವದೇಶಿ ಉತ್ಪಾದನೆಗೆ ಸರ್ಕಾರವೇ ಪ್ರೋತ್ಸಾಹ ನೀಡಲು ಹಿಂಜರಿಯುತ್ತಿರುವುದು ಖಂಡನೀಯವಾಗಿದೆ ಎಂದರು.
ಕೇಂದ್ರ ಸರ್ಕಾರ ದೇಶದ ಜನತೆಗೆ ಸುಳ್ಳು ಹೇಳುವ ಮೂಲಕ ದಿಕ್ಕು ತಪ್ಪಿಸುತ್ತದೆ. ಈ ಹಿಂದೆ ಯುಪಿಎ ಸರ್ಕಾರ ಮಿರಾಜ್ ಮತ್ತು ಸುಖೋಯ್ ಯುದ್ಧ ವಿಮಾನಗಳನ್ನು ಖರೀದಿಸುವಾಗ ಸಂಸತ್ತಿನಲ್ಲಿ ಅದರ ಬೆಲೆಯನ್ನು ತಿಳಿಸಿ ಪಾರದರ್ಶಕ ವ್ಯವಹಾರಕ್ಕೆ ನಾಂದಿ ಹಾಡಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ರಫೆಲ್ ವಿಮಾನದ ಬೆಲೆ 670 ಕೋಟಿ ಎಂದು ಸಂಸತ್‍ಗೆ ತಿಳಿಸಿದೆ. ದಸ್ಸಾಲ್ಟ್ ವಾರ್ಷಿಕ ವರದಿಯಲ್ಲಿ ಒಂದು ರಫೆಲ್ ವಿಮಾನದ ಬೆಲೆ 1670 ಕೋಟಿ ರೂ. ಎಂದು ತಿಳಿಸಿದೆ. ಇದರಿಂದ ಸರ್ಕಾರ ದೇಶದ ಜನತೆಯನ್ನು ತಪ್ಪು ದಾರಿಗೆ ಎಳೆದಿರುವುದು ಸ್ಪಷ್ಟವಾಗಿದೆ ಎಂದು ದೂರಿದ ಅವರು, ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದಾರೆ. ಭ್ರಷ್ಟಾಚಾರದ ಹಿತ, ಪಾರದರ್ಶಕ ಆಡಳಿತ ಎಂದು ಬಿಂಬಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ತಾವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಸಂಬಂಧ ಕಾಂಗ್ರೆಸ್ ದೇಶದ ಎಲ್ಲೆಡೆ ರಫೆಲ್ ಹಗರಣದ ಬಗ್ಗೆ ಜನರಿಗೆ ತಿಳಿಸಿ ಹೋರಾಟ ಮಾಡಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.