ಮಾಧ್ಯಮಗಳು ಕ್ಷುಲ್ಲಕ ವಿಚಾರಕ್ಕೆ ಆದ್ಯತೆ ನೀಡಿದರೆ  ಸಮಾಜಕ್ಕೆ ಯಾವುದೇ ಉಪಯೋಗವಾಗಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮತ
ಮೈಸೂರು

ಮಾಧ್ಯಮಗಳು ಕ್ಷುಲ್ಲಕ ವಿಚಾರಕ್ಕೆ ಆದ್ಯತೆ ನೀಡಿದರೆ  ಸಮಾಜಕ್ಕೆ ಯಾವುದೇ ಉಪಯೋಗವಾಗಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮತ

August 27, 2018

ಮೈಸೂರು:  ಮಾದ್ಯಮಗಳು ಕ್ಷುಲ್ಲಕ ವಿಚಾರಗಳಿಗೆ ಹೆಚ್ಚಿನ ಆಧ್ಯತೆ ನೀಡದೆ ಸಾಮಾಜಿಕ ಕಳಕಳಿಯುಳ್ಳ ವಿಷಯಕ್ಕೆ ಹೆಚ್ಚು ಒತ್ತು ನೀಡಿದರೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಸಭಾಂಗಣಕ್ಕೆ ಭಾನುವಾರ ರಾಜಶೇಖರ ಕೋಟಿ ಸಭಾಂಗಣ ಎಂದು ನಾಮಕರಣ ಮಾಡಿ ಫಲಕವನ್ನು ಅನಾವರಣ ಮಾಡಿದ ಬಳಿಕ ಮಾತನಾಡಿದ ಅವರು, ಪತ್ರಕರ್ತರು ಪತ್ರಿಕಾ ಧರ್ಮವನ್ನು ಎತ್ತಿಹಿಡಿಯಬೇಕು. ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು, ಯಾವುದನ್ನು ವೈಭವೀಕರಿಸಬಾರದು ಎನ್ನುವುದನ್ನು ನಿರ್ಧರಿಸಬೇಕು. ಇತ್ತೀಚಿನ ದಿನಗಳಲ್ಲಿ ಕ್ಷುಲಕ ವಿಚಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದ ಸಮಾಜಕ್ಕೆ ಯಾವುದೆ ಉಪಯೋಗವಾಗುವುದಿಲ್ಲ ಎಂದು ಅವರು ವಿಷಾಧಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿರುವುದು ಶ್ಲಾಘನೀಯವಾಗಿದೆ. ಪತ್ರಕರ್ತರ ಮಕ್ಕಳು ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿರುವುದು ಸಂತೋಷವಾಗಿದೆ. ಮುಂದಿನ ವಿದ್ಯಾಭ್ಯಾಸದಲ್ಲಿಯೂ ಹೆಚ್ಚು ಅಂಕ ಗಳಿಸುವುದಕ್ಕೆ ಮುಂದಾಗಬೇಕು. ವೈಧ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಭಯಸುವ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಬೇಕಾಗಿದೆ. ಪತ್ರಕರ್ತರ ಡೊನೇಷನ್ ನೀಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಷ್ಟು ಆರ್ಥಿಕವಾಗಿ ಸದೃಡರಾಗಿಲ್ಲ. ಈ ಹಿನ್ನೆಲೆಯಲ್ಲಿ ಮೆರಿಟ್‍ನಲ್ಲಿ ಮಕ್ಕಳು ಪಾಸಾದರೆ ಸುಲಭವಾಗಿ ವೈಧ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟ್‍ಗಳನ್ನು ಪಡೆಯಬಹುದು ಎಂದು ಅವರು ಸಲಹೆ ನೀಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಉದ್ಘಾಟಿಸಿದ್ದೆ. ಅಂದು ಸಂಘದ ಅಧ್ಯಕ್ಷರಾಗಿ ರಾಜಶೇಖರ್ ಕೋಟಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಇಂದು ಸಭಾಂಗಣಕ್ಕೆ ರಾಜಶೇಖರ್ ಕೋಟಿ ಹೆಸರನ್ನು ನಾಮಕರಣ ಮಾಡಿ ಫಲಕವನ್ನು ಅನಾವರಣ ಮಾಡಿರುವುದು ಸಂತೋಷವಾಗಿದೆ. 1971ರಿಂದಲೂ ನಾನು ರಾಜಶೇಖರಕೋಟಿ ಅವರೊಂದಿಗೆ ಒಡನಾಟವನ್ನು ಇಟ್ಟುಕೊಂಡಿದ್ದೆ. ಆತ್ಮೀಯ ಸ್ನೇಹಿತರಾದರೂ ಕೋಟಿ ಅವರು ನನ್ನ ಪರವಾಗಿ ಹೆಚ್ಚಾಗಿ ಬರೆಯದೆ, ವಾಸ್ತವವನ್ನು ಬರೆಯುವ ಮೂಲಕ ಪತ್ರಿಕಾ ದರ್ಮವನ್ನು ಕಾಯ್ದುಕೊಂಡಿದ್ದರು ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಆಕಾಶವಾಣಿಯ ಹಿರಿಯ ಪತ್ರಕರ್ತ ಎ.ಆರ್.ರಂಗರಾವ್ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಮಾತನಾಡಿ, ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆಗಳಿರುತ್ತದೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಆ ಮಕ್ಕಳು ಮತ್ತಷ್ಟು ಕ್ರಿಯಾಶೀಲರಾಗುತ್ತಾರೆ. ಪತ್ರಕರ್ತರ ಸಂಘವು ಪತ್ರಕರ್ತರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಗ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸಂಘದ ಪ್ರದಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಪತ್ರಿಕೋಧ್ಯಮಿ ರವಿ ಕೋಟಿ, ದರ್ಮಾಪುರ ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »