ಕಲಾವಿದರ ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿಕೆರೆಯ ಸೌಂದರ್ಯದ ಸೊಬಗು
ಮೈಸೂರು

ಕಲಾವಿದರ ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿಕೆರೆಯ ಸೌಂದರ್ಯದ ಸೊಬಗು

August 27, 2018

ಮೈಸೂರು:  ಕಲಾವಿದರ ಕಣ್ಣಲ್ಲಿ ಸೆರೆಯಾದ ಮೈಸೂರಿನ ಕುಕ್ಕರಹಳ್ಳಿಯ ಪ್ರಾಕೃತಿಕ ಸೌಂದರ್ಯದ ರಮಣೀಯ ದೃಶ್ಯಾವಳಿಗಳು ಆ ಕಲಾವಿದರ ಕುಂಚದಲ್ಲಿ ಪ್ರತಿಬಿಂಬವಾಗಿ ಮನಸೂರೆಗೊಂಡವು.

ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ (ಕಾವಾ), ವೈಲ್ಡ್ ಮೈಸೂರು ಜಂಟಿ ಆಶ್ರಯದಲ್ಲಿ ಕುಕ್ಕರಹಳ್ಳಿಕೆರೆಯ ಮುಖ್ಯದ್ವಾರದ (ರೈಲ್ವೆ ಹಳಿ ಬಳಿಯ ದ್ವಾರ) ಬಳಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಕೆರೆ ಆವರಣದ ಚಿತ್ರರಚನಾ ಕಾರ್ಯಕ್ರಮದಲ್ಲಿ ಕಾವಾದ ಮೊದಲ ವರ್ಷದ ವಿದ್ಯಾರ್ಥಿಗಳು ಕೆರೆಯ ವೈವಿಧ್ಯಮಯ ನೋಟವನ್ನು ತಮ್ಮ ಕಲಾತ್ಮಕ ಲೋಕದಲ್ಲಿ ಕಟ್ಟಿಕೊಟ್ಟರು.

ಶತಮಾನಕ್ಕೂ ಹಳೆಯದಾದ ಕುಕ್ಕರಹಳ್ಳಿಕೆರೆಯು ಜಲಚರ ಜೀವ ಸಂಕುಲ ಸೇರಿದಂತೆ ವಿವಿಧ ಜಾತಿಯ ಚಿಟ್ಟೆಗಳು, ನೂರಾರು ಜಾತಿಯ ಪಕ್ಷಿಗಳ ಆಶ್ರಯ ತಾಣವಾಗಿದೆ. ದಟ್ಟ ಗಿಡಮರಗಳ ಸೊಬಗಿನೊಂದಿಗೆ ಕಂಗೊಳಿಸುತ್ತಿರುವ ಇಂತಹ ಹಚ್ಚಹಸಿರಿನ ಪ್ರಶಾಂತಮಯ ವಾತಾವರಣದ ಕೆರೆಯ ದಡದಲ್ಲಿ ಕುಳಿತ ಕಾವಾ ಕಲಾವಿದರು, ತಮ್ಮದೇ ನೋಟದಲ್ಲಿ ಕೆರೆಯ ನಿಸರ್ಗದ ಸಿರಿಯನ್ನು ಬಣ್ಣದೋಕುಳಿಯಲ್ಲಿ ಅನಾವರಣಗೊಳಿಸಿದರು.

30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರು ತಾಸುಗಳ ಕಾಲ ಕೆರೆಯ ವೈಯ್ಯಾರದ ನೋಟವನ್ನು ತಮ್ಮ ಭಾವಭಂಗಿಯ ಚಿಂತನ-ಮಂಥನದಲ್ಲಿ ಅಳೆದು ತೂಗಿ ಪ್ರಕೃತಿಯ ಸೊಗಸನ್ನು ಚಿತ್ತಾರವಾಗಿ ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂಬ ಸಂದೇಶ ಸಾರಿದರು. ಇದು ಸ್ಪರ್ಧೆಯಲ್ಲವಾದರೂ ತಮ್ಮ ಚಿತ್ರಕಲೆಯೇ ಮನಸೊರೆಗೊಳ್ಳಬೇಕೆಂಬ ತವಕ ಆ ಕಿರಿಯ ಕಲಾವಿದರಲ್ಲಿ ಮನೆ ಮಾಡಿತ್ತು. ಒಬ್ಬರಿಗೆ ಒಂದು ಚಿತ್ರ ರಚನೆಗೆ ಅವಕಾಶ ನೀಡಲಾಗಿತ್ತು. ಚಿತ್ರಕಲೆಯೊಂದಿಗೆ 8 ವಿದ್ಯಾರ್ಥಿಗಳು ಕ್ಯಾಮರಾದ ಮೂಲಕ ಬಗೆಗೆಯ ಭಂಗಿಯಲ್ಲಿ ಕೆರೆಯ ವೈಭೋಗದ ನೋಟವನ್ನು ಸೆರೆ ಹಿಡಿದರು. ಜಿ.ಎಂ.ನಿರಂಜನ್ ಎಂಬ ವಿದ್ಯಾರ್ಥಿ ಜೇಡಿಮಣ್ಣಿನಲ್ಲಿ ಪಕ್ಷಿಗಳ ಕೆಲ ಬೊಂಬೆಗಳನ್ನು ಮಾಡಿದ್ದು ವಿಶೇಷವೆನಿಸಿತು.

ಬೆಳಿಗ್ಗೆ 7ರಿಂದ 10ರವರೆಗೆ ಸಿದ್ಧಗೊಂಡ ಚಿತ್ರಕಲೆಗಳನ್ನು ಇದೇ ಕೆರೆ ಆವರಣದಲ್ಲಿ ಸಂಜೆ 4ರಿಂದ 6ರವರೆಗೆ ಪ್ರದರ್ಶಿಸಿ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ನೀಡಲಾಗಿತ್ತು. ಕೆರೆಯ ರಮಣೀಯ ದೃಶ್ಯಗಳನ್ನೊಳಗೊಂಡ ಚಿತ್ತಾರಗಳನ್ನು ನೂರಾರು ಮಂದಿ ವಾಯು ವಿಹಾರಿಗಳು ಕಣ್ತುಂಬಿಕೊಂಡರು.

ಅತಿಥಿಯಾಗಿ ಪಾಲ್ಗೊಂಡಿದ್ದ ಕಲಾವಿದ ಬಾದಲ್ ನಂಜುಂಡಸ್ವಾಮಿ ಮಾತನಾಡಿ, ವಾಣಿಜ್ಯ ಕೇಂದ್ರಿತ ಅಭಿವೃದ್ಧಿ ದೃಷ್ಟಿಕೋನದಿಂದ ಪರಿಸರದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯೇ ಪ್ರಕೃತಿ ಮುನಿದು ಅನಾಹುತ ಉಂಟು ಮಾಡಲು ಕಾರಣ. ಮೊನ್ನೆಯಷ್ಟೇ ನೆರೆ ಜಿಲ್ಲೆ ಕೊಡಗು ಹಾಗೂ ನೆರೆ ರಾಜ್ಯ ಕೇರಳ ನೆರೆಗೆ ಸಿಲುಕಿ ಜನಜೀವನ ತಲ್ಲಣಗೊಂಡಿತು. ಪರಿಸರ ಸಂರಕ್ಷಣೆಯ ಎಚ್ಚರಿಕೆ ಹಾಗೂ ವಿಕೋಪದ ಬಳಿಕವಾದರೂ ತಿದ್ದುಕೊಂಡು ಪರಿಸರಕ್ಕೆ ಪೂರಕವಾಗಿ ಬದುಕುವ ಕಲೆ ಇಂದು ಅಗತ್ಯವಾಗಿದೆ. ಆದರೆ ಇದಕ್ಕೆ ಆದ್ಯತೆ ನೀಡದೇ ಮಾನವ ಮುನ್ನುಗ್ಗುತ್ತಿದ್ದಾನೆ ಎಂದು ವಿಷಾದಿಸಿದರು.

ಭೂಮಿ ಹಾಗೂ ಅದರ ಪ್ರಕೃತಿ ಇರುವುದು ಕೇವಲ ಮಾನವನಿಗೆ ಮಾತ್ರವಲ್ಲ, ಸಕಲ ಜೀವ ಸಂಕುಲಕ್ಕೂ ಪ್ರಕೃತಿಯಲ್ಲಿ ಬದುಕುವ ಹಕ್ಕಿದೆ. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚೆ, ಸಂವಾದದಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ಆದರೆ ಅದಾಗುತ್ತಿಲ್ಲ, ಇದಕ್ಕೆ ಬದಲು ರಾಜಕೀಯ ಹಾಗೂ ಧಾರ್ಮಿಕ ವಿಚಾರಗಳತ್ತವೇ ನಮ್ಮ ಜ್ಞಾನ ಹೆಚ್ಚು ಕೇಂದ್ರೀತವಾಗುತ್ತಿದ್ದು, ಪ್ರಕೃತಿಯ ಪ್ರಾಮುಖ್ಯತೆ ಇನ್ನಾದರೂ ಅರಿಯಬೇಕಿದೆ ಎಂದು ನುಡಿದರು.

ಪರಿಸರವಾದಿ ರವಿಕುಮಾರ್ ಮಾತನಾಡಿ, ಪರಿಸರವು ಸಕಲ ಜೀವಸಂಕುಲಕ್ಕೂ ಸೇರಿದ್ದಾಗಿದೆ. ಪರಿಸರದ ಪ್ರಾಮುಖ್ಯತೆ ಏನೆಂದು ಅದನ್ನು ಕಳೆದುಕೊಂಡ ಮೇಲೆ ನಾವು ಪಾಶ್ಚಾತಾಪ ಪಟ್ಟರೆ ಪ್ರಯೋಜನವಿಲ್ಲ. ಪರಿಸರವನ್ನು ನೈಸರ್ಗಿಕವಾಗಿಯೇ ಇರುವುದಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಕೃತಕದಿಂದ ಕೂಡಿದ ಪರಿಸರ ನಿರ್ಮಾಣ ಸೂಕ್ತವಲ್ಲ ಎಂದು ಪ್ರತಿಪಾದಿಸಿದರು. ವೈಲ್ಡ್ ಮೈಸೂರು ಸಂಘಟನೆಯ ಚಂದ್ರಶೇಖರ್, ಶೈಲಾಜೇಶ್, ಕಾವಾ ಕಾಲೇಜಿನ ಉಪನ್ಯಾಸಕಿ ರಮ್ಯಾ ಮತ್ತಿತರರು ಹಾಜರಿದ್ದರು.

Translate »