ಕುಕ್ಕರಹಳ್ಳಿ ಕೆರೆಯಲ್ಲಿ ಕಲುಷಿತ ನೀರೆತ್ತುತ್ತಿರುವ ಸಕ್ಕಿಂಗ್ ಯಂತ್ರ
ಮೈಸೂರು

ಕುಕ್ಕರಹಳ್ಳಿ ಕೆರೆಯಲ್ಲಿ ಕಲುಷಿತ ನೀರೆತ್ತುತ್ತಿರುವ ಸಕ್ಕಿಂಗ್ ಯಂತ್ರ

March 5, 2020

ಕೆರೆ ಸಂರಕ್ಷಣೆ, ವಾತಾವರಣ ಸುಧಾರಿಸುವ ಕಾರ್ಯ ಪಾಲಿಕೆಯಿಂದ ಪ್ರಾರಂಭ

ಮೈಸೂರು,ಮಾ.4(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆಗೆ ಪಡುವಾರ ಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಹರಿದು ಬರುತ್ತಿದ್ದ ಕಲುಷಿತ ನೀರು ತಡೆಯಲು ಹಾಗೂ ಹಲವಾರು ವರ್ಷಗಳಿಂದ ಸಂಗ್ರಹ ವಾಗಿರುವ ಕಲುಷಿತ ನೀರಿನ ಕೆಸರನ್ನು ಸಕ್ಕಿಂಗ್ ಯಂತ್ರದ ಮೂಲಕ ಮೇಲೆತ್ತಿ, ಕೆರೆ ಪರಿಸರ ಶುಚಿಗೊಳಿಸುವ ಕಾರ್ಯಾಚರಣೆ ಕಡೆಗೂ ಬುಧವಾರ ಆರಂಭಗೊಂಡಿತು.

ಪಡುವಾರಹಳ್ಳಿ ಮತ್ತಿತರ ಬಡಾವಣೆ ಗಳಿಂದ ಮಿತಿಮೀರಿದ ಪ್ರಮಾಣದಲ್ಲಿ ಕಲುಷಿತ ನೀರು ಮೈಸೂರು-ಹುಣಸೂರು ಮುಖ್ಯರಸ್ತೆಗೆ ಅಡ್ಡಲಾಗಿ ಕಟ್ಟಿರುವ ಮ್ಯಾಜಿಕ್ ಬಾಕ್ಸ್ ಮೂಲಕ ಕುಕ್ಕರಹಳ್ಳಿ ಕೆರೆಯ ಒಡಲನ್ನು ಸೇರುತ್ತಿದೆ. ಇತ್ತೀಚೆಗೆ ಕೆರೆಗೆ ಕಲುಷಿತ ನೀರು ಹೆಚ್ಚಿನ ಪ್ರಮಾಣ ದಲ್ಲಿ ಹರಿದು ಬರುತ್ತಿದ್ದು, ದುರ್ವಾಸನೆ ಬೀರಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ವಾಯುವಿಹಾರಿಗಳು, ಸಾರ್ವಜನಿಕರು, ಪರಿಸರ ಪ್ರೇಮಿಗಳು ಕೆರೆಗೆ ಬರುತ್ತಿರುವ ಕಲುಷಿತ ನೀರನ್ನು ತಡೆದು, ಕೆರೆ ಪರಿಸರ ರಕ್ಷಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದ್ದರು.

ಸಾರ್ವಜನಿಕರ ಮನವಿಗೆ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಸ್ಪಂದಿಸಿದ್ದು, ಸಕ್ಕಿಂಗ್ ಯಂತ್ರ ಮತ್ತು ಜೆಸಿಬಿ ಕಳುಹಿಸಿ ಕೆರೆ ಏರಿ ಹಾಗೂ ಹುಣಸೂರು ರಸ್ತೆಗೆ ಹೊಂದಿಕೊಂಡಂತಿರುವ ಸ್ಥಳದಲ್ಲಿ ಸಂಗ್ರಹವಾಗಿರುವ ಕಲುಷಿತ ನೀರು ಹಾಗೂ ಬದಿಯನ್ನು ಮೇಲೆತ್ತುವ ಕೆಲಸ ನಡೆಸಲು ಸೂಚಿಸಿದರು. ಒಳಚರಂಡಿ ವಿಭಾಗದ ಯೂನಿಟ್ 2ರ ಜೆಇ ಜಗ ದೀಶ್ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ ಕಾರ್ಯಾಚರಣೆ ಆರಂಭಿಸಲಾಯಿತು. ಕೆಲ ಸಮಯದವರೆಗೂ ಸಕ್ಕಿಂಗ್ ಯಂತ್ರ ದಲ್ಲಿ ಕೆರೆ ದಡದಲ್ಲಿದ್ದ ಕಲುಷಿತ ನೀರನ್ನು ಮೇಲೆತ್ತಲಾಯಿತು. ಬಳಿಕ ಸಕ್ಕಿಂಗ್ ಯಂತ್ರದ ಪೈಪ್ ಅಂತರ ಕಡಿಮೆಯಾಗಿ ಕಾರ್ಯಾಚರಣೆ ನಿಲ್ಲಿಸಲಾಯಿತು. ಜೆಸಿಬಿ ಯಂತ್ರದ ಟೈರ್ ಬದಿಯಲ್ಲಿ ಸಿಲುಕುತ್ತಿದ್ದ ಹಿನ್ನೆಲೆಯಲ್ಲಿ ಅದರ ಕಾರ್ಯಾಚರಣೆಯೂ ಸ್ಥಗಿತಗೊಳಿಸಲಾಯಿತು. ಗುರುವಾರ ಬೆಳಿಗ್ಗೆ ಉದ್ದನೆಯ ಪೈಪ್ ಇರುವ ಸಕ್ಕಿಂಗ್ ಯಂತ್ರ ಹಾಗೂ ಹಿಟಾಚಿ ತಂದು ಸ್ವಚ್ಛಗೊಳಿಸುವ ಕೆಲಸ ನಡೆಸಲು ನಿರ್ಧರಿಸಿದ ಅಧಿಕಾರಿ ಗಳು ವಾಪಸಾದರು.

ತುರ್ತಾದ ಕ್ರಮ: ಕೆರೆ ವಾತಾವರಣ ಸ್ವಚ್ಛಗೊಳಿಸುವ ಕಾರ್ಯಾಚರಣೆ ಕುರಿ ತಂತೆ ಕುಕ್ಕರಹಳ್ಳಿ ಕೆರೆ ಉಳಿಸಿ ಹೋರಾಟ ಸಮಿತಿ ಮುಖ್ಯಸ್ಥ ಕೆ.ಎಂ.ಜಯರಾಮಯ್ಯ ಅವರು `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಕುಕ್ಕರಹಳ್ಳಿ ಕೆರೆಗೆ ಪಡುವಾರಹಳ್ಳಿ ಕಡೆಯಿಂದ ಮೋರಿ ಮೂಲಕ ಹಸುಗಳ ಗಂಜಲ, ತೊಪ್ಪೆ ನೀರು, ಬಟ್ಟೆ ಒಗೆದ ನೀರು, ಪಾತ್ರೆ ತೊಳೆದ ನೀರು, ಸಾಬೂನು, ಶಾಂಪು ಮಿಶ್ರಿತ ನೀರು ಚರಂಡಿ ಮೂಲಕ ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ಕಲುಷಿತ ನೀರಿನ  ಪ್ರಮಾಣ ಹೆಚ್ಚಾಗು ತ್ತಿದ್ದು, ಕೆರೆ ವಾತಾವರಣ ಅಪಾಯದ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿತ್ತು. ಹಾಗಾಗಿ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದೆವು. ಅವರು ಸಕ್ಕಿಂಗ್, ಜೆಟ್ಟಿಂಗ್ ಯಂತ್ರ ಹಾಗೂ ಜೆಸಿಬಿ ಕಳುಹಿಸಿ ಕೊಟ್ಟಿದ್ದಾರೆ. ನಾಳೆಯಿಂದ ಕಾರ್ಯಾ ಚರಣೆಯನ್ನು ಇನ್ನಷ್ಟು ಚುರುಕುಗೊಳಿಸ ಲಾಗುತ್ತದೆ. ಜೆಸಿಬಿಯಿಂದ ಕೆರೆ ಏರಿವರೆಗೆ ಹುಣಸೂರು ಮುಖ್ಯ ರಸ್ತೆಗೆ ಹೊಂದಿ ಕೊಂಡಂತೆ ಸಂಗ್ರಹವಾಗಿರುವ ಬದಿ ಮಣ್ಣನ್ನು ಮೇಲೆತ್ತಲಾಗುತ್ತದೆ. ಹೊಸದಾಗಿ 2 ದ್ವೀಪದಂತೆ ಮಾಡಿ, ಚರಂಡಿಯಿಂದ ಬಂದ ನೀರು ನೇರವಾಗಿ ಕೆರೆ ಸೇರುವು ದನ್ನು ತಡೆ ಹಿಡಿಯಲಾಗುತ್ತದೆ. ಆ ಭಾಗದಲ್ಲಿ ಕಲುಷಿತ ಅಂಶ ಹೀರಿಕೊಂಡು ನೀರನ್ನು ಶುದ್ಧಗೊಳಿಸುವ ವಿವಿಧ ಬಗೆಯ ಗಿಡ ನೆಡಲಾಗುತ್ತದೆ. ಚರಂಡಿ ಮೂಲಕ ಬಂದ ನೀರು ದ್ವೀಪದ ಸುತ್ತಲೂ ಹರಿ ಯುವುದರಿಂದ ಕಲುಷಿತ ಹಾಗೂ ವಿಷಕಾರಿ ಅಂಶ ನಿಯಂತ್ರಣಗೊಳ್ಳಲಿದೆ ಎಂದರು.

2 ಕೋಟಿ ರೂ. ಯೋಜನೆ: ಮೈಸೂರು ವಿವಿ ಎಇಇ ಶಿವಲಿಂಗಪ್ರಸಾದ್ ಮಾತ ನಾಡಿ, ಕುಕ್ಕರಹಳ್ಳಿ ಕೆರೆಗೆ ಚರಂಡಿ ಮೂಲಕ ಕಲುಷಿತ ನೀರು ಸೇರುತ್ತಿರುವುದ ರಿಂದ ಕೆರೆ ವಾತಾವರಣ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯ ಉತ್ತರ ಭಾಗದ ಏರಿ ಹಾಗೂ ಹುಣಸೂರು ರಸ್ತೆಯ ಅಂಚಿನವರೆಗೆ 400 ಮೀ. * 150 ಮೀ. ವಿಸ್ತೀರ್ಣದಲ್ಲಿ ಹಲವು ವರ್ಷಗಳಿಂದ ಕಲುಷಿತ ನೀರಿನಿಂದ ಸಂಗ್ರಹವಾಗಿರುವ ಬದಿ ಇದೆ. ಈ ಭಾಗದಲ್ಲಿ ಕಲುಷಿತ ನೀರು ಹೆಚ್ಚಾಗಿದೆ. ಆ ನೀರು ಕೆರೆಗೆ ಸೇರು ತ್ತಿದೆ. ಇದನ್ನು ಮನಗಂಡು ಮೈಸೂರು ವಿವಿ ವತಿಯಿಂದ 2 ಕೋಟಿ ರೂ. ಯೋಜನೆಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದಕ್ಕೆ ಸಮ್ಮತಿ ದೊರೆತರೆ ಆ ಭಾಗದಲ್ಲಿ ಹೊಸದಾಗಿ 2 ದ್ವೀಪ ನಿರ್ಮಿಸಲಾಗುತ್ತದೆ. ಚರಂಡಿಯಲ್ಲಿ ಬರುವ ನೀರು ನೇರವಾಗಿ ಕೆರೆಗೆ ಸೇರು ವುದನ್ನು ತಡೆಗಟ್ಟಿ, ಜಿಗ್‍ಜಾಗ್ ಮಾದರಿ ಯಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಲಾ ಗುತ್ತದೆ. ಅಲ್ಲದೆ ನೀರಿನಲ್ಲಿರುವ ಕಲುಷಿತ ಅಂಶವನ್ನು ಹೀರುವ ಸಸ್ಯ ಪ್ರಬೇಧವನ್ನು ಆ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲಾಗುತ್ತದೆ. ಈ ಯೋಜನೆಗೆ ಸಮ್ಮತಿ ದೊರೆತರೆ ಕುಕ್ಕರಹಳ್ಳಿ ಕೆರೆಗೆ ಕಲುಷಿತ ನೀರು ಸೇರುವುದನ್ನು ಪೂರ್ಣ ತಡೆಗಟ್ಟಬಹುದು ಎಂದರು.

Translate »