ಪರಿಸರಕ್ಕೆ ಪೂರಕವಾಗಿ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಒತ್ತು
ಮೈಸೂರು

ಪರಿಸರಕ್ಕೆ ಪೂರಕವಾಗಿ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಒತ್ತು

September 9, 2019

ಮೈಸೂರು, ಸೆ.8(ಪಿಎಂ)- ಮೈಸೂರಿನ ಮಾನಸಗಂಗೋತ್ರಿಯ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಹಾಗೂ ಇಲ್ಲಿನ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮೈಸೂರು ನಗರದ ಸೌಂದರ್ಯೀಕರಣದ ಜೊತೆಗೆ ನೈರ್ಮ ಲ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಇಂದು ಬೆಳಿಗ್ಗೆ ಅಧಿಕಾರಿಗಳೊಂದಿಗೆ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿದ ಸಚಿ ವರು, ವಾಯುವಿಹಾರಿಗಳೊಂದಿಗೆ ಸಮಾ ಲೋಚಿಸಿ ಕೆರೆ ಆವರಣದಲ್ಲಿನ ಕುಂದು-ಕೊರತೆ ಆಲಿಸಿ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಆದ್ಯತೆ ಮೇರೆಗೆ ಕೆಲ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು. ಸಂಸದರು ಹಾಗೂ ಕ್ಷೇತ್ರದ ಶಾಸಕರಿಗೆ ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ವಹಿಸಲು ತಿಳಿಸಿ ದ್ದೇನೆ ಎಂದರು. ಕಲುಷಿತ ನೀರು ಕೆರೆಗೆ ಸೇರ್ಪಡೆಗೊಂಡು ಅನೈರ್ಮಲ್ಯ ಉಂಟಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ನನ್ನ ಗಮನಕ್ಕೆ ತಂದಿದ್ದಾರೆ. ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಉಸ್ತುವಾರಿ ಸಚಿವನಾಗಿ ಇರುವವರೆಗೆ 15 ದಿನಗಳಿಗೊಮ್ಮೆ ಕೆರೆ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸುವ ಉದ್ದೇಶ ಹೊಂದಿದ್ದೇನೆ ಎಂದರು. ಪ್ರಧಾನಿ ಮೋದಿಯವರು ಅ.2ರಂದು ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದ ಸಂದೇಶ ನೀಡಲು ಉದ್ದೇಶಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದಂತೆ ಇದು ಕೂಡ ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಮೈಸೂರು ನಗರದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಆದ್ಯತೆ ನೀಡಬೇಕಾಗುತ್ತದೆ. ಅ.8ರ ಬಳಿಕ ಕೆರೆ ಅಭಿವೃದ್ಧಿಗೆ ಆಗಬೇಕಿ ರುವ ಎಲ್ಲಾ ಕಾರ್ಯಗಳನ್ನು ಕಾರ್ಯಗತಗೊಳಿಸಲು ಉದ್ದೇಶಿಸಿದ್ದೇನೆ ಎಂದರು.

ಶೌಚಾಲಯಕ್ಕೆ ಬೀಗ: ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಇರುವ ಎರಡು ಶೌಚಾಲಯ ಗಳಿಗೂ ಬೀಗ ಜಡಿಯಲಾಗಿದೆ. ಇರುವ ಶೌಚಾಲಯಗಳನ್ನು ಬಳಕೆಗೆ ಮುಕ್ತಗೊಳಿಸು ವಲ್ಲಿ ವಿಶ್ವವಿದ್ಯಾನಿಲಯ ವಿಫಲವಾಗಿದೆ ಎಂದು ವಾಯು ವಿಹಾರಿಗಳು ಸಚಿವ ವಿ.ಸೋಮಣ್ಣನವರ ಗಮನಕ್ಕೆ ತಂದರು. ಈ ವೇಳೆ ವಿಶ್ವವಿದ್ಯಾನಿಲಯ ಇಂಜಿನಿಯರ್ ಶಿವಲಿಂಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಮುಂದಿನ ಬುಧವಾರ ಇಲ್ಲವೇ ಗುರುವಾರ ಮತ್ತೆ ಇಲ್ಲಿಗೆ ಪರಿಶೀಲನೆ ಬರಲಿದ್ದೇನೆ. ಅಷ್ಟರೊಳಗೆ ಶೌಚಾಲಯಗಳನ್ನು ಬಳಕೆಗೆ ಮುಕ್ತಗೊಳಿಸಬೇಕು ಎಂದು ತಾಕೀತು ಮಾಡಿದರು.

ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿಯ ಮತ್ಸ್ಯ ದರ್ಶಿನಿ ಮಳಿಗೆಯಲ್ಲಿ ಹಸಿ ಮೀನು ಮಾರಾಟಕ್ಕೆ ಮಾತ್ರ ಅವಕಾಶವಿದೆ. ಆದರೆ ಮೀನಿನ ಸಿದ್ಧ ಆಹಾರ ಪದಾರ್ಥಗಳ ಮಾರಾಟಕ್ಕೂ ಅವಕಾಶ ನೀಡಿದ್ದು, ಇದರಿಂದ ಅನೈರ್ಮಲ್ಯ ಉಂಟಾಗಿದೆ ಎಂದು ವಾಯು ವಿಹಾರಿಯೊಬ್ಬರು ಸಚಿವರಲ್ಲಿ ದೂರಿದರು. ಮೀನಿನ ಆಹಾರ ಪದಾರ್ಥ ಮಾರಾಟಕ್ಕೆ ಅವಕಾಶವಿಲ್ಲ. ಕೂಡಲೇ ಅದಕ್ಕೆ ತಡೆಯೊಡ್ಡಿ ಎಂದು ಸ್ಥಳದಲ್ಲಿದ್ದ ವಿವಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಬಿಜೆಪಿ ಮುಖಂಡರಾದ ಹೆಚ್.ವಿ.ರಾಜೀವ್, ಬಿ.ಪಿ.ಮಂಜುನಾಥ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್ ಮತ್ತಿತರರು ಹಾಜರಿದ್ದರು.

ಕುಶಲೋಪರಿ ವಿಚಾರಿಸಿದ ವಿ.ಸೋಮಣ್ಣ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 81ನೇ ಜನ್ಮದಿನದ ಅಂಗವಾಗಿ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಅಭಿರುಚಿ ಪ್ರಕಾಶನದಿಂದ ಪಕ್ಷಿ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಾಯು ವಿಹಾರದ ನಡೆಸುತ್ತಿದ್ದ ಸಚಿವ ವಿ.ಸೋಮಣ್ಣ, ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಸಂಘದ ಯುವ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಅವರ ಕುಶಲೋಪರಿ ವಿಚಾರಿಸಿ ಮುನ್ನಡೆದರು.

ಮಾಜಿ ಎಂಪಿ ಧ್ರುವರ ಕುಶಲೋಪರಿ ವಿಚಾರಿಸಿದ ಸೋಮಣ್ಣ…. :ಸಚಿವ ವಿ.ಸೋಮಣ್ಣ ಕುಕ್ಕರಹಳ್ಳಿ ಕೆರೆ ಆವರಣಕ್ಕೆ ಭೇಟಿ ನೀಡಿದ್ದ ವೇಳೆ ವಾಯು ವಿಹಾರಕ್ಕೆ ಬಂದಿದ್ದ ಮಾಜಿ ಸಂಸದ ಆರ್.ಧ್ರುವನಾರಾಯಣ್ ಸಚಿವರಿಗೆ ಎದುರಾದರು. ಈ ವೇಳೆ ಸಚಿವರು ಹಾಗೂ ಧ್ರುವನಾರಾಯಣ್ ಪರಸ್ಪರ ಕುಶಲೋಪರಿ ವಿಚಾರಿಸಿದರು. ಕೆಲಕಾಲ ಧ್ರುವನಾರಾಯಣ್ ಅವರೊಂದಿಗೆ ಮಾತುಕತೆ ನಡೆಸಿದ ಸಚಿವರು, ಬಳಿಕ ಕೆರೆ ಆವರಣದ ವಾಯು ವಿಹಾರ ಮುಂದುವರೆಸಿದರು.

ಕಾರಂಜಿ ಕೆರೆಗೆ ಕಾಯಕಲ್ಪ: ಮೈಸೂರಿನ ಮತ್ತೊಂದು ಪ್ರಖ್ಯಾತ ಕೆರೆಯಾದ ಕಾರಂಜಿ ಕೆರೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಈಗಾಗಲೇ ಸಂಸದ ಪ್ರತಾಪ್ ಸಿಂಹ ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲಿ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನು 15 ದಿನಗಳಲ್ಲಿ ಕೆಲವೊಂದು ಉನ್ನತ ಮಟ್ಟದ ಬದಲಾವಣೆ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಆಗಲಿದೆ. ಇಷ್ಟು ದೊಡ್ಡ ಮಟ್ಟದ ಪ್ರಾಕೃತಿಕ ಸೌಂದರ್ಯದ ಜಾಗದಲ್ಲಿ ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿಗೊಳಿಸುವುದು ನಮ್ಮ ಉದ್ದೇಶ ಎಂದು ಸಚಿವ ಸೋಮಣ್ಣ ಹೇಳಿದರು.

Translate »