ಮೈಸೂರು, ಸೆ.8-ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ಕಾಡ್ಗಿಚ್ಚಿಗೆ ಅಲ್ಲಿನ ಹಿರಿಯ ಅರಣ್ಯಾಧಿಕಾರಿಗಳ ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರವೇ ಕಾರಣ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿ ಇಲಾ ಖೆಗೆ ವರದಿ ಸಲ್ಲಿಸಲಾಗಿದೆ. 2019ರ ಫೆಬ್ರವರಿ ತಿಂಗಳಲ್ಲಿ ಬಂಡೀಪುರ ಅಭಯಾರಣ್ಯದ ಕುಂದಕೆರೆ ವಲಯದಲ್ಲಿ ಕಂಡುಬಂದ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಾರದೇ ಗೋಪಾಲಸ್ವಾಮಿ ಬೆಟ್ಟದ ವಲಯ ಸೇರಿ ದಂತೆ ಇನ್ನಿತರ ಪ್ರದೇಶಗಳಿಗೆ ವ್ಯಾಪಿಸಿ ಸಾವಿರಾರು ಹೆಕ್ಟೇರ್ ಅರಣ್ಯ ಸಂಪತ್ತು ಭಸ್ಮವಾಗಿತ್ತು. ಈ ಹಿನ್ನೆಲೆ ಯಲ್ಲಿ ಬೆಂಕಿಯನ್ನು ಹತೋಟಿಗೆ ತರಲು ನೂರಾರು ಅರಣ್ಯ ಸಿಬ್ಬಂದಿಗಳು ಶ್ರಮಿಸಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ದಿನದಿಂದ ದಿನಕ್ಕೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಆತಂಕದ ವಾತಾವರಣ ಸೃಷ್ಟಿ ಯಾಗಿತ್ತು. ಕಾಡ್ಗಿಚ್ಚಿನ ತೀವ್ರತೆ ಬಗ್ಗೆ ಮಾಹಿತಿ ಪಡೆದ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೆಲಿಕಾಪ್ಟರ್‍ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿ ಶೀಲಿಸಿದ್ದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿದ ಬಳಿಕ ವಾಯುಸೇನೆಯ ನೆರವು ಕೇಳಲಾಗಿತ್ತು. ಕೂಡಲೇ ಎರಡು ಹೆಲಿಕಾಪ್ಟರ್‍ಗಳನ್ನು ಕಳಿಸಿಕೊಟ್ಟ ವಾಯು ಸೇನೆ ನುಗು ಜಲಾಶಯದಿಂದ ವಾಟರ್ ಬ್ಯಾಗ್ ಮೂಲಕ ನೀರನ್ನು ತುಂಬಿಕೊಂಡು ಬೆಂಕಿ ಉರಿಯು ತ್ತಿದ್ದ ಸ್ಥಳದಲ್ಲಿ ಸುರಿಯುವ ಮೂಲಕ ಕಾಡ್ಗಿಚ್ಚು ಹತೋಟಿಗೆ ತರಲಾಗಿತ್ತು. ಅಲ್ಲದೇ ಕಾಡ್ಗಿಚ್ಚಿನ ಪ್ರಕ ರಣದ ಬಗ್ಗೆ ರಾಜ್ಯ ಮಾತ್ರವಲ್ಲದೇ ದೇಶದ ವಿವಿ ಧೆಡೆಗಳಿಂದಲೂ ಟೀಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ಪ್ರಕರಣಕ್ಕೆ ಸಂಬಂ ಧಿಸಿದಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಹರಿಕುಮಾರ್ ಜಾ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿತ್ತು. ಈ ಸಮಿತಿಯು ತಳ ಮಟ್ಟದ ಸಿಬ್ಬಂದಿಯಿಂದ ಹಿಡಿದು ಎಸಿಎಫ್‍ವರೆಗೆ ಮಾಹಿತಿ ಸಂಗ್ರಹಿಸಿತ್ತು. ಅಲ್ಲದೇ ಸಂಘ-ಸಂಸ್ಥೆಗಳ ಪ್ರತಿನಿಧಿ ಗಳು, ಫೈರ್ ವಾಚರ್‍ಗಳಿಂದ ಮಾಹಿತಿ ಕಲೆ ಹಾಕಿ 2019ರ ಏಪ್ರಿಲ್‍ನಲ್ಲಿ ಅರಣ್ಯ ಇಲಾಖೆಗೆ ವರದಿ ಸಲ್ಲಿಸಿದೆ. ಆ ವರದಿಯಲ್ಲಿ ಅಂದಿನ ಬಂಡೀಪುರದ ಸಿಎಫ್ ಅಂಬಾಡಿ ಮಾಧವ್ ಅವರ ನಿರ್ಲಕ್ಷ್ಯ, ಕರ್ತವ್ಯ ಲೋಪ, ಬೆಂಕಿ ತಡೆರೇಖೆ ನಿರ್ಮಿಸದೇ ಇರುವುದೇ ಅಪಾರ ಪ್ರಮಾಣದ ವನ್ಯ ಸಂಪತ್ತು ಭಸ್ಮವಾಗಲು ಕಾರಣವಾಗಿದೆ ಎಂದು ಆರೋಪಿ ಸಲಾಗಿದೆ. ಅಲ್ಲದೇ ಸಿಸಿಎಫ್ ಆಗಿ ಮುಂಬಡ್ತಿ ಪಡೆದು ಮೈಸೂರು ವಲಯಕ್ಕೆ
ವರ್ಗಾವಣೆಯಾಗಿದ್ದರೂ, ಪ್ರಭಾವ ಬಳಸಿ ಬಂಡೀಪುರದ ಸಿಎಫ್ ಆಗಿ ಅಂಬಾಡಿ ಮಾಧವ್ ಮುಂದುವರೆದಿದ್ದರು. ಇದರಿಂದ ಸಮರ್ಥವಾಗಿ ಕೆಲಸ ನಿರ್ವಹಿಸಲಾಗದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ: ಬಂಡೀಪುರ ಕಾಡ್ಗಿಚ್ಚು ಹಿನ್ನೆಲೆಯಲ್ಲಿ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. 4 ತಿಂಗಳ ಹಿಂದೆಯೇ ವರದಿ ನೀಡಿದ್ದರೂ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿಹಾಕುವ ಸಂಚು ನಡೆಯುತ್ತಿದೆ. 20 ಸಾವಿರ ಎಕರೆ ಅರಣ್ಯ ಪ್ರದೇಶ ನಾಶವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಹಲವು ಕಡೆ ಬೆಂಕಿತಡೆ ರೇಖೆ ಮಾಡದಿರುವ ಬಗ್ಗೆಯೂ ವರದಿಯಲ್ಲಿ ತಿಳಿಸಲಾಗಿದ್ದು, ಸುಮಾರು ಒಂದೂವರೆ ಕೋಟಿಗೂ ಅಧಿಕ ಮೊತ್ತದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ತಪ್ಪಿತಸ್ಥ ಒಬ್ಬರು ಎಪಿಸಿಸಿಎಫ್, ಸಿಎಫ್ ಅಂಬಾಡಿ ಮಾದವ್, ಎಸಿಎಫ್ ರವಿಕುಮಾರ್, ನಾಲ್ವರು ಆರ್‍ಎಫ್‍ಓಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ತಿಳಿಸಲಾಗಿದೆ. ಆದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಕರಣ ಮುಚ್ಚಿಹಾಕಲು ವಿಚಕ್ಷಣದಳಕ್ಕೆ ಪತ್ರ ಬರೆದಿರುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ. ನಿವೃತ್ತಿಯಾಗಿರುವ ಸಿಎಫ್ ಅಂಬಾಡಿ ಮಾದವ್ ಅವರಿಗೆ ನಿವೃತ್ತಿ ಭತ್ಯೆ ನೀಡಿ ಅವರನ್ನು ಶಿಕ್ಷೆಯಿಂದ ಪಾರು ಮಾಡಲು ಮೇಲಾಧಿಕಾರಿಗಳು ಸಂಚು ನಡೆಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತೆ ಮುಂದುವರೆಯುತ್ತದೆ. ಕೂಡಲೇ ಶಿಸ್ತುಕ್ರಮ ಕೈಗೊಂಡು ತಪ್ಪಿತಸ್ಥರಿಂದ ನಷ್ಟದ ಹಣವನ್ನು ಭರಿಸಿಕೊಳ್ಳುವುದಕ್ಕೆ ಕ್ರಮಕೈಗೊಳ್ಳಬೇಕು ಎಂದು ಚಾಮರಾಜನಗರ ಮಾಜಿ ವೈಲ್ಡ್‍ಲೈಫ್ ವಾರ್ಡನ್, ಎಂ.ಎನ್.ನವೀನ್‍ಕುಮಾರ್ ತಿಳಿಸಿದ್ದಾರೆ.
ಸೌಲಭ್ಯ ತಡೆ ಹಿಡಿಯಿರಿ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಫೆಬ್ರವರಿ ತಿಂಗಳಲ್ಲಿ ಹಿಂದೆಂದೂ ಕಾಣದಂತಹ ಕಾಡ್ಗಿಚ್ಚು ಸಂಭವಿಸಿದೆ. ಅಪಾರ ಪ್ರಮಾಣದ ಸಂಪತ್ತು ನಾಶವಾಗಿದೆ. ಇದಕ್ಕೆ ಪ್ರಮುಖ ಕಾರಣ ಅಂದಿನ ಸಿಎಫ್ ಅಂಬಾಡಿ ಮಾಧವ್ ಅವರ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರದ ಮನಸ್ಥಿತಿಯೇ ಕಾರಣವಾಗಿದೆ. ತನಿಖಾ ವರದಿಯಲ್ಲಿ ಈ ಸಂಬಂಧ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಬಗ್ಗೆ ಉಲ್ಲೇಖಿಸಿ ನಷ್ಟದ ಪ್ರಮಾಣವನ್ನು ಅಂದಿನ ಸಿಎಫ್ ಅವರಿಂದ ಭರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಆದರೆ ವರದಿ ಸಲ್ಲಿಕೆಯಾಗಿ 4 ತಿಂಗಳು ಕಳೆದರೂ, ಇದುವರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಸಿಸಿಎಫ್ ಆಗಿ ಮುಂಬಡ್ತಿ ಪಡೆದಿದ್ದರೂ, ಭ್ರಷ್ಟಾಚಾರ ನಡೆಸುವ ಏಕೈಕ ಕಾರಣದಿಂದ ಸಿಎಫ್ ಹುದ್ದೆಯನ್ನು ಹೆಚ್ಚುವರಿಯಾಗಿ ತನ್ನ ಬಳಿಯೇ ಇಟ್ಟುಕೊಂಡಿದ್ದರು. ಬೆಂಕಿ ತಡೆ ರೇಖೆ ನಿರ್ಮಿಸದೇ ಹಣ ದುರುಪಯೋಗ ಮಾಡಿಕೊಂಡ ಫಲವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಬೆಂಕಿ ವ್ಯಾಪಿಸಿತು. ಇದೀಗ ನಿವೃತ್ತಿಯಾಗಿರುವ ಅಂಬಾಡಿ ಮಾಧವ್ ಅವರ ನಿವೃತ್ತಿ ಸೌಲಭ್ಯವನ್ನು ತಡೆ ಹಿಡಿಯಬೇಕು ಹಾಗೂ ನಷ್ಟವನ್ನು ಭರಿಸಿಕೊಳ್ಳಬೇಕು. -ಜೋಸೆಫ್ ಹೂವರ್, ಪರಿಸರ ತಜ್ಞ