ಗಜರಾಜಗಿರಿ ಬೆಟ್ಟದಲ್ಲಿ ಭಾರೀ ಬಿರುಕು!
ಮೈಸೂರು

ಗಜರಾಜಗಿರಿ ಬೆಟ್ಟದಲ್ಲಿ ಭಾರೀ ಬಿರುಕು!

September 9, 2019

ಮಡಿಕೇರಿ, ಸೆ.8(ಪ್ರಸಾದ್)- ಭಾಗಮಂಡಲದ ಗಜರಾಜಗಿರಿ ಬೆಟ್ಟದಲ್ಲಿ ಭಾರೀ ಬಿರುಕು ಕಾಣಿಸಿ ಕೊಂಡಿದ್ದು, ಇಲ್ಲಿನ ಜನರಲ್ಲಿ ಆತಂಕ ಮೂಡಿ ಸಿದೆ. ಬ್ರಹ್ಮಗಿರಿ ಬೆಟ್ಟಶ್ರೇಣಿಯ ಬ್ರಹ್ಮಗಿರಿ, ಅಗ್ನಿಗಿರಿ, ವಾಯುಗಿರಿ ಮತ್ತು ಗಜರಾಜಗಿರಿ ಎಂಬ 4 ಬೆಟ್ಟದ ತಪ್ಪಲಿನಿಂದ ಸುತ್ತುವರಿದಿರುವ ಪ್ರದೇಶದಲ್ಲಿ ಕಾವೇರಿ ಮಾತೆ ನೆಲೆ ನಿಂತಿದ್ದು, ಈ ಭಾಗದ ಗಜರಾಜಗಿರಿ ಬೆಟ್ಟ ಪ್ರದೇಶದಲ್ಲಿ ಭಾರಿ ಮಳೆಗೆ ಬಿರುಕು ಮೂಡಿದೆ.

ಆಗಸ್ಟ್‍ನಲ್ಲಿ ಸುರಿದ ಮಳೆಗೆ ತಲಕಾವೇರಿಗೆ ಪ್ರವೇಶಿಸುವ ವಾಹನ ಪಾರ್ಕಿಂಗ್ ಸ್ಥಳದ ಮುಖ್ಯ ದ್ವಾರದಲ್ಲಿಯೇ ಭೂ ಕುಸಿತ ಉಂಟಾಗಿದ್ದು, ಇಲ್ಲಿಂದ 200 ಮೀಟರ್ ಎತ್ತರದ ಪ್ರದೇಶದಲ್ಲಿ ಹೊಸದಾಗಿ ಮತ್ತೆ ಬಿರುಕುಗಳು ಕಾಣಿಸಿಕೊಂಡಿವೆ. ಮಾತ್ರವ ಲ್ಲದೇ ಈ ಭೂ ಕುಸಿತವಾದ ಸ್ಥಳದಲ್ಲಿ ನೀರು ಚಿಮ್ಮು ತ್ತಿದ್ದು, ಶಾಶ್ವತ ಪರಿಹಾರ
ಕಾಮಗಾರಿ ನಡೆಸದೇ ಇದ್ದಲ್ಲಿ ಬ್ರಹ್ಮಗಿರಿ ಬೆಟ್ಟಕ್ಕೆ ಉಳಿಗಾಲವಿಲ್ಲ ಎಂಬ ಆತಂಕ ಸೃಷ್ಟಿಯಾಗಿದೆ. ಒಂದು ವೇಳೆ ಬ್ರಹ್ಮಗಿರಿ ಬೆಟ್ಟದಲ್ಲಿ ಪ್ರಾಕೃತಿಕ ವಿಕೋಪಗಳು ಎದುರಾದರೆ ತಲಕಾವೇರಿ ಕ್ಷೇತ್ರ ತನ್ನ ವರ್ಚಸನ್ನು ಕಳೆದುಕೊಳ್ಳಲಿದೆ ಎಂಬ ಆತಂಕ ಭಕ್ತರಲ್ಲಿ ಕಾಡುತ್ತಿದೆ.

ಇಂಗು ಗುಂಡಿ, ರಸ್ತೆ ಬಿರುಕಿನಿಂದ ಆತಂಕ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಿನದಿಂದ ದಿನಕ್ಕೆ ಈ ಬಿರುಕುಗಳ ಗಾತ್ರ ಹೆಚ್ಚಳವಾಗುತ್ತಿದ್ದು, ಬೆಟ್ಟ ತಪ್ಪಲಿನಲ್ಲಿ ನೆಲೆ ನಿಂತಿರುವ 4 ಅರ್ಚಕ ಕುಟುಂಬಗಳಿಗೆ ಕಂಟಕ ಎದುರಾಗಿದೆ.

ಬ್ರಹ್ಮಗಿರಿ ಬೆಟ್ಟದ ಮೇಲೆಲ್ಲ ಅರಣ್ಯ ಇಲಾಖೆಯಿಂದ ಅಂದಾಜು 4 ಅಡಿ ಅಗಲ, 5 ಅಡಿ ಆಳದ ನೂರಾರು ನೀರಿನ ಇಂಗು ಗುಂಡಿಗಳನ್ನು ತೆಗೆಯಲಾಗಿದ್ದು, ಪ್ರಸ್ತುತ ಈ ಗುಂಡಿಗಳು ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ಮೇಲೆ ಜಲ ಸೃಷ್ಟಿಯಾಗಿ ಬಿರುಕುಗಳು ಕಾಣಿಸಿಕೊಂಡಿದ್ದು, ಸಂಪೂರ್ಣ ಬೆಟ್ಟವೇ ಕುಸಿಯುವ ಆತಂಕ ಎದುರಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂಗು ಗುಂಡಿಗಳನ್ನು ತೆಗೆಯಲು ಬೃಹತ್ ಹಿಟಾಚಿ ಯಂತ್ರಗಳನ್ನು ಬಳಸಲಾಗಿದ್ದು, ಬೆಟ್ಟಕ್ಕೆ ತೆರಳಲು ರಸ್ತೆಯನ್ನು ನಿರ್ಮಿಸÀಲಾಗಿದೆ. ಈ ರಸ್ತೆಗಳಲ್ಲಿ ಬೃಹತ್ ಬಿರುಕುಗಳು ಕಾಣಿಸಿಕೊಂಡಿದ್ದು, ಮಳೆ ನೀರು ಇವುಗಳ ಒಳಗೆ ಸರಾಗವಾಗಿ ನುಗ್ಗುತ್ತಿವೆ. ಇಂಗು ಗುಂಡಿಗಳಲ್ಲಿ ನೀರಿನ ಒತ್ತಡ ಮತ್ತು ಬೆಟ್ಟದ ಮೇಲೆ ನೀರು ನಿಂತಿರುವುದರಿಂದ ಸಹಜವಾಗಿಯೇ ಬ್ರಹ್ಮಗಿರಿ ಬೆಟ್ಟ ಕುಸಿಯುವ ಸ್ಥಿತಿಗೆ ಬಂದು ತಲುಪಿದೆ. ಈ ಹಿಂದೆ ಇಂತಹ ಇಂಗು ಗುಂಡಿ ಯೋಜನೆಗಳನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೂ ಮಾಡಲಾಗಿದೆ ಎನ್ನಲಾಗಿದ್ದು, ಇದೇ ಯೋಜನೆಯನ್ನು ಬ್ರಹ್ಮಗಿರಿಯಲ್ಲಿ ಅರಣ್ಯ ಇಲಾಖೆ ಜಾರಿಗೊಳಿಸಿದೆ. ಮೈಸೂರಿನ ಮಳೆಯ ಪ್ರಮಾಣ ಮತ್ತು ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟಕ್ಕೆ ವಾರ್ಷಿಕವಾಗಿ ಸುರಿಯುವ ಮಳೆಗೆ ಅಜಗಜಾಂತರ ವ್ಯತ್ಯಾಸವಿದ್ದರೂ ಅರಣ್ಯ ಇಲಾಖೆ ಇದನ್ನು ಗಣನೆಗೆ ತೆಗೆದುಕೊಳ್ಳದೇ ಬ್ರಹ್ಮಗಿರಿ ಬೆಟ್ಟದಲ್ಲಿ ಅರಣ್ಯೀಕರಣ ಮಾಡಲು ಹೊರಟಿದ್ದು ಈ ಅವಾಂತರಕ್ಕೆ ಕಾರಣ ಎನ್ನುವುದು ಭಾಗಮಂಡಲ ಸ್ಥಳೀಯ ನಿವಾಸಿಗಳ ಆರೋಪವಾಗಿದೆ.

ಅಧಿಕಾರಿಗಳ ಭೇಟಿ, ಪರಿಶೀಲನೆ: ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನೆÀ್ನಲೆಯಲ್ಲಿ ಮಡಿಕೇರಿ ತಹಶೀಲ್ದಾರ್ ಮಹೇಶ್, ಕಂದಾಯ ಇಲಾಖೆ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಡಿಎಫ್‍ಓ ಪ್ರಭಾಕರನ್ ಮತ್ತು ಸಿಬ್ಬಂದಿಗಳು ಬಿರುಕು ಬಿಟ್ಟ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಬೆಟ್ಟದ ತಪ್ಪಲಿನಲ್ಲಿ ತಲಕಾವೇರಿ ದೇವಾಲ ಯದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಮತ್ತು ಇತರ ಅರ್ಚಕರ ವಸತಿಗಳಿದ್ದು, ಮಳೆ ಇದೇ ರೀತಿಯಲ್ಲಿ ಮುಂದುವರಿದರೆ ಬೆಟ್ಟ ಕುಸಿಯುವ ಸಾಧ್ಯತೆಯಿದೆ. ಈ ಹಿನೆÀ್ನಲೆಯಲ್ಲಿ ತಾತ್ಕಾಲಿಕವಾಗಿ ಅರ್ಚಕರು ರಾತ್ರಿ ವೇಳೆಯಲ್ಲಿ ತಮ್ಮ ಮನೆಗಳನ್ನು ತೊರೆಯುವಂತೆ ತಹಶೀಲ್ದಾರ್ ಮಹೇಶ್ ಮತ್ತು ಡಿಎಫ್‍ಓ ಪ್ರಭಾಕರನ್ ಅವರು ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರಲ್ಲಿ ಮನವಿ ಮಾಡಿದ್ದಾರೆ.

ಬಿರುಕು ಬಿಟ್ಟ ಪ್ರದೇಶದ ಕೆಳಭಾಗ ಕೆಲವು ಪೂಜಾ ಸಾಮಾಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಿದ್ದು ಈ ಅಂಗಡಿಗಳನ್ನು ಕೂಡ ತಾತ್ಕಾಲಿಕವಾಗಿ ಬಂದ್ ಮಾಡುವಂತೆ ತಹಶೀಲ್ದಾರ್ ಮಹೇಶ್ ಸೂಚಿಸಿದರು. ತಲಕಾವೇರಿ ಪುಣ್ಯ ಕ್ಷೇತ್ರಕ್ಕೆ ಭಕ್ತರು ಕೂಡ ಆಗಮಿಸುತ್ತಿದ್ದು, ಪೊಲೀಸ್ ಇಲಾಖೆ ಮೂಲಕ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿಗಳು ಈ ಹಿಂದೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಈ ವರದಿಯನ್ನು ಜಿಲ್ಲಾಡಳಿತ ಅನುಷ್ಠಾನಕ್ಕೆ ತರಲಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

Translate »