ದ್ವಿತೀಯ ಪಿಯು ಪರೀಕ್ಷೆ ಆರಂಭ: ಮೊದಲ ದಿನ ಸುಸೂತ್ರ
ಮೈಸೂರು

ದ್ವಿತೀಯ ಪಿಯು ಪರೀಕ್ಷೆ ಆರಂಭ: ಮೊದಲ ದಿನ ಸುಸೂತ್ರ

March 5, 2020

ಮೈಸೂರು,ಮಾ.4(ಎಂಟಿವೈ)- ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯು ಮೊದಲ ದಿನ ವಾದ ಬುಧವಾರ ಮೈಸೂರು ನಗರದ 26 ಕೇಂದ್ರಗಳು ಸೇರಿದಂತೆ ಜಿಲ್ಲೆಯ 50 ಕೇಂದ್ರ ಗಳಲ್ಲಿ ಬಲು ಸುಸೂತ್ರವಾಗಿ ನಡೆಯಿತು. ವಿದ್ಯಾರ್ಥಿಗಳು ಇತಿಹಾಸ, ಬೇಸಿಕ್ ಮ್ಯಾಥ್ಸ್ (ಮೂಲ ಗಣಿತ) ಮತ್ತು ಭೌತಶಾಸ್ತ್ರದ ಪರೀ ಕ್ಷೆಗೆ ಸರಾಗವಾಗಿಯೇ ಉತ್ತರಿಸಿದರು.

ಬುಧವಾರ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30 ರವರೆಗೆ ಬಿಗಿಭದ್ರತೆಯಲ್ಲಿ ಪರೀಕ್ಷೆ ನಡೆಯಿತು. ಮಾ.23ರವರೆಗೂ ಪರೀಕ್ಷೆ ನಡೆಯಲಿದೆ.

ಅಕ್ರಮ ತಡೆಗಾಗಿ ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಭದ್ರತೆ, ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಆರಂಭಕ್ಕೂ 15 ನಿಮಿಷ ಮುನ್ನವೇ ವಿದ್ಯಾರ್ಥಿಗಳು ಕೊಠಡಿ ಪ್ರವೇಶಿಸಬೇಕಿದೆ. ವಿದ್ಯಾರ್ಥಿಗಳು ಧರಿಸಿದ್ದ ಜರ್ಕಿನ್, ಸ್ವೆಟರ್ ಬಿಚ್ಚಿಸಿ ಪರೀಕ್ಷಾ ಕೊಠಡಿಗೆ ತೆರಳಲು ಅವಕಾಶ ನೀಡಲಾಯಿತು.

ಪೋಷಕರ ದಿಗಿಲು: ಮೈಸೂರಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳನ್ನು ಪೋಷಕರೇ ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದರು. ಕೆಲವೆಡೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಹೋಗುವಾಗ ಕೆಲ ಪೋಷಕರು ಬಹಳ ಭಾವುಕರಾಗಿದ್ದರು. ಕೆಲವರು ಕಣ್ಣೀರಿಟ್ಟರು. ಇದನ್ನು ಕಂಡ ಇತರೆ ಪೋಷಕರು ಕಣ್ಣೀರಿಟ್ಟ ಪೋಷಕರನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನವಿದು ಎಂದು ಅಸಮಾಧಾನ ಹೊರಹಾಕಿದರು.

ಸ್ಕ್ವಾಡ್: ಪರೀಕ್ಷಾ ಅಕ್ರಮ ತಡೆಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಟ್ಟಿಂಗ್ ಮತ್ತು ಸಂಚಾರಿ ಸ್ಕ್ವಾಡ್ ಗಳನ್ನು ರಚಿಸಲಾಗಿತ್ತು. ಪ್ರತಿ ಕೊಠಡಿಗೂ ಈ ತಪಾ ಸಣಾ ತಂಡದ ಸದಸ್ಯರು ಭೇಟಿ ನೀಡಿ ಪರಿಶೀಲಿಸಿ ದರು. ಡಿಡಿಪಿಯು ಜಿ.ಆರ್.ಗೀತಾ ಅವರೂ ವಿವಿಧ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ ದರು. ಮೈಸೂರು ಜಿಲ್ಲೆಯಲ್ಲಿ ಈ ಬಾರಿ 17,266 ಬಾಲಕರು, 17738 ಬಾಲಕಿಯರು (ಒಟ್ಟು 35,004 ವಿದ್ಯಾ ರ್ಥಿಗಳು) ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆದಿದ್ದರು. ಅವರಲ್ಲಿ 28,813 ಹೊಸ ವಿದ್ಯಾರ್ಥಿಗಳು, 4,668 ಪುನ ರಾವರ್ತಿತ ವಿದ್ಯಾರ್ಥಿಗಳು, 1,523 ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳಿದ್ದಾರೆ.

ಕಲಾ ವಿಭಾಗದ 9,792, ವಿಜ್ಞಾನ ವಿಭಾಗದ 11,650, ವಾಣಿಜ್ಯ ವಿಭಾಗದ 13,562 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ದೃಷ್ಟಿದೋಷವುಳ್ಳ 56, ಕಲಿಕಾ ನ್ಯೂನತೆಯ 9, ವಿಶೇಷ ಚೇತನರಾದ 16 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಆನ್‍ಲೈನ್ ಡೇಟಾ ಎಂಟ್ರಿ: ಪಿಯು ಪರೀಕ್ಷಾ ಪದ್ಧತಿಯಲ್ಲಿ ಈ ಬಾರಿ ಕೆಲವು ಹೊಸ ನಿಯಮಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಹಾಳೆ ನೀಡುವುದಕ್ಕೆ ಅವಕಾಶವಿಲ್ಲ. ಇದರ ಬದಲು ಉತ್ತರ ಬರೆಯಲು 40 ಪುಟಗಳ ಹೊತ್ತಿಗೆ ಸಿದ್ಧಪಡಿಸಿ ನೀಡಲಾಗಿದೆ. ಮಧ್ಯಾಹ್ನ 1.30ಕ್ಕೆ ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಯನ್ನು ಸಂಗ್ರಹಿಸಿ, ಬಿಗಿ ಭದ್ರತೆಯಲ್ಲಿ ಖಜಾನೆಗೆ ಸಾಗಿಸಲಾಯಿತು. ಖಜಾನೆಗೆ ಬಿಗಿಭದ್ರತೆಯನ್ನೂ ಒದಗಿಸಲಾಗಿದೆ. ಉತ್ತರ ಪತ್ರಿಕೆ ಸಾಗಿಸಿದ ಬಳಿಕ ಪ್ರತಿ ಕೇಂದ್ರದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜ ರಾಗಿದ್ದರು, ಎಷ್ಟು ಮಂದಿ ಗೈರು ಎಂಬ ಮಾಹಿತಿಯನ್ನು ಆನ್‍ಲೈನ್ ಮೂಲಕ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಡೇಟಾ ಎಂಟ್ರಿ ಮಾಡಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಸರ್ವರ್ ಕ್ರಾಷ್ ಆಗಿತ್ತು. ಹಾಗಾಗಿ, ಸಂಜೆ 5ರವರೆಗೂ ಹಾಜರು-ಗೈರು ಹಾಜರು ವಿದ್ಯಾರ್ಥಿಗಳ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ.

ಪರೀಕ್ಷೆ ಆರಂಭವಾದ ಗಂಟೆಯಲ್ಲೇ ಸೋರಿಕೆ: ಎಲ್ಲಾ ಅಗತ್ಯ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಭೌತಶಾಸ್ತ್ರ ವಿಷಯದ ಪರೀಕ್ಷೆ ಆರಂಭವಾಗಿತ್ತು. ಪರೀಕ್ಷೆ ಆರಂಭವಾದ 1 ಗಂಟೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿದ ಬೆನ್ನಲ್ಲೇ ಯಾರೋ ಕಿಡಿಗೇಡಿಗಳು ಮೊಬೈಲ್‍ನಲ್ಲಿ ಫೆÇೀಟೋ ತೆಗೆದು ಲೀಕ್ ಮಾಡಿದ್ದಾರೆ ಎನ್ನಲಾಗಿದೆ. ಈ ಕೃತ್ಯದಲ್ಲಿ ಕಾಲೇಜು ಸಿಬ್ಬಂದಿಯ ಕೈವಾಡವಿದೆ ಎಂದು ಶಂಕೆ ವ್ಯಕ್ತವಾಗಿದೆ. ಸೋರಿಕೆಯಾದ ಕೆಲವೇ ನಿಮಿಷಗಳಲ್ಲಿ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪರೀಕ್ಷಾ ಕೇಂದ್ರ ಸುತ್ತ ಬಿಗಿ ಭದ್ರತೆ ಇದ್ದರೂ ಸಹ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.

Translate »