ಮೈಸೂರು ಜಿಲ್ಲೆಯಲ್ಲಿ ರಾಹುಲ್ ಗಾಂಧಿಐಕ್ಯತಾ ಯಾತ್ರೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ರಾಹುಲ್ ಗಾಂಧಿಐಕ್ಯತಾ ಯಾತ್ರೆ

October 2, 2022

ಗುಂಡ್ಲುಪೇಟೆ/ನಂಜನಗೂಡು, ಅ.1-ಎಐಸಿಸಿ ನಾಯಕ ರಾಹುಲ್ ಗಾಂಧಿಯವರ `ಭಾರತ ಐಕ್ಯತಾ ಯಾತ್ರೆ’ಯು ರಾಜ್ಯದಲ್ಲಿ ಎರಡನೇ ದಿನವಾದ ಇಂದು ಗುಂಡ್ಲುಪೇಟೆ ತಾಲೂಕು ತೊಂಡವಾಡಿ ಗೇಟ್‍ನಿಂದ ಆರಂಭವಾಯಿತು. ಇಂದು ಸಂಜೆ ನಂಜನಗೂಡಿನ ತಾಂಡವಪುರದಲ್ಲಿರುವ ಎಂಐಟಿ ಕಾಲೇಜಿನಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಿದ್ದಾರೆ.

ಶುಕ್ರವಾರ ಬೇಗೂರಿನಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್ ಗಾಂಧಿಯವರು ಶನಿವಾರ ಬೆಳಗ್ಗೆ 6.30ಕ್ಕೆ ಬೆಳಚವಾಡಿ ಗೇಟ್‍ನಿಂದ ಪಾದಯಾತ್ರೆ ನಡೆಸು ವುದಾಗಿ ನಿಗದಿಯಾಗಿತ್ತು. ಆದರೆ ಮಳೆ ಬಂದ ಕಾರಣ ದಿಂದಾಗಿ ಒಂದು ಗಂಟೆ ತಡವಾಗಿ ಬೆಳಚವಾಡಿ ಗೇಟ್ ಬದಲು ತೊಂಡವಾಡಿ ಗೇಟ್‍ನಿಂದ ಪಾದಯಾತ್ರೆ ನಡೆಸಲು ನಿರ್ಧರಿಸಲಾಯಿತು.

ಬೇಗೂರಿನಿಂದ ಕಾರವಾನ್‍ನಲ್ಲಿ ತೊಂಡವಾಡಿ ಗೇಟ್‍ಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ಶಾಸಕ ಡಾ.ಯತೀಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ಧ್ರುವನಾರಾಯಣ್, ಸಲೀಂ ಅಹಮದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸ್ವಾಗತಿಸಿದರು. ಅಲ್ಲಿಂದ ರಾಹುಲ್ ಗಾಂಧಿಯವರೊಂ ದಿಗೆ ಕಾಂಗ್ರೆಸ್‍ನ ಹಿರಿಯ ಮುಖಂಡರು ಸೇರಿದಂತೆ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಹೆಜ್ಜೆ ಹಾಕಿದರು. ಸೇವಾ ದಳದವರು ಕಾಂಗ್ರೆಸ್ ಧ್ವಜ ಹಿಡಿದು ಸಾಗಿದರೆ, ಮಂಗಳವಾದ್ಯ, ಬ್ಯಾಂಡ್ ವಾದನ, ಆದಿವಾಸಿಗಳ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಚಂಡೆ ಮದ್ದಳೆ, ನಗಾರಿ, ಗಾರುಡಿ ಗೊಂಬೆ, ಗೊರವರ ಕುಣಿತ ಸೇರಿದಂತೆ ವಿವಿಧ ಸಾಂಸ್ಕøತಿಕ ಕಲಾ ತಂಡಗಳು ಯಾತ್ರೆಗೆ ಮೆರಗು ನೀಡಿದವು.

ತೊಂಡವಾಡಿ ಗೇಟ್‍ನಿಂದ ಹೊರಟ ಪಾದಯಾತ್ರೆಯು ಹಿರೀಕಾಟಿ ಗೇಟ್, ಯಲಚಕೆರೆ ಗೇಟ್, ಸಿಂಧುವಳ್ಳಿಪುರ, ಮುದ್ದನಹಳ್ಳಿ ಗೇಟ್ ಮೂಲಕ ಕಳಲೆ ಗೇಟ್ ತಲುಪಿತು. ಈ ಮಧ್ಯೆ ಸಿಂಧುವಳ್ಳಿಯ ಸುರುಚಿ ಕಾರ್ಖಾನೆಯಲ್ಲಿ ರಾಹುಲ್ ಗಾಂಧಿ ಹಾಗೂ ಮುಖಂಡರು ಉಪಹಾರ ಸೇವಿಸಿದರು. ಕಳಲೆ ಗೇಟ್ ಬಳಿ ಹಾಕಲಾಗಿದ್ದ ತಾತ್ಕಾಲಿಕ ಟೆಂಟ್‍ನಲ್ಲಿ 30 ಸಾವಿರ ಮಂದಿಗೆ ಉಪಹಾರಕ್ಕಾಗಿ ವಾಂಗೀಬಾತ್, ಮಧ್ಯಾಹ್ನದ ಊಟಕ್ಕೆ ಅನ್ನ-ಸಾಂಬಾರ್, ಹಪ್ಪಳ ಹಾಗೂ ಮೈಸೂರ್‍ಪಾಕ್ ವ್ಯವಸ್ಥೆ ಮಾಡಲಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಾರ್ಯಕರ್ತರಿಗೆ ಊಟ ಬಡಿಸುವ ಮೂಲಕ ಗಮನ ಸೆಳೆದರು.
ಕಳಲೆ ಗೇಟ್‍ನಲ್ಲಿ ರಾಹುಲ್ ಗಾಂಧಿಯವರು ಊಟ ಮಾಡಿದ ನಂತರ ಮಧ್ಯಾಹ್ನ 2.30 ರಿಂದ 3.30ರವರೆಗೆ ರೈತ ಮುಖಂಡರು, ವಕೀಲರು, ಕಾರ್ಮಿಕರೂ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರೊಂದಿಗೆ ಸಂವಾದ ನಡೆಸಿದರು. ಈ ವೇಳೆ ರೈತ ಮುಖಂಡರು, ಕೃಷಿ ಚಟುವಟಿಕೆಗೆ ಬಳಸುವ ಯಂತ್ರೋಪಕರಣಗಳ ಬೆಲೆ ಏರಿಕೆ, ಕಬ್ಬಿಗೆ ವೈಜ್ಞಾನಿಕ ದರ ನಿಗದಿ, ಕೃಷಿ ಕಾಯಿದೆಗಳನ್ನು ರಾಜ್ಯದಲ್ಲಿ ರದ್ದುಪಡಿಸದಿರುವುದು, ಸ್ವಾಮಿನಾಥನ್ ವರದಿ ಜಾರಿಯಾಗದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ರಾಹುಲ್ ಗಾಂಧಿಯವರಿಗೆ ತಿಳಿಸಿದರು. ಇಂದಿನ ಪಾದಯಾತ್ರೆಯಲ್ಲಿ ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಹೆಚ್.ಡಿ.ಕೋಟೆ, ತಿ.ನರಸೀಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕನಕಪುರ, ರಾಮನಗರ, ಕೊಡಗು ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪಾದಯಾತ್ರೆ ಮಾರ್ಗದುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಕಾಂಗ್ರೆಸ್ ಹಾಗೂ ಭಾರತ ಐಕ್ಯತಾ ಯಾತ್ರೆಯ ಫ್ಲೆಕ್ಸ್‍ಗಳು ರಾರಾಜಿಸಿದವು. ಕಾರ್ಯಕರ್ತರು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಅವರ ಪರ ಘೋಷಣೆಗಳನ್ನು ಕೂಗಿದರು. ಪಾದಯಾತ್ರೆಯಲ್ಲಿ ಹಿರಿಯ ಮುಖಂಡರು ಮಾತ್ರವಲ್ಲದೆ, ಶಾಸಕರಾದ ಪ್ರಿಯಾಂಕ ಖರ್ಗೆ, ಡಾ. ಯತೀಂದ್ರ, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವರಾದ ಉಮಾಶ್ರೀ, ಮೋಟಮ್ಮ, ರೈತ ಮುಖಂಡ ಯೋಗೇಂದ್ರನಾಥ ಯಾದವ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್‍ರಾಜ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗುಂಡ್ಲುಪೇಟೆ ಕಾಂಗ್ರೆಸ್ ಮುಖಂಡರಾದ ಗಣೇಶ್ ಪ್ರಸಾದ್, ನಂಜುಂಡ ಪ್ರಸಾದ್ ಮುಂತಾದವರು ಭಾಗವಹಿಸಿದ್ದರು. ಮಾರ್ಗದುದ್ದಕ್ಕೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಪಾದಯಾತ್ರಿಗಳಿಗೆ ಮಜ್ಜಿಗೆ, ಪುಳಿಯೋಗರೆ, ಸಮೋಸಾ, ಕಬ್ಬಿನಹಾಲು, ಬಿಸ್ಕಟ್, ಹಣ್ಣುಗಳನ್ನು ವಿತರಿಸಿ ಉಪಚರಿಸಿದರು. ಸಂಜೆ 5.30ರ ವೇಳೆಗೆ ಪಾದಯಾತ್ರೆಯು ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರದ ಬಳಿ ಅಂತ್ಯಗೊಂಡಿತು. ರಾಹುಲ್ ಗಾಂಧಿ ತಾಂಡವಪುರ ಬಳಿಯ ಎಂಐಟಿ ಕಾಲೇಜು ಬಳಿ ವಾಸ್ತವ್ಯ ಹೂಡಿದ್ದಾರೆ.

Translate »