ಖ್ಯಾತ ಬಹುಭಾಷಾ ಗಾಯಕ ಸೋನು ನಿಗಮ್ ಗಾನಕ್ಕೆಮೈಮರೆತ ಯುವ ಪಡೆ
ಮೈಸೂರು

ಖ್ಯಾತ ಬಹುಭಾಷಾ ಗಾಯಕ ಸೋನು ನಿಗಮ್ ಗಾನಕ್ಕೆಮೈಮರೆತ ಯುವ ಪಡೆ

October 2, 2022

ಮೈಸೂರು, ಅ.1(ಎಂಕೆ)- ಮೇರೆ ಪ್ಯಾರ್ ಕನ್ನಡಿಗಾಸ್…. ಮಾತಿನ ಮೋಡಿ ಮೂಲಕ ಗಾನ ಆರಂಭಿಸಿದ ಬಹುಭಾಷಾ ಗಾಯಕ ಸೋನು ನಿಗಮ್ ಸವಿಗಾನಕ್ಕೆ ಮೈಮರೆತು ಕುಣಿದು ಕುಪ್ಪಿಳಿಸಿದ ಜನಸ್ತೋಮ…!

ಮೈಸೂರು ದಸರಾ ಮೆಗಾ ಇವೆಂಟ್ ‘ಯುವ ದಸರಾ’ದಲ್ಲಿ ಎತ್ತ ನೋಡಿದರೂ ಸಂಗೀತ ಸುಧೆಗೆ ಶಿಳ್ಳೆ-ಚಪ್ಪಾಳೆ ತಟ್ಟುವ, ಕೈಗಳನ್ನು ಗಾಳಿಯಲ್ಲಿ ತೇಲಿಸುವ, ನಿಂತಲ್ಲಿ ನಿಲ್ಲದ ಕಲಾ ಭಿಮಾನಿಗಳ ಸಾಗರಕ್ಕೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮನರಂಜನೆಯ ರಸದೌತಣ ನೀಡಿದರು.

ತಡವಾಗಿಯಾದರೂ ಕಾದು ಕುಳಿತ ಕಲಾರಸಿಕರಿಗೆ ಸಂಗೀತ ಸುಧೆ ಹರಿಸಿದ ಸೋನು ನಿಗಮ್, ನಾನ್‍ಸ್ಟಾಪ್ ಕನ್ನಡ, ಹಿಂದಿ ಹಾಡುಗಳನ್ನು ತಮ್ಮ ಅದ್ಭುತ ಕಂಠಸಿರಿಯಲ್ಲಿ ಉಣಬಡಿಸಿ ದರು. ‘ಮುಂಗಾರು ಮಳೆ’ ಚಿತ್ರದ ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೇ’, ‘ಉಲ್ಲಾಸ ಉತ್ಸಾಹ’ ಚಿತ್ರದ ‘ನೀ ಸನಿಹಕೆ ಬಂದರೆ ಹೃದಯದ ಗತೀ ಏನು’, ‘ಗೆಳೆಯ’ ಚಿತ್ರ ‘ಈ ಸಂಜೆ ಯಾಕಾಗಿದೆ’, ಪುನೀತ್ ರಾಜ್‍ಕುಮಾರ್ ಅಭಿನಯದ ‘ಪರಮಾತ್ಮ’ ಚಿತ್ರದ ‘ಪರವಶನಾದೆನು ಅರಿಯುವ ಮುನ್ನವೇ’, ‘ಆಟೋಗ್ರಾಫ್’ ಚಿತ್ರದ ಏನಾಗಲೀ ಮುಂದೆ ಸಾಗು ನೀ’ ಸೇರಿದಂತೆ ಹಲವು ಕನ್ನಡ ಹಾಡುಗಳನ್ನು ಹಾಡಿ ಯುವ ಮನಸುಗಳು ಸಂಭ್ರಮಿಸುವಂತೆ ಮಾಡಿದರು.

ಹತ್ತಾರು ಹಿಂದಿ ಚಿತ್ರಗೀತೆಗಳನ್ನು ಹಾಡಿ, ಕುಣಿದು ತಮ್ಮೊಂ ದಿಗೆ ಇಡೀ ಜನಸ್ತೋಮವೇ ಕುಣಿದು ಕುಪ್ಪಳಿಸುವಂತೆ ಮಾಡಿ ದರಲ್ಲದೆ ಹಾಡಿನಲ್ಲಿ ಧ್ವನಿಗೂಡಿಸುವಂತೆಯೂ ಮೋಡಿ ಮಾಡಿ ದರು. ಸೋನು ನಿಗಮ್ ಹಾಡಿದ ಪ್ರತಿಯೊಂದು ಹಾಡಿಗೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಕಿಕ್ಕಿರಿದು ತುಂಬಿದ್ದ ಯುವ ಸಮೂಹ, ಮೊಬೈಲ್‍ನಲ್ಲಿ ಫೋಟೋ, ವೀಡಿಯೊಗಳನ್ನು ತೆಗೆದುಕೊಂಡು ಖುಷಿಪಟ್ಟರು. ಚೇರ್‍ಗಳ ಮೇಲೆ ನಿಂತು ನೆಚ್ಚಿನ ಗಾಯಕನಿಗೆ ಪ್ರೋತ್ಸಾಹ ನೀಡಿದರು.

ಮನಸ್ಸಿಗೆ ಚುಟು ಚುಟು ನೀಡಿದ ಶಮಿಕಾ: ನಂತರ ವೇದಿಕೆ ತನ್ನದಾಗಿಸಿಕೊಂಡ ಖ್ಯಾತ ಗಾಯಕಿ ಡಾ.ಶಮಿಕಾ ಮಲ್ನಾಡ್, ಯುವ ಮನಸುಗಳಿಗೆ ಚುಟು ಚುಟು ನೀಡಿದರು. ನೃತ್ಯದ ಮೂಲಕ ವೇದಿಕೆಗೆ ರಂಗು ನೀಡಿದ ಶಮಿಕಾ, ‘ಮಧುರಾ ಪಿಸು ಮಾತಿಗೆ, ಅಧರ ತುಸು ಪ್ರೀತಿಗೆ’ ಹಾಡನ್ನು ಹಾಡುತ್ತಾ
ಪ್ರೀತಿಯ ಅಲೆ ಎಬ್ಬಿಸಿದರು. ‘ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು ನಿನ್ನ ಕೈಲಾಡೋ ಗೊಂಬೆ ನಾನಯ್ಯ’, ‘ಜೋಕೆ ನಾನು ಬಳ್ಳಿಯ ಮಿಂಚು’, ‘ಸುತ್ತಮುತ್ತಲೂ ಸಂಜೆಗತ್ತಲೂ’, ‘ಸೇ ಸೇ ನನ್ನ ಪ್ರೀತ್ಸೆ’, ‘ಜಯ ಜಯ ಜಾಕೆಟ್ಟು, ಜಯನ ಗಂಡ ರಾಕೆಟ್ಟು’, ಎನ್ನುತ್ತಾ ವರ್ಣರಂಜಿತ ವೇದಿಕೆಯಲ್ಲಿ ಮಿಂಚು ಹರಿಸಿದರು.

ಧ್ರುವ ಸರ್ಜಾ ಮಿಂಚು: ‘ಯುವ ದಸರಾ’ ವೇದಿಕೆ ಆಗಮಿಸಿದ ಆಕ್ಸನ್ ಪ್ರಿನ್ಸ್ ಧ್ರುವ ಸರ್ಜಾ ಪಂಚಿಂಗ್ ಡೈಲಾಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಚಿರಂಜೀವಿ ಸರ್ಜಾ ಹಾಗೂ ಪುನೀತ್‍ರಾಜ್‍ಕುಮಾರ್ ಸ್ಮರಿಸುವ ಮೂಲಕ ಎಲ್ಲಾ ನಟರ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಯುವ ಗಾಯಕರ ಹಾಡು, ನೃತ್ಯ: ಸೋನು ನಿಗಮ್ ಆಗಮನಕ್ಕೂ ಮುನ್ನ ಯುವ ಗಾಯಕಿಯರಾದ ಪ್ರಿಯಾ, ಜೋಗಿ, ಗಾಯಕ ಪುರುಷೋತ್ತಮ್, ಬ್ರೋ ಗೌಡ ಹಾಡಿ, ಕುಣಿದು ರಂಜಿಸಿದರು. ‘ಯುವ ಸಂಭ್ರಮ’ದಲ್ಲಿ ಅಮೋಘ ನೃತ್ಯ ಪ್ರದರ್ಶನ ನೀಡಿದ್ದ ವಿವಿಧ ಕಾಲೇಜುಗಳ ಕಲಾತಂಡಗಳು ಯುವ ದಸರಾ ವೇದಿಕೆಯಲ್ಲೂ ಕಮಾಲ್ ಮಾಡಿದರು. ಕಡೆಯಲ್ಲಿ ಸರಿಗಮಪ ಖ್ಯಾತಿಯ ಗಾಯಕಿಯರಾದ ಸುಪ್ರೀಯಾ ಜೋಷಿ, ರಮ್ಯ ಹಾಗೂ ರೇಷ್ಮಾ ‘ಗಿಲಿಗಿಲಿ ಗಲ್ಲಕ್, ಕಾಲು ಗೆಜ್ಜೆ ಗಲಕ್’ ಹಾಡನ್ನು ಹಾಡಿ ಅಭಿಮಾನಿಗಳಿಂದ ಸ್ಟೆಪ್ ಹಾಕಿಸಿದರು. ಬಹುಭಾಷಾ ಗಾಯಕ ಸೋನು ನಿಗಮ್ ಹಾಗೂ ಖ್ಯಾತ ಗಾಯಕಿ ಶಮಿಕಾ ಮಲ್ನಾಡ್ ಅವರ ಸಂಗೀತ ಸವಿಯಲು ಬಂದಿದ್ದ ಅಪಾರ ಜನಸ್ತೋಮದಿಂದಾಗಿ ಗೇಟ್‍ನಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಮಹಾರಾಜ ಕಾಲೇಜು ಮೈದಾನದ ಒಳಗೆ ಹೋಗಲು ಹರಸಾಹಸ ಪಡುವಂತಾಗಿತ್ತು.

Translate »