ರಾಹುಲ್ ಪಾದಯಾತ್ರೆ ಜನರ ಪರವಾಗಿಯೇ ಹೊರತು ಸ್ವಾರ್ಥಕ್ಕಲ್ಲ
ಮೈಸೂರು

ರಾಹುಲ್ ಪಾದಯಾತ್ರೆ ಜನರ ಪರವಾಗಿಯೇ ಹೊರತು ಸ್ವಾರ್ಥಕ್ಕಲ್ಲ

September 19, 2022

ಮೈಸೂರು,ಸೆ.18(ಆರ್‍ಕೆಬಿ)-ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿರುವ ಭಾರತವನ್ನು ಒಗ್ಗೂಡಿಸುವ (ಭಾರತ್ ಜೋಡೋ) ಪಾದಯಾತ್ರೆ ಮೈಸೂರಿಗೆ ಬಂದಾಗ ಹೆಚ್ಚಿನ ಜನರು ಸೇರುವ ಮೂಲಕ ಯಶಸ್ವಿಗೊಳಿಸಿ, ರಾಹುಲ್ ಗಾಂಧಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಶಕ್ತಿ ತುಂಬುವಂತೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಮೈಸೂರಿನ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಭಾನುವಾರ ಮೈಸೂರು ನಗರ ಮತ್ತು ಗ್ರಾಮಾಂ ತರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತ ನಾಡಿದರು. ರಾಹುಲ್‍ಗಾಂಧಿ ಅವರು ಭಾರತವನ್ನು ಒಗ್ಗೂಡಿ ಸಲು ಕೈಗೊಂಡಿರುವ ಪಾದಯಾತ್ರೆ ಸಾಮಾನ್ಯ ಜನರ ಪರವಾಗಿ ಮಾಡುತ್ತಿದ್ದಾರೆಯೇ ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ದೇಶ ಜೋಡಿಸುವ ಇಂತಹ ಬೃಹತ್ ಪಾದಯಾತ್ರೆಯನ್ನು ಸ್ವಾತಂತ್ರ್ಯಾ ನಂತರ ಯಾವ ಪಕ್ಷದವರೂ ಮಾಡಿಲ್ಲ ಎಂದು ಹೇಳಿದರು.

ನರೇಂದ್ರ ಮೋದಿ 8 ವರ್ಷಗಳ ಆಡಳಿತದಲ್ಲಿ ತಳ ಸಮು ದಾಯ, ಮಧ್ಯಮ ವರ್ಗದ ಜನರು ನೆಮ್ಮದಿ ಇಲ್ಲದಂತಾಗಿದೆ. ಸಮಾಜದಲ್ಲಿ ಶಾಂತಿ ಇಲ್ಲ. ಧರ್ಮ ರಾಜಕಾರಣದ ಮೂಲಕ ದೇಶವನ್ನು ಒಡೆಯಲಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಯುವಕರಿಗೆ ಉದ್ಯೋಗವಿಲ್ಲ. ಉದ್ಯೋಗ ಪಡೆಯಲು ಲಂಚ ನೀಡಬೇಕಾದ ಪರಿಸ್ಥಿತಿ. ಬೆಲೆ ಏರಿಕೆ ಸಾಮಾನ್ಯ ಜನರು ಬದುಕು ಕಷ್ಟವಾಗಿದೆ ಇಂತಹ ಭ್ರಷ್ಟ, ಜನವಿರೋಧಿ ಸರ್ಕಾರದ ಬಗ್ಗೆ ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ಜನಜಾಗೃತಿಗೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ಮುಂದಿನ ಆರು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಬರಲಿದ್ದು, ಈ ಪಾದಯಾತ್ರೆ ನಮಗೆ ರಾಜಕೀಯ ಲಾಭ ತರಲಿದೆ. ಹಾಗಾಗಿ ರಾಹುಲ್‍ಗಾಂಧಿ ಪಾದಯಾತ್ರೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಬಂದಾಗ ಹೆಚ್ಚು ಜನರನ್ನು ಸೇರಿಸಬೇಕು. ಪ್ರತಿಯೊಬ್ಬ ಹಾಲಿ, ಮಾಜಿ ಶಾಸಕರು ಕನಿಷ್ಟ 5 ಸಾವಿರ ಜನರನ್ನು ಕರೆತರಲು ತಿಳಿಸಲಾಗಿದೆ ಎಂದು ಹೇಳಿದರು.

ಸಂವಿಧಾನ ವಿರೋಧ ಮತಾಂತರ ನಿಷೇಧ ಕಾಯ್ದೆ: ವಿಧಾನ ಪರಿಷತ್ತಿನಲ್ಲಿ ಪಾಸಾದ ಮತಾಂತರ ನಿಷೇಧ ಮಸೂದೆ ಸಂವಿಧಾನ ವಿರೋಧಿಯಾಗಿದೆ. ಆರ್ಟಿಕಲ್ 25 ಯಾವುದೇ ಧರ್ಮ ಪಾಲನೆ ಮಾಡುವ ಹಕ್ಕನ್ನು ಕೊಟ್ಟಿದೆ. ಅದರ ಉಲ್ಲಂಘನೆ ಮಾಡಲಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಈ ಕಾನೂನು ತರಲಾಗುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಜಾನ್ ರೋಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ತನ್ವೀರ್‍ಸೇಠ್, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಹೆಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಕಳಲೆ ಕೇಶವಮೂರ್ತಿ, ಆರ್.ಧರ್ಮಸೇನಾ, ಮುಖಂಡರಾದ ರವಿಶಂಕರ್, ಚಂದ್ರಮೌಳಿ, ಕೆ.ಮರೀಗೌಡ, ಎಂ.ಲಕ್ಷ್ಮಣ್, ಮಂಜುಲಾ ಮಾನಸ, ಬಿ.ಎಂ.ರಾಮು ಇನ್ನಿತರರು ಉಪಸ್ಥಿತರಿದ್ದರು.

Translate »