ಆಫ್ರಿಕಾದಿಂದ ಕರೆತಂದ 8 ಚೀತಾಗಳಿಗೆ ಪ್ರಧಾನಿ ಮೋದಿ ಸಂತಸದ ಸ್ವಾಗತ
News

ಆಫ್ರಿಕಾದಿಂದ ಕರೆತಂದ 8 ಚೀತಾಗಳಿಗೆ ಪ್ರಧಾನಿ ಮೋದಿ ಸಂತಸದ ಸ್ವಾಗತ

September 18, 2022

ಗ್ವಾಲಿಯರ್(ಮಧ್ಯಪ್ರದೇಶ), ಸೆ.17- ಭಾರತ ದಿಂದ ಮರೆಯಾಗಿದ್ದ ಚೀತಾಗಳು ಏಳು ದಶಕದ ನಂತರ ಸ್ವಾತಂತ್ರ್ಯ ಅಮೃತಮಹೋ ತ್ಸವದ ಸಂದರ್ಭದಲ್ಲಿ ಮರಳಿದ್ದು, ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಆಚರಣೆಯನ್ನೂ ವಿಶೇಷವಾಗಿಸಿದೆ. ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು 70 ವರ್ಷಗಳ ಹಿಂದೆ 1952ರಲ್ಲಿ ಘೋಷಿಸಲಾಗಿತ್ತು. ನಂತರ ಚೀತಾ ಸಂತತಿಯೇ ಕಾಣದಾಗಿತ್ತು. ಆದರೆ ಇದೀಗ ಪ್ರಧಾನಿ ಮೋದಿ ಅವರ 72ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ನೈರುತ್ಯ ಆಫ್ರಿಕಾದ ನಮೀ ಬಿಯಾ ದೇಶದಿಂದ ಎಂಟು ಚೀತಾಗಳು ಭಾರತಕ್ಕೆ ಶನಿವಾರ ಮರಳಿವೆ. ಅಂತರಖಂಡ `ಪ್ರಾಜೆಕ್ಟ್ ಚೀತಾ’ ಯೋಜನೆಯಡಿ 5 ಹೆಣ್ಣು ಹಾಗೂ 3 ಗಂಟು ಚೀತಾಗಳನ್ನು ವಿಶೇಷವಾಗಿ ಮಾರ್ಪಡಿಸಿರುವ ಬೋಯಿಂಗ್ ಜೆಟ್ ವಿಮಾನದಲ್ಲಿ ಕರೆತರಲಾಗಿದೆ. ನಮೀಬಿಯಾದಿಂದ ಮಧ್ಯಪ್ರದೇಶದ ಗ್ವಾಲಿಯರ್ ವಾಯುನೆಲೆಗೆ ಸುಮಾರು 10 ಗಂಟೆಗಳ ಪ್ರಯಾಣ ಪೂರೈಸಿದ ಜೆಟ್ ವಿಮಾನದಲ್ಲಿ ಮರದ ಪೆಟ್ಟಿಗೆಗಳಲ್ಲಿ ಕರೆತರಲಾದ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕೊಂಡೊಯ್ಯಲಾಯಿತು. ಚಿನೂಕ್ ಮತ್ತು ಎಂಐ ಕೆಟಗರಿ 2 ಹೆಲಿಕಾಪ್ಟರ್‍ಗಳಲ್ಲಿ 165 ಕಿಮೀ ದೂರದ ಶಿಯೋಪುರ್ ಜಿಲ್ಲೆ ಪಾಲ್ಪುರ್ ಗ್ರಾಮಕ್ಕೆ ಕರೆತಂದು, ಅಲ್ಲಿಂದ ರಸ್ತೆಯ ಮೂಲಕ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ(ಕೆಎನ್‍ಪಿ) ಕರೆತಂದದ್ದು ವಿಶೇಷ. ಇದಕ್ಕಾಗಿ ಭಾರೀ ಮಳೆ ನಡುವೆಯೂ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳ ಲಾಗಿತ್ತು. ರಾಷ್ಟ್ರೀಯ ಉದ್ಯಾನದಲ್ಲಿ ತಮ್ಮ ಜನ್ಮದಿನ ಆಚರಿಸಿಕೊಂಡ ಪ್ರಧಾನಿ ಮೋದಿ, ಇಂದು ಬೆಳಗ್ಗೆ 10.45ರ ವೇಳೆಯಲ್ಲಿ ಉದ್ಯಾನದ ಕ್ವಾರಂಟೈನ್ ಆವರಣಕ್ಕೆ ಚೀತಾಗಳನ್ನು ಬಿಡುಗಡೆ ಮಾಡಿ, ಅವುಗಳ ಓಡಾಟವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಸಂಭ್ರಮಿಸಿದರು. ಕುನೋ ಪಾರ್ಕ್‍ನಲ್ಲಿ ಚೀತಾಗಳಿಗೆ ವಿಶೇಷ ಆರೈಕೆಗೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 3 ತಿಂಗಳ ಕಾಲ ತೀವ್ರ ನಿಗಾದಲ್ಲಿಡಲಾಗುವುದು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಂಡ ಬಳಿಕ ಉದ್ಯಾನಕ್ಕೆ ಮುಕ್ತವಾಗಿ ಬಿಡಲಾಗುತ್ತದೆ. ಭಾರತದ ವನ್ಯಜೀವಿ ರಕ್ಷಣೆಯಲ್ಲಿ ಇದು ಸರ್ಕಾರದ ಹೊಸ ಪ್ರಯತ್ನವಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಂತರಖಂಡ ಪ್ರಾಣಿ ವಿನಿಮಯ ಯೋಜನೆ ಮಹತ್ವ ಪಡೆದುಕೊಂಡಿದೆ. ಮಾಂಸಾಹಾರಿ ವನ್ಯಜೀವಿಗಳನ್ನು ಹೀಗೆ ಸ್ಥಳಾಂತರ ಮಾಡಿರುವುದು ವಿಶ್ವದ ಮೊದಲ ದೊಡ್ಡ ಯೋಜನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »