ನಂಜನಗೂಡಲ್ಲಿ ಹಾಡಹಗಲೇ ಪಾರ್ಸಲ್ ಕೊಡುವ ನೆಪದಲ್ಲಿ  ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ
ಮೈಸೂರು

ನಂಜನಗೂಡಲ್ಲಿ ಹಾಡಹಗಲೇ ಪಾರ್ಸಲ್ ಕೊಡುವ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ

September 18, 2022

ನಂಜನಗೂಡು, ಸೆ.17- ಪಾರ್ಸಲ್ ಕೊಡುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತರು ಹಾಡಹಗಲೇ ಮಹಿಳೆ ಯೊಬ್ಬರನ್ನು ಕಟ್ಟಿಹಾಕಿ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ನಗರದ ರಾಮಸ್ವಾಮಿ ಲೇಔಟ್‍ನಲ್ಲಿ ನಡೆದಿದೆ. ರಾಮ ಸ್ವಾಮಿ ಲೇಔಟ್ ನಿವಾಸಿ ಶಂಭುಸ್ವಾಮಿ ಅವರ ಪತ್ನಿ ದಾಕ್ಷಾಯಿಣಿ ಚಿನ್ನಾಭರಣ ಕಳೆದು ಕೊಂಡವರಾಗಿದ್ದು, ದರೋಡೆಕೋರರು ಸುಮಾರು 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ವಿವರ: ವೃತ್ತಿಯಲ್ಲಿ ಶಿಕ್ಷಕರಾದ ಇವರ ಪತಿ ಶಂಭುಸ್ವಾಮಿ ಶಾಲೆಗೆ ತೆರಳಿದ್ದರು. ಬೆಳಗ್ಗೆ 8.40ರಲ್ಲಿ ಪಾರ್ಸಲ್ ಕೊಡುವ ನೆಪದಲ್ಲಿ ಬಂದ ಅಪರಿಚಿತರಿಬ್ಬರು ಮನೆಯ ಕಾಲಿಂಗ್‍ಬೆಲ್ ಒತ್ತಿದ್ದಾರೆ. ಬಾಗಿಲು ತೆಗೆದ ದಾಕ್ಷಾಯಿಣಿ ಅವರನ್ನು ಇಬ್ಬರೂ ಮನೆಯೊಳಗೆ ತಳ್ಳಿಕೊಂಡು ನುಗ್ಗಿ ಸೋಫಾ ಮೇಲೆ ಕೈ ಕಾಲು ಕಟ್ಟಿಹಾಕಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ, ಮೈ ಮೇಲಿದ್ದ ಮಾಂಗಲ್ಯ ಸರ, ಬಳೆ, ಉಂಗುರ, ಕಿವಿಯೋಲೆ ಕಸಿದಿದ್ದಾರೆ. ಅಲ್ಲದೇ ಬೀರುನಲ್ಲಿಟ್ಟಿದ್ದ ಮತ್ತೊಂದು ಜೊತೆ ಕೈಬಳೆ, ನೆಕ್ಲೆಸ್ ಸೇರಿದಂತೆ 200 ಗ್ರಾಂ ಚಿನ್ನ ಕಳ್ಳತನ ಮಾಡಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ಹಾರ್ಡ್‍ಡಿಸ್ಕ್‍ನೊಂದಿಗೆ ಪರಾರಿಯಾಗಿದ್ದಾರೆ.
ಸುದ್ದಿಗಾರರಿಗೆ ಮಾಹಿತಿ ನೀಡಿದ ದ್ರಾಕ್ಷಾಯಿಣಿ, ನಾನು ಆನ್‍ಲೈನ್‍ನಲ್ಲಿ ವಸ್ತುವೊಂದನ್ನು ಬುಕ್ ಮಾಡಿದ್ದೆ. ಬೈಕ್‍ನಲ್ಲಿ ಬಂದ ಮೂವರು ಪಾರ್ಸೆಲ್ ಎಂದು ಕೂಗಿ ಕಾಲಿಂಗ್ ಬೆಲ್ ಒತ್ತಿದರು. ನಾನು ಪಾರ್ಸಲ್ ತೆಗೆದುಕೊಳ್ಳಲು ಬಾಗಿಲು ತೆಗೆದೆ. ಆ ವೇಳೆ ನನ್ನನ್ನು ತಳ್ಳಿಕೊಂಡು ಮನೆಯೊಳಗೆ ನುಗ್ಗಿ ನನ್ನ ಬಾಯಿ ಮುಚ್ಚಿ ಕೈ, ಕಾಲು ಕಟ್ಟಿದರು. ಈ ವೇಳೆ ಕೂಗಿಕೊಂಡರೆ ರೇಪ್ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ನಂತರ ನನ್ನ ಮೈ ಮೇಲಿನ ಒಡವೆ, ಮಾಂಗಲ್ಯಸರ, ಬೀರುವಿ ನಲ್ಲಿದ್ದ ಚಿನ್ನಾಭರಣ ವನ್ನು ಕದ್ದು ಪರಾರಿಯಾದರು. ಮೂರು ಮಂದಿಯೂ ಕನ್ನಡ, ತಮಿಳು, ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಂಜನಗೂಡು ಗ್ರಾಮಾಂತರ ಠಾಣೆಯ ಇನ್ಸ್‍ಪೆಕ್ಟರ್ ಶಿವನಂಜಶೆಟ್ಟಿ, ಎಎಸ್‍ಐ ಚೇತನ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಬಳಿಕ ಬೆರಳಚ್ಚು ತಜ್ಞರು, ಶ್ವಾನದಳದವರನ್ನು ಕರೆಸಿ ಪರೀಶೀಲನೆಗೊಳಪಡಿಸಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »