ಇನ್ನಷ್ಟು ಕಾಲ ಮೋದಿಯವರೇ ಪ್ರಧಾನಿಯಾಗಿರಬೇಕು
ಮೈಸೂರು

ಇನ್ನಷ್ಟು ಕಾಲ ಮೋದಿಯವರೇ ಪ್ರಧಾನಿಯಾಗಿರಬೇಕು

September 18, 2022

ಮೈಸೂರು, ಸೆ.17(ಎಂಟಿವೈ)-ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಯುಗಪುರುಷನಿದ್ದಂತೆ. ದೇಶದ ಸಮಸ್ಯೆ ಗಳ ನಿವಾರಣೆಗೆ ಹಾಗೂ ಜನರ ಆಶೋ ತ್ತರಗಳ ಈಡೇರಿಕೆಗೆ ಅವರು ಇನ್ನಷ್ಟು ಕಾಲ ಪ್ರಧಾನಿಯಾಗಿ ಮುಂದುವರೆಯ ಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ವಿದ್ಯಾ ರಣ್ಯಪುರಂನ ರಾಮಲಿಂಗೇಶ್ವರ ದೇವಾ ಲಯದ ಉದ್ಯಾನದಲ್ಲಿ ಶನಿವಾರ ಆಯೋ ಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅರ್ಹ ಫಲಾನು ಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತ ನಾಡಿದ ಅವರು, ಕಳೆದ ಎಂಟು ವರ್ಷದ ಹಿಂದೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಆಗ ದೇಶದ ಜನತೆ ಭಾರೀ ನಿರೀಕ್ಷೆಯಲ್ಲಿದ್ದರು. ಅವರ ನಿರೀಕ್ಷೆ ಯಂತೆ ದೇಶವನ್ನು ಉತ್ತಮವಾಗಿ ಮುನ್ನ ಡೆಸುತ್ತಿದ್ದಾರೆ. ಮೋದಿಯಂತಹ ನಾಯಕರು ಆಗೊಮ್ಮೆ, ಈಗೊಮ್ಮೆ ಹುಟ್ಟುತ್ತಾರೆ ಎಂದರು.

ಪ್ರಧಾನಿ ಮೋದಿ, ದೇಶದ ಅಭಿವೃದ್ಧಿಗೆ ಹಲವು ಚಿಂತನೆ, ದೂರದೃಷ್ಟಿವುಳ್ಳ ಹೆಮ್ಮೆಯ ನಾಯಕ, ಇವರೊಬ್ಬ ಯುಗಪುರುಷ. ಅವರು ಆಚಾರ-ವಿಚಾರಗಳಲ್ಲಿ ಒಬ್ಬ ತಪಸ್ವಿಯಾಗಿದ್ದಾರೆ. ಇಂಥ ಒಬ್ಬ ನಾಯಕ, ನಮ್ಮ ದೇಶದ ಪ್ರಧಾನಿ ಆಗಿರುವುದು ನಮ್ಮೆ ಲ್ಲರ ಪುಣ್ಯ. ಇಂಥ ಒಬ್ಬ ಯುಗಪುರುಷನ ಜೊತೆ ನಮ್ಮ ದೇಶದ
ಭವಿಷ್ಯ ಹಾಸು ಹೊಕ್ಕಾಗಿ ಬೆಳೆಯುತ್ತಿದೆ. ವಿಶ್ವದಲ್ಲೇ ಅತ್ಯಂತ ಪ್ರಧಾನವಾಗಿ ಎದ್ದು ಕಾಣುವ ವ್ಯಕ್ತಿತ್ವ ಮೋದಿಯವರದ್ದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದೇಶದ ಪ್ರಧಾನಿಯಾಗಿರುವ ಮೋದಿ ಜನ್ಮದಿನವನ್ನು ಇಂದು ಆಚರಿಸುತ್ತಿದ್ದೇವೆ. ಮೈಸೂರಿನ ಪರಂಪರೆಯಲ್ಲಿ ದೇಶ, ರಾಜ್ಯಕ್ಕೆ ದುಡಿದವರ ಜನ್ಮದಿನವನ್ನು ಆಚರಿಸಿ, ಅವರಿಗೆ ಶುಭ ಹಾರೈಸುವ ಸಂಪ್ರದಾಯವಿದೆ. ಎರಡು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೆ ಮೋದಿ ಅವರು ಮೈಸೂರಿಗೆ ಬಂದಿದ್ದರು. ಆ ವೇಳೆ ಚಾಮುಂಡಿಬೆಟ್ಟಕ್ಕೆ ಹೋಗಿ ದೇವಿಯ ಆಶೀರ್ವಾದ ಪಡೆದಿದ್ದರು. ದೇಶಕ್ಕೆ ಒಳ್ಳೆಯದಾಗಲಿ ಎಂಬುದೇ ನಮ್ಮ ಆಶಯ. ದೇಶದಲ್ಲಿರುವ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡಲು ಸಾಧ್ಯವಿಲ್ಲದೇ ಇದ್ದರೂ, ಪರಿಹಾರ ಮಾಡುವ ನಿಟ್ಟಿನಲ್ಲಿ ಮೋದಿ ಹೆಜ್ಜೆ ಇಟ್ಟಿದ್ದಾರೆ. ಆ ಸಮಸ್ಯೆ ಈಡೇರುವವರೆಗೂ ಅವರು ಪ್ರಧಾನಿಯಾಗಿ ಮುಂದುವರೆಯಲಿ ಎಂದು ಆಶಿಸುತ್ತೇನೆ. ದೇಶದ ಬಗ್ಗೆ ಚಿಂತನೆ ಮಾಡುವ ಶಕ್ತಿಯನ್ನು ಇನ್ನಷ್ಟು ಸಮಯ ಅವರಿಗೆ ನೀಡಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ಅವರ ಮಾತೃಶ್ರೀ ಅವರಿಗೆ 100 ವರ್ಷ ಸಂದಿದೆ, ಮೋದಿ ಅವರೂ 100 ವರ್ಷ ನಮ್ಮೊಂದಿಗೆ ಇರಲಿ ಎಂಬುದೇ ಆಗಿದೆ ಎಂದು ಆಶಿಸಿದರು.

ಮಂಡ್ಯ ಈ ಹಿಂದೆ ಮೈಸೂರಿನ ಒಂದು ಭಾಗವಾಗಿತ್ತು: ಒಂದು ಕಾಲದಲ್ಲಿ ನಾವೆಲ್ಲಾ ಮೈಸೂರಿನವರೇ ಆಗಿದ್ದೆವು. ಈ ಹಿಂದೆ ಮಂಡ್ಯ ಮೈಸೂರಿನ ಒಂದು ಭಾಗವಾಗಿತ್ತು. ಆ ನಂತರ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮಂಡ್ಯ ಪ್ರತ್ಯೇಕ ಜಿಲ್ಲೆಯಾಯಿತು. ಮಂಡ್ಯ ಜನರನ್ನು ಮೈಸೂರಿನ ಜನ ಚೆನ್ನಾಗಿ ನೋಡಿಕೊಂಡಿದ್ದಾರೆ. ಇದು ಹಳೆ ತಲೆಮಾರಿನ ಜನರಿಗೆ ತಿಳಿದಿದೆ ಎಂದರು.

ಮೈಸೂರಿನ ಒಡನಾಟ: ನನ್ನ ಹಾಗೂ ಮೈಸೂರಿನ ಸಂಬಂಧ ತುಂಬಾ ಹಳೆಯದು. 1942ರಲ್ಲಿ, ಆಗಿದ್ದ ಮೈಸೂರು ಟ್ರಸ್ಟ್ ಬೋರ್ಡ್‍ನವರು ನಮ್ಮ ತಂದೆಗೆ ಪತ್ರ ಬರೆದು, ನಿವೇಶನ ಪಡೆಯುವಂತೆ ಮನವಿ ಮಾಡಿದ್ದರು. ಆ ನಿವೇಶನ ನಮ್ಮ ತಂದೆಯ ನಂತರ ನನ್ನ ಹೆಸರಿಗೆ ಬಂದು, ನಾನೀಗ ನನ್ನ ಮಗಳಿಗೆ ನೀಡಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಕನ್ನಡ ಮತ್ತು ತೆಲುಗು ಖ್ಯಾತ ನಟಿ ರೂಪಿಕ ಮಾತನಾಡಿ, ಹುಟ್ಟುಹಬ್ಬ ಎಂದರೆ ಕೇಕ್ ಕಟ್ ಮಾಡಿ ಆಚರಿಸುವುದನ್ನು ಎಲ್ಲೆಡೆ ಕಾಣುತ್ತೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುತ್ತಿರುವ ವಿನೂತನವಾದ ಕಾರ್ಯಕ್ರಮವನ್ನು ಆಯೋಜಿಸಿರುವುದು ನನಗೆ ತುಂಬಾ ಖುಷಿ ತಂದಿದೆ. `ತಾಯಿಯ ಗರ್ಭದಿಂದ ಭೂ ಗರ್ಭದವರೆಗೆ’ ಶೀರ್ಷಿಕೆಗೆ ತಕ್ಕಂತೆ ಇಂದು ಎಲ್ಲಾ ಗರ್ಭಿಣಿಯರಿಗೆ ಉಡಿ ತುಂಬಿದ್ದು, ಮಕ್ಕಳಿಗೆ ಅನ್ನಪ್ರಾಶನ ಮಾಡಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿದೆ ಎಂದು ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಶಾಸಕ ಎಸ್.ಎ.ರಾಮದಾಸ್ ಅವರು ಉತ್ತಮ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕೆಲಸದಲ್ಲಿ ನಿರತರಾಗಿರುವುದು ಶ್ಲಾಘನೀಯ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ದೂರದೃಷ್ಟಿ ಎಂಥದ್ದು ಎಂದು ಎಲ್ಲರಿಗೂ ತಿಳಿದಿದೆ. ನಾವು ಬದುಕಿದ್ರೆ ಇವರ ಥರಾ ಬದುಕಬೇಕು ಅನ್ನಿಸುತ್ತದೆ. ನನಗೆ ಕರ್ನಾಟಕದಲ್ಲಿ ಅತ್ಯಂತ ಪ್ರಿಯವಾದ ರಾಜಕಾರಣಿ ಅಂದರೆ ಅದು ಎಸ್.ಎಂ.ಕೃಷ್ಣ ಅವರೇ ಆಗಿದ್ದಾರೆ. ಅವರ ಕಾಲಾವಧಿಯಲ್ಲಿ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಜಾರಿಗೆ ತಂದರು ಎಂದು ತಿಳಿಸಿದರು. ಮೈಸೂರು-ಬೆಂಗಳೂರು ನಡುವೆ ಎಸ್.ಎಂ.ಕೃಷ್ಣ ಅವರು ನಾಲ್ಕು ಪಥದ ರಸ್ತೆಯನ್ನು ಕೊಡುಗೆಯಾಗಿ ನೀಡಿದ್ದರು. ಮೈಸೂರು ರಿಂಗ್ ರಸ್ತೆ, ಮೈಸೂರಿಗೆ ಇನ್ಫೋಸಿಸ್ ತಂದರು. ರಾಜ್ಯ ಹಾಗೂ ದೇಶದ ದುರಂತ ಎಂದರೆ, ವಾಜಪೇಯಿ ಹಾಗೂ ಕೃಷ್ಣ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿಲ್ಲ. 2004ರಲ್ಲಿ ಅಂದೇ ಅಧಿಕಾರಕ್ಕೆ ಬಂದಿದ್ದರೆ ಇಂದು ದೇಶ ಹಾಗೂ ರಾಜ್ಯ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಬಹುದಿತ್ತು. ದೇಶದ ಪ್ರಧಾನಿ ಅವರ ಯೋಜನೆಯನ್ನು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ರಾಮದಾಸ್ ಅವರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

ಮೆರವಣಿಗೆ: ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಂದ ಆಗಮಿಸಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಚಾಮುಂಡಿಪುರಂ ವೃತ್ತದಿಂದ ವಿದ್ಯಾರಣ್ಯಪುರಂನಲ್ಲಿನ ರಾಮಲಿಂಗೇಶ್ವರ ಉದ್ಯಾನದವರೆಗೆ ತೆರೆದ ಜೀಪ್‍ನಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ತಮಟೆ, ಡೋಲು, ನಗಾರಿಯೊಟ್ಟಿಗೆ ಕಳಸ ಹೊತ್ತ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ರೂಪ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಬಿ.ವಿ.ಮಂಜುನಾಥ್, ವಡಿವೇಲು, ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ ಕುಮಾರ್, ಓಂ ಶ್ರೀನಿವಾಸ್, ಮಾಜಿ ಕಾರ್ಯಾಧ್ಯಕ್ಷ ಶಿವಲಿಂಗಯ್ಯ ಇನ್ನಿತರರು ಉಪಸ್ಥಿತರಿದ್ದರು.

Translate »