ಮನೆ ಕೆಡವಿ ಪರಿಹಾರಕ್ಕೆ ಅರ್ಜಿ!
ಮೈಸೂರು

ಮನೆ ಕೆಡವಿ ಪರಿಹಾರಕ್ಕೆ ಅರ್ಜಿ!

September 18, 2022

ಮೈಸೂರು, ಸೆ.17(ಆರ್‍ಕೆ)-ಮಳೆ ನೆಪದಲ್ಲಿ ಇರುವ ಮನೆ ಕೆಡವಿ ನಷ್ಟ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕರ್ನಾ ಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಇತ್ತೀಚೆಗೆ ಸುರಿದ ಮಳೆ ಹಾನಿಯಿಂದ ಬೆಳೆ ಹಾನಿ ಹಾಗೂ ಮನೆಗಳು ಉರುಳಿ ಬಿದ್ದು, ಭಾರೀ ನಷ್ಟವಾಗಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ನಿಜವಾಗಲೂ ನಷ್ಟವಾಗಿರುವ ರೈತರು, ಮನೆ ವಾರಸುದಾರರ ಬ್ಯಾಂಕ್ ಖಾತೆಗೆ ಪರಿ ಹಾರದ ಹಣವನ್ನು ಜಮಾ ಮಾಡುತ್ತಿರುವುದು ಸರಿಯಷ್ಟೇ ಎಂದರು. ಆದರೆ ಮಳೆ ನೆಪದಲ್ಲಿ ಕೆಲವರು ರಾತ್ರೋರಾತ್ರಿ ಚೆನ್ನಾಗಿರುವ ಮನೆಯನ್ನು ಉರುಳಿಸಿ ಫೋಟೋ ತೆಗೆದು, ವಿಡಿಯೋ ಮಾಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರಲ್ಲದೆ, ಅಂತಹ ಕೆಲ ಮನೆ ಮಾಲೀಕರಿಗೆ ಈಗಾಗಲೇ ನಷ್ಟ ಪರಿ ಹಾರದ ಹಣವನ್ನು ಪಾವತಿಸಲಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಸಚಿವರು ತಿಳಿಸಿದರು. ಅಂತಹ ನಕಲಿ ಪರಿಹಾರ ಕೇಳುವವರಿಗೆ ಜನಪ್ರತಿನಿಧಿ ಗಳು ಶಿಫಾರಸು ಮಾಡಬಾರದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಅಕ್ಕಪಕ್ಕದವರಿಂದಲೂ ಮಾಹಿತಿ ಪಡೆದು, ನಿಜವಾಗಲೂ ಮಳೆಯಿಂದ ಕುಸಿದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಮನೆಯನ್ನು ಕೆಡವಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಪರಿಹಾರಕ್ಕೆ ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚನೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಮಹದೇವು ಅವರು, ನಮ್ಮ ಕ್ಷೇತ್ರದಲ್ಲಿ ಯಾರೂ ಆ ರೀತಿ ಮಾಡುವುದಿಲ್ಲ. ನಾವು ಅಂತಹುದಕ್ಕೆ ಶಿಫಾರಸು ಮಾಡುವುದಿಲ್ಲ ಎಂದಾಗ, ನನಗೆ ಬಂದ ಮಾಹಿತಿಯನ್ನು ಹೇಳಿದ್ದೆನಷ್ಟೆ. ಇಂತಹವರೇ ಮಾಡಿದ್ದಾರೆಂದು ಹೇಳಲಿಲ್ಲ. ಅಂತಹ ಅರ್ಜಿಗಳು ಬಂದಲ್ಲಿ ಎಚ್ಚರ ವಹಿಸಬೇಕೆಂದು ಹೇಳಿದ್ದೆನಷ್ಟೇ ಎಂದು ಸೋಮಶೇಖರ್ ತಿಳಿಸಿದರು.

Translate »