ಅದ್ಧೂರಿ ಮೈಸೂರು ದಸರಾಗೆ  ಇನ್ನೆರಡು ದಿನದಲ್ಲಿಸಿದ್ಧತೆ ಪೂರ್ಣ
ಮೈಸೂರು

ಅದ್ಧೂರಿ ಮೈಸೂರು ದಸರಾಗೆ ಇನ್ನೆರಡು ದಿನದಲ್ಲಿಸಿದ್ಧತೆ ಪೂರ್ಣ

September 18, 2022

ಮೈಸೂರು, ಸೆ.17(ಎಸ್‍ಬಿಡಿ)-ಮೈಸೂರು ದಸರಾ ಮಹೋ ತ್ಸವವನ್ನು 35 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ದಸರಾ ಸಿದ್ಧತೆ ಬಗ್ಗೆ ಎಲ್ಲಾ ಉಪಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ನಿರ್ಧರಿ ಸಲಾಗಿದ್ದು, ಅರಮನೆ ಮಂಡಳಿಯಿಂದ 5 ಕೋಟಿ ರೂ. ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ. ಹಣ ವ್ಯಯಿಸಲು ಸರ್ಕಾರ ಈಗಾಗಲೇ ಅನು ಮೋದನೆ ನೀಡಿದೆ. ಜೊತೆಗೆ ಸರ್ಕಾರದ ವತಿಯಿಂದ 4ಜಿ ತೆರಿಗೆ ವಿನಾಯ್ತಿಯಡಿ 15 ಕೋಟಿ ರೂ. ಹಾಗೂ ಅತ್ಯಾಕರ್ಷಕ ವಿದ್ಯುತ್ ದೀಪಾಲಂಕಾರಕ್ಕಾಗಿ ಸೆಸ್ಕ್‍ಗೆ 4.50 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಒಟ್ಟಾರೆ 34.50 ಕೋಟಿ ರೂ. ವೆಚ್ಚದಲ್ಲಿ ಈ ಬಾರಿ ದಸರಾವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗು ತ್ತಿದೆ. ಇನ್ನೆರಡು ದಿನಗಳಲ್ಲಿ ಸಿದ್ಧತಾ ಕಾರ್ಯ ಪೂರ್ಣಗೊಳಿ ಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ರಾಷ್ಟ್ರಪತಿಗೆ ಆಹ್ವಾನ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.26ರ ಬೆಳಗ್ಗೆ 9.45ರಿಂದ 10.04ರೊಳಗೆ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಕಚೇರಿಯಿಂದ ಕಾರ್ಯಕ್ರಮದ ಕ್ಷಣ ಕ್ಷಣ(ಮಿನಿಟ್ ಟು ಮಿನಿಟ್)ದ ಮಾಹಿತಿ ಹಾಗೂ ಕೆಲ ಸ್ಪಷ್ಟನೆ ನೀಡಿದ್ದಾರೆ. ಅದರಂತೆ ಜಿಲ್ಲಾಧಿಕಾರಿಗಳು ಎಲ್ಲಾ ಮಾಹಿತಿಯನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೂಲಕ ರಾಷ್ಟ್ರಪತಿ ಕಚೇರಿಗೆ ಕಳುಹಿಸಿದ್ದಾರೆ. ನಾಳೆ(ಸೆ.18) ಮಧ್ಯಾಹ್ನ ಅಥವಾ ಸೋಮವಾರ ರಾಷ್ಟ್ರಪತಿ ಕಚೇರಿಯಿಂದ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದ್ದು, ನಂತರದಲ್ಲಿ ಆಹ್ವಾನ ಪತ್ರಿಕೆ ಇನ್ನಿತರ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಬಳಿಕ ದೆಹಲಿಗೆ ತೆರಳಿ ರಾಷ್ಟ್ರಪತಿಯವರನ್ನು ದಸರೆ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನಿಸಲಾಗುವುದು. ರಾಷ್ಟ್ರಪತಿಯವರ ಮಾಹಿತಿಗಾಗಿ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮಾತ್ರ ಇಂಗ್ಲಿಷ್‍ನಲ್ಲಿ ಮುದ್ರಿಸಲಾಗುತ್ತದೆ ಎಂದು ತಿಳಿಸಿದರು.

ವೇದಿಕೆಗೆ 49 ಜನರ ಪಟ್ಟಿ: ಹಿಂದಿನ ವರ್ಷಗಳಲ್ಲಿದ್ದಂತೆ ದಸರಾ ಉದ್ಘಾಟನಾ ಸಮಾರಂಭ ವೇದಿಕೆಯಲ್ಲಿ ಉಪಸ್ಥಿತರಿ ರಬಹುದಾದ ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಗಳ ಶಾಸಕರು, ಸಂಸದರು, ಸಂಬಂಧಿಸಿದ ಇಲಾಖೆ ಸಚಿವರು, ಮೇಯರ್, ಕಾರ್ಪೊರೇಟರ್‍ಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 49 ಗಣ್ಯರ ಪಟ್ಟಿಯನ್ನು ರಾಷ್ಟ್ರಪತಿ ಕಚೇರಿಗೆ ಕಳುಹಿಸಲಾಗಿದೆ. ಆದರೆ ವೇದಿಕೆಯಲ್ಲಿ ಯಾರಿಗೆ ಅವಕಾಶ ಕಲ್ಪಿಸಬೇಕು ಎಂಬುದನ್ನು ರಾಷ್ಟ್ರಪತಿ ಕಚೇರಿಯಿಂದಲೇ ನಿರ್ದೇಶನ ನೀಡಲಾಗುತ್ತದೆ. ಒಂದು ವೇಳೆ ವೇದಿಕೆಯಲ್ಲಿ ಎಲ್ಲರಿಗೂ ಅವಕಾಶ ಇಲ್ಲವಾದರೆ ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗುವುದು. ಆ ದಿನ ಸಾರ್ವಜನಿಕರಿಗೆ ನಿರ್ಬಂಧವಿರುವುದಿಲ್ಲ. ಹಾಗಾಗಿ ಇನ್ನೂ 2 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಗೊಂದಲಗಳಿಗೆ ಆಸ್ಪದವಿಲ್ಲ: ನಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ಯಾವುದೇ ಗೊಂದಲ-ಗದ್ದಲಗಳಿಲ್ಲದೆ ಸುಸೂತ್ರವಾಗಿ ದಸರಾ ನಡೆಸಬೇಕೆಂಬುದಷ್ಟೇ ನಮ್ಮ ಗುರಿ. ಆರಂಭದಲ್ಲಿ ಗೋಲ್ಡ್ ಕಾರ್ಡ್ ಬೇಡವೆಂದು ನಿರ್ಧರಿಸಲಾ ಗಿತ್ತು. ಆದರೆ ಪ್ರವಾಸೋದ್ಯಮ ದೃಷ್ಟಿಯಿಂದ ಗೋರ್ಡ್ ಕಾರ್ಡ್‍ಗೆ ಒತ್ತಾಯ ಕೇಳಿಬಂದಿದ್ದು, ಸದ್ಯದಲ್ಲೇ ಪೂರಕ ತೀರ್ಮಾನ ಕೈಗೊಳ್ಳಲಾಗುವುದು. ಜಂಬೂಸವಾರಿ ವೀಕ್ಷಣೆಗೆ ಅರಮನೆ ಆವರಣ ಹಾಗೂ ಬನ್ನಿಮಂಟಪ ಪಂಜಿನ ಕವಾ ಯತು ವೀಕ್ಷಣೆಗೆ ನೀಡಲಾಗುವ ಪಾಸ್ ವಿತರಣೆ ವಿಚಾರದಲ್ಲಿ ಗೊಂದಲವಾಗದಂತೆ ಎಚ್ಚರ ವಹಿಸಲಾಗುವುದು. ಆಸನ ವ್ಯವಸ್ಥೆಗೆ ಸರಿಹೊಂದುವಂತೆ ಗೋಲ್ಡನ್ ಕಾರ್ಡ್, ಟಿಕೆಟ್ ಹಾಗೂ ಪಾಸ್ ವಿತರಣೆ ಮಾಡಲಾಗುವುದು. ಖಂಡಿತವಾಗಿ ಸಾರ್ವಜನಿಕರಿಗೆ ಅವಕಾಶ ಇರುತ್ತದೆ. ಉಸ್ತುವಾರಿ ಸಚಿವರ ಕ್ಷೇತ್ರದಿಂದ ಜನರನ್ನು ಕರೆಸುತ್ತಾರೆಂಬ ಆಪಾದನೆಗೆ ಗುರಿ ಯಾಗಲು ನಾನು ಸಿದ್ಧನಿಲ್ಲ. ಹಾಗಾಗಿ ನಾನು ಪ್ರತಿನಿಧಿಸುವ ಯಶವಂತಪುರ ಜನತೆಗೆ ಉದ್ಘಾಟನೆ ಹಾಗೂ ಜಂಬೂ ಸವಾರಿ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಬರುವಂತೆ ತಿಳಿಸಿದ್ದೇನೆ. ಪಾಸ್, ಆಸನ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಅಧ್ವಾನಕ್ಕೆ ಆಸ್ಪದ ನೀಡದಂತೆ ಎಚ್ಚರ ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಕಾರ್ಯಕ್ರಮ ಸಿದ್ಧತೆ: ದಸರಾ ಉದ್ಘಾಟನೆ ದಿನ ಸಂಜೆ ಅರಮನೆ ಮುಂಭಾಗದ ವೇದಿಕೆಯಲ್ಲಿ ಮುಖ್ಯ ಮಂತ್ರಿಗಳು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೂರು ವರ್ಷಗಳಿಂದ ಅವಕಾಶ ಸಿಗದಿರುವ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಸಿದ್ಧ ಕಲಾವಿದರ ಕಾರ್ಯ ಕ್ರಮಗಳನ್ನು ಜೋಡಿಸಲಾಗುತ್ತಿದೆ. ಈ ಬಾರಿ 96 ವೃತ್ತಗಳು ಸೇರಿ ಒಟ್ಟು 124 ಕಿ.ಮೀ. ದೀಪಾಲಂಕಾರ, 23 ಸ್ಥಳಗಳಲ್ಲಿ `ದಸರಾಗೆ ಸ್ವಾಗತ’ ಲೈಟಿಂಗ್ಸ್ ಅಳವಡಿಸಲಾಗುತ್ತಿದೆ. ಜಂಬೂ ಸವಾರಿ ಮಾರ್ಗದಲ್ಲಿ 24 ಅಡಿ ಎತ್ತರದಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಯುವ ದಸರಾ, ಗ್ರಾಮೀಣ ಕ್ರೀಡಾ ದಸರಾ, ಕವಿಗೋಷ್ಠಿ, ರಂಗಾಯಣ ನಾಟಕೋತ್ಸವ, ರೈತ ದಸರಾ, ಕುಸ್ತಿ, ಮಹಿಳಾ ಮತ್ತು ಮಕ್ಕಳ ದಸರಾ, ಚಲನ ಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ಕೈಗಾರಿಕಾ ದಸರಾ, ಹೆರಿಟೇಜ್ ದಸರಾ, ಕ್ರೀಡಾ ದಸರಾ ಹೀಗೆ ದಸರಾ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ನಿಗದಿತ ದಿನಗಳಲ್ಲಿ ಆಯೋಜನೆ ಮಾಡಲಿದ್ದು, ಸಂಬಂಧಿ ಸಿದ ಇಲಾಖೆ ಸಚಿವರು ಉದ್ಘಾಟನೆ ನೆರವೇರಿಸಲಿದ್ದಾರೆ. ಏರ್‍ಶೋ, ಹೆಲಿರೈಡ್ ಬಗ್ಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಡಾಂಬರೀಕರಣ, ಸ್ವಚ್ಛತಾ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಕಾಂಬೋ ಟಿಕೆಟ್, ರೈತ ದಸರಾ, ಮಹಿಳಾ ದಸರಾ ಇನ್ನಿತರ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆ ಮಾಡಿದರು.

Translate »