ಕೆಆರ್, ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆಯ ಕಟ್ಟಡಗಳ ನವೀಕರಣಕ್ಕೆ 89.50 ಕೋಟಿ ಅನುದಾನ
News

ಕೆಆರ್, ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆಯ ಕಟ್ಟಡಗಳ ನವೀಕರಣಕ್ಕೆ 89.50 ಕೋಟಿ ಅನುದಾನ

September 15, 2022

ಬೆಂಗಳೂರು, ಸೆ. 14- ಮೈಸೂರು ಮೆಡಿ ಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ&ಆರ್‍ಐ) ಅಧೀನಕ್ಕೆ ಒಳಪಟ್ಟಿರುವ ಕೆಆರ್ ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಮತ್ತು ಪಿಕೆಟಿಬಿ ಆಸ್ಪತ್ರೆಯ ಒಟ್ಟು 14 ಕಟ್ಟಡಗಳ ನವೀಕರಣಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈ ಕಟ್ಟಡಗಳ ನವೀಕರಣಕ್ಕೆ ಸಂಬಂಧಿಸಿದಂತೆ 2018-19ರ ಸಾಲಿನ ಲೋಕೋಪಯೋಗಿ ಇಲಾಖೆ ಮೈಸೂರು ವೃತ್ತದ ದರಪಟ್ಟಿ ಮತ್ತು 2019-20ನೇ ಸಾಲಿನ ವಿದ್ಯುತ್ ದರಪಟ್ಟಿಯನ್ವಯ ಅಂದಾಜು ಪಟ್ಟಿಯನ್ನು ತಯಾರಿಸಿ, ಎಂಎಂಸಿಯಿಂದ ಸರ್ಕಾರಕ್ಕೆ ಆಡಳಿತಾತ್ಮಕ ಅನುಮೋದನೆಗೆ ರವಾನಿಸಲಾಗಿತ್ತು. 2021ರ ಸೆಪ್ಟೆಂಬರ್ 6ರಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಇಂಜಿನಿಯರ್‍ಗಳು ಈ ಕುರಿತು ಪತ್ರ ಬರೆದಿದ್ದರು.

2021ರ ಆಗಸ್ಟ್ 9ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರು ಮತ್ತು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರ ಕೋರಿಕೆಯ ಮೇರೆಗೆ ಸದರಿ ಕಟ್ಟಡಗಳ ನವೀಕರಣಕ್ಕೆ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದರು. ಅಲ್ಲದೇ, 2022ರ ಫೆಬ್ರವರಿ 7ರಂದು ಮುಖ್ಯಮಂತ್ರಿಗಳು ದೆಹಲಿಗೆ ಭೇಟಿ ನೀಡಿದ್ದಾಗ ಅವರನ್ನು ಅಲ್ಲಿ ಸಂಪರ್ಕಿಸಿದ್ದ ಸಂಸದ ಪ್ರತಾಪ್ ಸಿಂಹ, ಈ ಆಸ್ಪತ್ರೆಗಳ ಕಟ್ಟಡಗಳ ನವೀಕರಣಕ್ಕಾಗಿ ಮನವಿ ಸಲ್ಲಿಸಿದ್ದರು. ಆ ವೇಳೆ ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ 85.98 ಕೋಟಿ ರೂ. ಅನುದಾನವನ್ನು ಮೈಸೂರಿನ ಕೆಆರ್, ಚೆಲುವಾಂಬ ಮತ್ತು ಪಿಕೆಟಿಬಿ ಆಸ್ಪತ್ರೆ ಕಟ್ಟಡಗಳ ನವೀಕರಣಕ್ಕೆ ಮೀಸಲಿಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಕಳೆದ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಈ ಸಂಬಂಧ ಘೋಷಣೆಯನ್ನೂ ಮಾಡಿದ್ದರು. ಇಂದು ನಡೆದ ಸಂಪುಟ ಸಭೆಯು ಕೆಆರ್, ಚೆಲುವಾಂಬ ಮತ್ತು ಪಿಕೆಟಿಬಿ ಆಸ್ಪತ್ರೆಗಳ ಒಟ್ಟು 14 ಕಟ್ಟಡಗಳ ನವೀಕರಣಕ್ಕೆ 89.50 ಕೋಟಿ ರೂ. ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

Translate »