ನಾಳೆಯಿಂದ ಯುವ ಸಂಭ್ರಮ: ಡಾಲಿ ಧನಂಜಯ ತಾರಾ ಮೆರಗು
ಮೈಸೂರು

ನಾಳೆಯಿಂದ ಯುವ ಸಂಭ್ರಮ: ಡಾಲಿ ಧನಂಜಯ ತಾರಾ ಮೆರಗು

September 15, 2022

ಮೈಸೂರು, ಸೆ.14(ಎಸ್‍ಬಿಡಿ)- ಮೈಸೂರು ದಸರಾ ಮಹೋತ್ಸವದ `ಯುವ ಸಂಭ್ರಮ’ ಸೆ.16 ರಿಂದ ಆರಂಭವಾಗಲಿದ್ದು, ಉದ್ಘಾಟನೆ ವೇಳೆ ಗಣ್ಯರೊಂದಿಗೆ ನಟ ಡಾಲಿ ಧನಂಜಯ ಭಾಗಿಯಾಗಿ ತಾರಾ ಮೆರಗು ನೀಡಲಿದ್ದಾರೆ. ನವರಾತ್ರಿ ಉತ್ಸವದ ಹೊಸ್ತಿಲಲ್ಲಿ ಸಾಂಸ್ಕøತಿಕ ಸಡಗರವನ್ನು ಕಳೆಗಟ್ಟುವ `ಯುವ ಸಂಭ್ರಮ’, 2 ವರ್ಷಗಳ ಬಳಿಕ ನಡೆಯುತ್ತಿದ್ದು ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸೆ.16ರ ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸ್ಥಳೀಯ ಶಾಸಕರು, ಸಂಸದರು ಇನ್ನಿತರ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಆ ವೇಳೆ ಡಾಲಿ ಧನಂಜಯ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು `ಯುವ ಸಂಭ್ರಮ’ದ ಕಿಚ್ಚು ಹೆಚ್ಚಿಸಲಿದ್ದಾರೆ. ಸೆ.24ರವರೆಗೆ ಒಟ್ಟು 9 ದಿನ ಜರುಗಲಿರುವ `ಯುವ ಸಂಭ್ರಮ’ದಲ್ಲಿ ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಗಲಿದೆ.

253 ಕಾಲೇಜು ತಂಡ: ದಸರಾ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವುದರ ಜೊತೆಗೆ ನವರಾತ್ರಿ ಹೊಸ್ತಿಲಲ್ಲಿ ಸಂಭ್ರಮ ಮೂಡಿಸುವ ಉದ್ದೇಶದಿಂದ `ಯುವ ಸಂಭ್ರಮ’ ಆಯೋಜಿಸಿಕೊಂಡು ಬರಲಾಗಿದೆ. ಅದರಂತೆ ಈ ಬಾರಿಯೂ ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 253 ಕಾಲೇಜು ತಂಡಗಳು `ಯುವ ಸಂಭ್ರಮ’ದಲ್ಲಿ ತಮ್ಮ ಕಲಾ ಪ್ರದರ್ಶನ ನೀಡಲಿವೆ. ಮೈಸೂರು ವಿವಿ ಜೊತೆಗೆ ರಾಜ್ಯದ ಬೇರೆ ಬೇರೆ ವಿವಿಗಳಿಂದಲೂ ತಂಡಗಳು ಭಾಗವಹಿಸಲಿವೆ. ಜೊತೆಗೆ ವಿಶೇಷ ಚೇತನ ಮಕ್ಕಳ 10 ತಂಡಗಳು `ಯುವ ಸಂಭ್ರಮ’ದಲ್ಲಿ ಕಲಾವರಣ ಮಾಡಲಿವೆ. ತಂಡವೊಂದರಲ್ಲಿ 30-40 ಜನರಂತೆ ಒಟ್ಟು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮ ನೀಡಲಿದ್ದಾರೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 10 ಗಂಟೆವರೆಗೆ ಕಾರ್ಯಕ್ರಮ ನಡೆಯಲಿರುವ ಕಾರ್ಯಕ್ರಮ ವೀಕ್ಷಣೆಗೆ ಮುಕ್ತ ಅವಕಾಶವಿದ್ದು, ಎಲ್ಲರೂ ಪಾಲ್ಗೊಂಡು ಅದ್ಧೂರಿ `ಯುವ ಸಂಭ್ರಮ’ವನ್ನು ಯಶಸ್ವಿಗೊಳಿಸಬೇಕು ಎಂದು ಯುವ ಸಂಭ್ರಮ ಹಾಗೂ ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿಯಾದ ಜಿಲ್ಲಾ ಪೊಲೀಸ್ ಅಧೀಕ್ಷಕ(ಎಸ್ಪಿ) ಆರ್.ಚೇತನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ವಿಭಿನ್ನ 9 ವಿಷಯವಸ್ತು: `ಯುವ ಸಂಭ್ರಮ’ದಲ್ಲಿ ಕಾರ್ಯಕ್ರಮ ನೀಡುವ ತಂಡಗಳಿಗೆ ವಿಭಿನ್ನ 9 ವಿಷಯವಸ್ತು ನೀಡಲಾಗಿದೆ. `ಸ್ವಾತಂತ್ರ್ಯ ಅಮೃತಮಹೋತ್ಸವ’, `ಭಾರತ ಸ್ವಾತಂತ್ರ್ಯ ಚಳವಳಿಗೆ ಕರ್ನಾಟಕದ ಕೊಡುಗೆ’, `ಭಾರತ ಸ್ವಾತಂತ್ರ್ಯ ಚಳವಳಿ’, `ರಾಷ್ಟ್ರೀಯ ಭಾವೈಕ್ಯತೆ ಮತ್ತು ಪಾರಂಪರಿಕ ಆಸ್ತಿಗಳ ಸಂರಕ್ಷಣೆ’, `ಮಹಿಳಾ ಸಬಲೀಕರಣ ಮತ್ತು ಸಮಾನತೆ’, `ಕನ್ನಡ ಮತ್ತು ಸಂಸ್ಕøತಿ, ಜಾನಪದ ಕಲೆ’, `ಪರಿಸರ ಸಂರಕ್ಷಣೆ ಮತ್ತು ಮಾನವ ನಿರ್ಮಿತ ಆಪತ್ತುಗಳು’, `ಸ್ವಚ್ಛ ಭಾರತ-ಸ್ವಚ್ಛ ಕರ್ನಾಟಕ, ಆರೋಗ್ಯ ಮತ್ತು ನೈರ್ಮಲ್ಯ’ ಹಾಗೂ `ಮಾದರಿ ಮೈಸೂರು ನಿರ್ಮಾಣದಲ್ಲಿ ಮೈಸೂರು ಮಹಾರಾಜರುಗಳ ಕೊಡುಗೆ’. ಇದರಲ್ಲಿ ಯಾವುದಾದರೊಂದು ವಿಷಯ ವಸ್ತುವನ್ನು ಆಯ್ಕೆ ಮಾಡಿಕೊಂಡು ಆಕರ್ಷಕವಾಗಿ ಕಾರ್ಯಕ್ರಮ ರೂಪಿಸುವಂತೆ ಸೂಚನೆ ನೀಡಲಾಗಿದೆ. ವಿಶೇಷ ಮಕ್ಕಳಿಗೆ ತೊಂದರೆಯಾಗದಂತೆ ಕಾರ್ಯಕ್ರಮದಲ್ಲಿ ಸೂಕ್ತ ವೇಳೆ ನಿಗದಿಪಡಿಸಲಾಗುವುದು. ಸಾಧ್ಯವಾದರೆ ನಿತ್ಯವೂ ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ ಕಲಾವಿದರನ್ನು ಆಹ್ವಾನಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

`ಯುವ ದಸರಾ’ಗೆ 18 ತಂಡ: `ಯುವ ಸಂಭ್ರಮ’ದಲ್ಲಿ ಅತ್ಯಾಕರ್ಷಕ ಕಾರ್ಯಕ್ರಮ ನೀಡುವ ಆಯ್ದ 18 ತಂಡಗಳಿಗೆ `ಯುವ ದಸರಾ’ ವೇದಿಕೆಯಲ್ಲಿ ಅವಕಾಶ ನೀಡಲಾಗು ವುದು. ಪ್ರತಿನಿತ್ಯ ಮೊದಲ ಅವಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ನೃತ್ಯ ರೂಪಕದ ಬಳಿಕ ಅಂದಿನ ವಿಶೇಷ ಕಲಾವಿದರ ಕಾರ್ಯಕ್ರಮ ನಡೆಯಲಿದೆ. ಇನ್ನೂ ಕಲಾವಿದರು ಹಾಗೂ ಕಾರ್ಯಕ್ರಮ ಪಟ್ಟಿ ಸಿದ್ಧವಾಗಬೇಕಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ವಿವರಣೆ ನೀಡಲಿದ್ದಾರೆ ಎಂದು ಎಸ್ಪಿ ಚೇತನ್ ಹೇಳಿದರು. ಉಪಸಮಿತಿ ಕಾರ್ಯಾ ಧ್ಯಕ್ಷರಾದ ಮುಡಾ ಕಾರ್ಯದರ್ಶಿ ಎನ್.ಸಿ.ವೆಂಕಟರಾಜು, ಕಾರ್ಯದರ್ಶಿಗಳಾದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಸದ್ ರೆಹಮಾನ್ ಷರೀಫ್ ಹಾಗೂ ಕಲಾವಿದ ನಿಂಗರಾಜು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಯುವ ಸಮೂಹ ಕಾತುರ: ಕಳೆದ ಎರಡು ವರ್ಷ ಕೊರೊನಾ ಪರಿಣಾಮ ಅರಮನೆ ವೇದಿಕೆ ಹೊರತುಪಡಿಸಿ ಮತ್ಯಾವ ಸ್ಥಳದಲ್ಲೂ ದಸರಾ ಸಾಂಸ್ಕøತಿಕ ಕಾರ್ಯಕ್ರಮ ನಡೆದಿರಲಿಲ್ಲ. ಹಾಗಾಗಿ ಈ ಬಾರಿಯ `ಯುವ ಸಂಭ್ರಮ’ವನ್ನು ಎದುರು ನೋಡುತ್ತಿದ್ದ ಯುವ ಸಮೂಹ ಕುಣಿದು ಕುಪ್ಪಳಿಸಿ ಸಂಭ್ರಮಿಸಲು ಸಜ್ಜಾಗಿದೆ. ಬಯಲು ರಂಗಮಂದಿರದಲ್ಲಿ ಕಿಕ್ಕಿರಿದು ಶಿಳ್ಳೆ, ಕೇಕೆ ಮೂಲಕ ಕಲಾ ಪ್ರದರ್ಶನ ನೀಡುವವರನ್ನು ಹುರಿದುಂಬಿಸಲು ಅಣಿಯಾಗಿದ್ದಾರೆ. ನಿರೀಕ್ಷೆ ಮೀರಿ ಜನ ಸೇರುವ ಸಾಧ್ಯತೆ ಇರುವ ವಾಹನ ನಿಲುಗಡೆ, ಜನ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಜೊತೆಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್‍ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

Translate »