ಮೊಳೆಯೂರು, ನ.3(ಎಂಟಿವೈ)- ಕಾಡಿನಿಂದ ನಾಡಿಗೆ ಬಂದು ಹೊಲ-ಗದ್ದೆಗಳಲ್ಲಿ ಮೇಯ್ದು ಮತ್ತೆ ಕಾಡಿಗೆ ವಾಪಸಾಗುತ್ತಿದ್ದಾಗ ರೈಲ್ವೆ ಕಂಬಿಯ ಬ್ಯಾರಿಕೇಡ್ ದಾಟಲು ಯತ್ನಿಸಿದ ಗಂಡಾನೆಯೊಂದು ಅದರಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟ ದುರಂತ ಮಂಗಳವಾರ ಮುಂಜಾನೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ವಲಯದ ನಡಾಹಡಿ ಬೀಟ್‍ನಲ್ಲಿ ನಡೆದಿದೆ.
ಮೊಳೆಯೂರು ಮತ್ತಿತರೆಡೆ ಕಾಡಾನೆಗಳು ಆನೆ ಕಾರಿಡಾರ್ ಮೂಲಕ ಕಾಡಂಚಿನ ಗ್ರಾಮಗಳಿಗೆ ರಾತ್ರಿ ವೇಳೆ ನುಸುಳಿ ಹೊಲ-ಗದ್ದೆಯಲ್ಲಿ ಬೆಳೆದ ಫಸಲನ್ನು ತಿಂದು ಬೆಳಗಾಗು ವಷ್ಟರಲ್ಲಿ ಕಾಡು ಸೇರುವ ಪರಿಪಾಠ ಹೊಂದಿವೆ. ಕಳೆದ ರಾತ್ರಿ ಕೆಬ್ಬೆಪುರ ಹಾಡಿ ಸುತ್ತಲ ಗ್ರಾಮಗಳ ಹೊಲಗಳಲ್ಲಿ ಬೆಳೆದಿದ್ದ ಫಸಲನ್ನು ತಿಂದು ಮುಂಜಾನೆ 5 ಗಂಟೆಗೆ ಕಾಡಿಗೆ ವಾಪಸಾಗು ವಾಗ 14-15 ವರ್ಷದ ಗಂಡಾನೆ 4 ಅಡಿ ಎತ್ತರದ ರೈಲ್ವೆ ಕಂಬಿಯ ಬ್ಯಾರಿಕೇಡ್ ದಾಟಲು ಯತ್ನಿಸಿದೆ. ರಾತ್ರಿ ಮಳೆ ಬಿದ್ದಿದ್ದರಿಂದ ಆನೆಯ ಕಾಲು ಜಾರಿದೆ. ಆಗ ಆನೆಯ ಕತ್ತು ಎರಡೂ ಕಂಬಿಗಳ ನಡುವೆ ಸಿಲುಕಿಕೊಂಡಿದ್ದರಿಂದ ಉಸಿರು ಗಟ್ಟಿ ಸಾವನ್ನಪ್ಪಿದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ವ್ಯಾಪ್ತಿಗೆ ಸೇರುವ ಹೆಚ್.ಡಿ.ಕೋಟೆ ತಾಲೂಕಿನ ಕೆಬ್ಬೆಪುರ ಹಾಡಿ ಸಮೀಪ ಈ ದುರ್ಘಟನೆ ನಡೆದಿದೆ. ವನ್ಯ ಜೀವಿಗಳು ನಾಡಿಗೆ ಬರದಂತೆ ತಡೆಯಲು ಅರಣ್ಯ ಇಲಾಖೆ ಅಳವಡಿಸಿದ ರೈಲ್ವೆ ಕಂಬಿ ಬ್ಯಾರಿಕೇಡ್ ಕಾಡಾನೆಯನ್ನು ಬಲಿ ಪಡೆದಿದೆ. ಘಟನೆ ನಡೆದ ಸ್ಥಳದಿಂದ 800 ಮೀ. ದೂರ ದಲ್ಲಿ ಕೆಬ್ಬೆಪುರ ಹಾಡಿ ಇದ್ದು, ಆನೆ ಘೀಳಿಡುವ ಶಬ್ದ ಕೇಳಿಸಿದ್ದರೂ, ಅಲ್ಲಿನ ನಿವಾಸಿಗಳು, ಆನೆಗಳ ಮಾಮೂಲಿ ಸದ್ದು ಎಂದು ನಿರ್ಲಕ್ಷಿಸಿದ್ದಾರೆ. ಇಂದು ಬೆಳಗ್ಗೆ 9 ಗಂಟೆ ಯಲ್ಲಿ ಹಾಡಿ ನಿವಾಸಿಗಳು ಬ್ಯಾರಿಕೇಡ್ ಬಳಿ ಹೋದಾಗ ಎರಡು ಕಂಬಿ ನಡುವೆ ಸಿಕ್ಕಿ ಹಾಕಿಕೊಂಡು ಮೃತಪಟ್ಟ ಗಂಡಾನೆ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇ ಶದ ನಿರ್ದೇಶಕ ಎಸ್.ಆರ್.ನಟೇಶ್, ಹೆಡಿಯಾಲ ಎಸಿಎಫ್ ರವಿಕುಮಾರ್, ಆರ್‍ಎಫ್‍ಓ ಜಿ.ಪುಟ್ಟರಾಜು ಭೇಟಿ ನೀಡಿ ಪರಿಶೀಲಿಸಿದರು. ಪಶುವೈದ್ಯ ಡಾ. ಡಿ.ಎನ್.ನಾಗರಾಜು, ಸಹಾಯಕ ರಂಗರಾಜು ಅವರೊಂದಿಗೆ ಮಧ್ಯಾಹ್ನ 3 ಗಂಟೆಗೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಆನೆಯ ದಂತವನ್ನು ಕತ್ತರಿಸಿ ಕೊನೆಗೆ ಕಳೇಬರವನ್ನು ಹೂಳಲಾಯಿತು.