ನಾಯಂಡಹಳ್ಳಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು
News

ನಾಯಂಡಹಳ್ಳಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು

January 8, 2022

ಬೆಂಗಳೂರು, ಜ.7-ಗೂಡ್ಸ್ ರೈಲೊಂದು ಹಳಿ ತಪ್ಪಿದ ಪರಿಣಾಮ ಬೆಂಗಳೂರು-ಮೈಸೂರು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡಿದ ಪ್ರಸಂಗ ಇಂದು ಮಧ್ಯಾಹ್ನ ಸಂಭವಿಸಿದೆ. ಬೆಂಗಳೂರಿನ ನಾಯಂಡಹಳ್ಳಿ ಬಳಿ ಕಲ್ಲುಗಳನ್ನು ತುಂಬಿಕೊಂಡು ಬರುತ್ತಿದ್ದ ಗೂಡ್ಸ್ ರೈಲಿನ ಬೋಗಿಯೊಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಹಳಿ ತಪ್ಪಿತು. ಇದರಿಂದ ರೈಲು ಹಳಿಗಳು ಕೂಡ ಸಣ್ಣ ಪ್ರಮಾಣದಲ್ಲಿ ಜಖಂಗೊಂಡವು. ತಕ್ಷಣ ಬೆಂಗಳೂರು-ಮೈಸೂರು ರೈಲುಗಳ ಸಂಚಾರವನ್ನು ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು. ಇದರಿಂದ ಪ್ರಯಾಣಿಕರು ಪರದಾಡಿದರು.

ವಿಷಯ ತಿಳಿದು ರೈಲ್ವೆ ಅಧಿಕಾರಿಗಳು ತಕ್ಷಣ ಇಲಾಖೆಯ ಇಂಜಿನಿಯರ್‍ಗಳು ಮತ್ತು ತಂತ್ರಜ್ಞರ ಜೊತೆ ಸ್ಥಳಕ್ಕೆ ಆಗಮಿಸಿ ಹಳಿ ತಪ್ಪಿದ ಗೂಡ್ಸ್ ರೈಲಿನ ಬೋಗಿಯನ್ನು ಸರಿ ಮಾಡುವ ಕಾರ್ಯದಲ್ಲಿ ನಿರತರಾದರು. ರಾಜ್ಯದಾದ್ಯಂತ ವೀಕೆಂಡ್ ಕಫ್ರ್ಯೂ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ-ತಮ್ಮ ಊರು ಸೇರಿಕೊಳ್ಳಲು ರೈಲುಗಳನ್ನು ಹತ್ತಿದ್ದರು. ಆದರೆ ಗೂಡ್ಸ್ ರೈಲು ಹಳಿ ತಪ್ಪಿದ ಕಾರಣ ನಿಂತಲ್ಲಿಯೇ ನಿಂತ ರೈಲಿನಿಂದ ಕೆಳಗೆ ಇಳಿದು ತಮಗಾಗಿ ಕಾಯುತ್ತಿದ್ದ ಕುಟುಂಬದವರಿಗೆ ರೈಲು ವಿಳಂಬವಾಗುತ್ತಿರುವ ವಿಷಯ ತಿಳಿಸುತ್ತಿದ್ದರು. ಇದರಿಂದ ಆತಂಕಗೊಂಡ ಕುಟುಂಬಸ್ಥರು `ಮೈಸೂರು ಮಿತ್ರ’ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ರೈಲು ಹಳಿ ತಪ್ಪಿದೆಯಂತೆ? ಏನಾದರೂ ಅನಾಹುತವಾಗಿದೆಯೇ? ಎಂದು ಪ್ರಶ್ನಿಸಲಾರಂಭಿಸಿದರು. ಸಂಜೆ 4.35ರ ವೇಳೆಗೆ ಬೆಂಗಳೂರು-ಮೈಸೂರು ರೈಲುಗಳ ಸಂಚಾರ ಆರಂಭಗೊಂಡಿತು. ನಾಯಂಡಹಳ್ಳಿ ಬಳಿ ಮಾತ್ರ ಸಿಂಗಲ್ ಟ್ರ್ಯಾಕ್ ಮೇಲೆ ರೈಲುಗಳು ಓಡಾಡಬೇಕಾಯಿತು. ಉಳಿದ ಕಡೆ ಮಾಮೂಲಿ ಡಬಲ್ ಟ್ರಾಕ್ ಮೂಲಕ ಸಂಚರಿಸಿದವು. ಸಂಜೆ 6.20ರಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲಿನ ಬೋಗಿಯನ್ನು ಮತ್ತೆ ಸ್ವಸ್ಥಾನಕ್ಕೆ ತಂದು, ಹಳಿಗಳಲ್ಲಿ ಉಂಟಾಗಿದ್ದ ಸಣ್ಣ-ಪುಟ್ಟ ಲೋಪಗಳನ್ನು ಸರಿಪಡಿಸಿದ ನಂತರ ಗೂಡ್ಸ್ ರೈಲು ಕೂಡ ಸಂಚಾರ ಆರಂಭಿಸಿತಲ್ಲದೆ, ಇತರ ರೈಲುಗಳೂ ಕೂಡ ನಾಯಂಡಹಳ್ಳಿ ಯಿಂದ ಜೋಡಿ ಟ್ರಾಕ್‍ಗಳ ಮೂಲಕ ಸಂಚರಿಸಿದವು. ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ಉಂಟಾಗಿದ್ದ ವ್ಯತ್ಯಯಕ್ಕೆ ರೈಲ್ವೆ ಇಲಾಖೆಯ ಅಧಿಕಾರಿಗಳು ವಿಷಾದಿಸಿದ್ದಾರೆ.

Translate »