ಜ. 26ರಿಂದ ರಾಜ್ಯದಲ್ಲಿ ಜೆಡಿಎಸ್ ‘ಜನತಾ ಜಲಧಾರೆ’
News

ಜ. 26ರಿಂದ ರಾಜ್ಯದಲ್ಲಿ ಜೆಡಿಎಸ್ ‘ಜನತಾ ಜಲಧಾರೆ’

January 8, 2022

ಬೆಂಗಳೂರು: ರಾಜ್ಯದ ಎಲ್ಲಾ ಭಾಗಗ ಳಿಗೂ ನೀರು ಒದಗಿಸುವ, ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ಮಹಾ ಸಂಕಲ್ಪದೊಂದಿಗೆ ಜೆಡಿಎಸ್ ಪಕ್ಷದಿಂದ ರಾಜ್ಯ ವ್ಯಾಪಿ ಇದೇ ಜನವರಿ 26ರಿಂದ ‘ಜನತಾ ಜಲ ಧಾರೆ’ ವಿಶೇಷ ಕಾರ್ಯ ಕ್ರಮ ಹಮ್ಮಿಕೊಳ್ಳಲಾ ಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಜನತಾ ಜಲಧಾರೆಗೆ ಹೊರಡಲಿರುವ ಗಂಗಾ ರಥವನ್ನು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು
ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದರು. ಬಳಿಕ ಹೆಚ್.ಡಿ.ಕುಮಾರಸ್ವಾಮಿ ಅವರು ಜನತಾ ಜಲಧಾರೆಯ ಪೂರ್ಣ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಜನತಾ ಜಲಧಾರೆಯ ಲಾಂಛನ ಬಿಡುಗಡೆ ಮಾಡಿ, ಮಾತನಾಡಿ, ಕರ್ನಾಟಕ ಅತಿವೃಷ್ಟಿ-ಅನಾವೃಷ್ಟಿಗೆ ತುತ್ತಾಗುವ ರಾಜ್ಯ. ಇದು ಪ್ರತೀ ವರ್ಷದ ಕಥೆ. ಅಗಾಧವಾಗಿ ಸುರಿಯುವ ಮಳೆ ನೀರನ್ನು ಪೆÇೀಲಾಗದಂತೆ ಬಳಕೆ ಮಾಡಿಕೊಳ್ಳುವುದು ಹಾಗೂ ವರುಣನ ಕೃಪೆ ಇಲ್ಲದೆ ಸದಾ ಬರದಿಂದ ತತ್ತರಿಸುವ ಬಯಲುಸೀಮೆ ಯನ್ನು ಜಲಶ್ಯಾಮಲಗೊಳಿಸುವ ಕನಸು ನಮ್ಮದು. ಸಸ್ಯಶ್ಯಾಮಲದ ಕನಸಿನೊಂದಿಗೆ ಕೃಷಿಗೆ ಸಮೃದ್ಧ ನೀರು ಹಾಗೂ ಜಲ ಶ್ಯಾಮಲಕ್ಕಾಗಿ ಕುಡಿಯಲು ಸಮೃದ್ಧ ನೀರು ಒದಗಿಸುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಜಾತ್ಯತೀತ ಜನತಾ ದಳ ಏನು ಮಾಡುತ್ತದೆ? ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ? ಎಂಬ ಬಗ್ಗೆ ಜನರಿಗೆ ಹೇಳುತ್ತೇವೆ. ಗಂಗೆಯನ್ನು ಪರಮ ಪವಿತ್ರವೆಂದು ಭಾವಿಸುವ ಪರಂಪರೆ ನಮ್ಮದು. ಈ ನಂಬಿಕೆಗೆ ಚ್ಯುತಿ ಬಾರದಂತೆ ಶ್ರದ್ಧಾ ಭಕ್ತಿಯಿಂದ ರಾಜ್ಯದ 15 ನದಿಗಳ ಪವಿತ್ರ ಜಲವನ್ನು ಕಲಶಗಳಲ್ಲಿ ಸಂಗ್ರಹ ಮಾಡಿ, ಆ ನೀರನ್ನು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನಕ್ಕೆ ಬರಮಾಡಿಕೊಂಡು ಗಂಗಾಪೂಜೆ ನೆರವೇರಿಸುವುದು.

ಜ.23ಕ್ಕೆ ಗಂಗಾ ರಥಗಳಿಗೆ ಹಸಿರು ನಿಶಾನೆ: ಜನವರಿ 23ರಂದು ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇಗುಲದಿಂದ ರಾಜ್ಯದ 15 ದಿಕ್ಕುಗಳಿಗೆ ಹೊರಡುವ ಗಂಗಾ ರಥಗಳಿಗೆ (15 ವಾಹನಗಳು) ನಾನು, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆದ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಕೆ.ಕುಮಾರಸ್ವಾಮಿ ಚಾಲನೆ ನೀಡುವರು.

ಜ.26ರಿಂದ ಜಲಧಾರೆ ಆರಂಭ: ಜನವರಿ 26ರಂದು ಇಷ್ಟೂ ವಾಹನಗಳಲ್ಲಿ ಅಳವಡಿಸಲಾಗಿರುವ ಕಲಶಗಳ ಮೂಲಕ ಪೂರ್ವ ನಿಗದಿ ಮಾಡಲಾಗಿರುವ ಸ್ಥಳಗಳಲ್ಲಿ ಬೆಳಗ್ಗೆ 9 ಗಂಟೆಗೆ ಕಾವೇರಿ, ಕಬಿನಿ, ಮೇಕೆದಾಟು, ಹೇಮಾವತಿ, ನೇತ್ರಾವತಿ, ಕುಮಾರಧಾರ, ತುಂಗಭದ್ರಾ, ಶರಾವತಿ, ಅಘನಾಶಿನಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ಅರ್ಕಾವತಿ, ಉತ್ತರ ಪಿನಾಕಿನಿ, ಚಿತ್ರಾವತಿ ಸೇರಿ 15 ಸ್ಥಳಗಳಲ್ಲಿ ಮೊದಲ ದಿನ ಜಲ ಸಂಗ್ರಹ ಮಾಡಲಾಗುವುದು. ಜಲ ಸಂಗ್ರಹ ಮಾಡುವ ದಿನ ರಾಜ್ಯದ ವಿವಿಧ ಭಾಗಗಳಲ್ಲಿ ನಾನು, ದೇವೇಗೌಡರು, ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಸಾ.ರಾ.ಮಹೇಶ್, ನಾಡಗೌಡರು, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿದಂತೆ ಪಕ್ಷದ ಎಲ್ಲ ನಾಯಕರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಒಟ್ಟು 51 ಕಡೆ ಜಲ ಸಂಗ್ರಹ: ಇಡೀ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 51 ಸ್ಥಳಗಳಲ್ಲಿ ಪವಿತ್ರ ನದಿಗಳ ಜಲ ಸಂಗ್ರಹ ಮಾಡಲಾಗುವುದು. ರಾಜ್ಯದ 180 ವಿಧಾನಸಭೆ ಕ್ಷೇತ್ರಗಳು, 140 ತಾಲ್ಲೂಕು ಕೇಂದ್ರಗಳಲ್ಲಿ ಈ ಕಲಶಗಳು ಹಾದು ಹೋಗಲಿದ್ದು, ಎಲ್ಲೆಡೆ ಜಲ ತುಂಬಿದ ಕಲಶಗಳ ಮೆರೆವಣಿಗೆ, ಕಲಾ ತಂಡಗಳ ಮೆರಗು, ಮಂಗಳವಾದ್ಯಗಳ ಮೇಳ, ಕಲಶಗಳೊಂದಿಗೆ ಮಹಿಳೆಯರ ನಡಿಗೆ ನಡೆಯಲಿದೆ. ದಿನಂಪ್ರತಿ 15 ಕಡೆ ಇಂಥ ಕಾರ್ಯಕ್ರಮಗಳು ನಡೆಯಲಿವೆ.

ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ: ರಾಜ್ಯದ ಉದ್ದಗಲಕ್ಕೂ ಸಾಗಿ ಬರುವ ಈ ಹದಿನೈದೂ ವಾಹನಗಳು 15-20 ದಿನಗಳ ಒಳಗಾಗಿ ಬೆಂಗಳೂರು ತಲುಪುತ್ತವೆ. ಅಂದು ಇಡೀ ಬೆಂಗಳೂರನ್ನು ಪ್ರದಕ್ಷಿಣೆ ಹಾಕುವ ಇಷ್ಟೂ ವಾಹಗಳು ಅದೇ ದಿನ ಸಂಜೆ ಅರಮನೆ ಮೈದಾನದಲ್ಲಿ ಸೇರಲಿವೆ. ಆ ನಂತರ ಎರಡು ದಿನಗಳಲ್ಲಿ ಒಂದು ಬೃಹತ್ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಉದ್ದಗಲಕ್ಕೂ ಸಂಗ್ರಹಿಸಲಾದ ಜಲವನ್ನು ದೊಡ್ಡ ಕಲಶಕ್ಕೆ ತುಂಬಿಸಿ ಗಂಗಾ ಪೂಜೆ, ಗಂಗಾ ಆರತಿ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು. ಆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು, ನಾಡಿನ ಧರ್ಮಗುರುಗಳು, ಗುರು ಹಿರಿಯರು ಸೇರಿ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.
ವರ್ಷವಿಡೀ ಗಂಗಾ ಪೂಜೆ: ಆ ಕಾರ್ಯಕ್ರಮ ಮುಗಿದ ನಂತರ ಪೂಜಿಸಲ್ಪಟ್ಟಿದ್ದ ಪವಿತ್ರ ಜಲವುಳ್ಳ ಕಲಶವನ್ನು ಬೆಂಗಳೂರಿನ ವಿವಿಧೆಡೆಗಳಿಂದ ಮೆರವಣಿಗೆ ಮೂಲಕ ಪಕ್ಷದ ರಾಜ್ಯ ಕಚೇರಿ ಜೆಪಿ ಭವನಕ್ಕೆ ವಿದ್ಯುಕ್ತವಾಗಿ ಬರ ಮಾಡಿಕೊಂಡು ಆ ಕಲಶ ಪ್ರತಿಷ್ಠಾಪನೆ ಮಾಡಲಾಗುವುದು. ಅಂದಿನಿಂದ ಮುಂದಿನ 391 ದಿನಗಳ ಕಾಲ ಗಂಗಾ ಪೂಜೆ, ಗಂಗಾ ಆರತಿ ನಿರಂತರವಾಗಿ ನಡೆಯಲಿದೆ. ಆ ನಿತ್ಯ ಪೂಜೆಯಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ನಮಗೆ ಧಾವಂತವಿಲ್ಲ. ವೈರಸ್ ನಿಯಂತ್ರಣಕ್ಕೆ ಸರಕಾರ ಜಾರಿ ಮಾಡುವ ಎಲ್ಲಾ ನಿಯಮಗಳಿಗೆ ಬದ್ಧರಾಗಿ ಜಲಧಾರೆ ಕಾರ್ಯಕ್ರಮ ನಡೆಸುತ್ತೇವೆ. ಕಾಂಗ್ರೆಸ್ ನಾಯಕರಂತೆ ಅನುಮತಿ ಕೊಡದಿದ್ದರೆ ಪ್ರಾಣ ಬಿಡುತ್ತೇವೆ ಎಂದು ನಾವು ಬೆದರಿಕೆ ಹಾಕುವುದಿಲ್ಲ ಎಂದರು.

Translate »