ಸಾವಿರಾರು ಮಂದಿಗೆ ಪ್ರಯೋಜನ: ಶಾಸಕ ಎಸ್.ಎ.ರಾಮದಾಸ್ ಸಂತಸ
ಮೈಸೂರು

ಸಾವಿರಾರು ಮಂದಿಗೆ ಪ್ರಯೋಜನ: ಶಾಸಕ ಎಸ್.ಎ.ರಾಮದಾಸ್ ಸಂತಸ

January 8, 2022

ಮೈಸೂರು, ಜ.7(ಆರ್‍ಕೆಬಿ)- ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಆಯೋಜಿಸಿದ್ದ ನಾಲ್ಕು ದಿನಗಳ ಬೃಹತ್ ಉದ್ಯೋಗ, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ನೋಂದಾವಣಿ ಕಾರ್ಯಕ್ರಮ ಶುಕ್ರವಾರ ಸಮಾರೋಪಗೊಂಡಿದ್ದು, ನಾಲ್ಕು ದಿನಗಳ ಅವಧಿಯಲ್ಲಿ ಸಾವಿರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಮೈಸೂರಿನ ಸಮರ್ಥ ಕಲ್ಯಾಣ ಮಂದಿರ ದಲ್ಲಿ ನಡೆದ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮ ದಾಸ್, ದೇಶಕ್ಕೆ ಒಂದು ಹೊಸ ಮಾದರಿ ನೀಡಬೇಕೆಂಬ ಚಿಂತನೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಜನರ ಪರಿಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ ಎಂಬುದೇ ನನಗೆ ಸಂತಸದ ವಿಚಾರ ಎಂದರು.
ಮೇಯರ್ ಸುನಂದಾ ಪಾಲನೇತ್ರ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಶಾಸಕ ರಾಮದಾಸ್ ಅವರು ಪ್ರಧಾನಮಂತ್ರಿ ಮೋದಿಯವರ ಸ್ಕಿಲ್ ಇಂಡಿಯಾಗೆ ಹೆಚ್ಚು ಒತ್ತು ನೀಡಿದ್ದಾರೆ. ಇಂತಹ ಕಾರ್ಯಕ್ರಮ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ನಡೆಯುವಂತಾದರೆ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ಹೇಳಿದರು.

ನಗರಪಾಲಿಕೆ ಆಡಳಿತ ಪಕ್ಷದ ನಾಯಕ ಶಿವಕುಮಾರ್ ಮಾತನಾಡಿ, ಶಾಸಕ ರಾಮದಾಸ್ ಏನೇ ಮಾಡಿದರು ಅದರಲ್ಲಿ ವಿಶೇಷತೆ ಇರುತ್ತದೆ. ಇತ್ತೀಚೆಗೆ ಆಯೋಜಿಸಿದ್ದ ಮೋದಿ ಯುಗ್ ಉತ್ಸವದ ಸಮಯದಲ್ಲಿ ಸುಮಾರು 71 ಸಾವಿರ ಜನರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸಿದ್ದಾರೆ. ಈಗ ವಿದ್ಯಾರ್ಥಿಗಳಿಂದ ಪ್ರಾರಂಭಿಸಿ ಕಡಿಮೆ ವಿದ್ಯಾಭ್ಯಾಸ ಇರುವವರಿಗೂ ಸಹ ಉದ್ಯೋಗ ಹಾಗೂ ಕೌಶಲ್ಯ ನೀಡುವ ಪ್ರಯತ್ನ ಮಾಡಿದ್ದಾರೆ. ಇವರ ಇಂತಹ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಶಾಸಕ ರಾಮದಾಸ್ ಅವರು ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಚಂಪಕ, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರಕುಮಾರ್, ಉಪಾಧ್ಯಕ್ಷರಾದ ಸಂತೋಷ್ ಶಂಭು, ಜೆ.ರವಿಕುಮಾರ್, ದೇವರಾಜೇಗೌಡ, ಒಬಿಸಿ ಮೋರ್ಚಾದ ಶಿವಪ್ಪ, ಯುವ ಮೋರ್ಚಾ ಅಧ್ಯಕ್ಷ ಮನು ಶೈವ, ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಗೌರಿ, ಅನ್ನಪೂರ್ಣ, ವಾರ್ಡ್ ಉಸ್ತುವಾರಿಗಳಾದ ಮುರುಳಿ , ರವಿ, ಮಧು, ಗೋವಿಂದ್, ಡಿಪೆÇೀ ರವಿ, ಗಿರೀಶ್ ಗೌಡ, ಆದರ್ಶ್, ಶಾಂತವೀರಪ್ಪ, ಗೋಪಾಲ್, ಅಭಿಲಾಷ್, ಸಂಪತ್, ಮಾಯ ಜಗದೀಶ್ ಇನ್ನಿತರರು ಉಪಸ್ಥಿತರಿದ್ದರು.

Translate »