ಮಹೇಶ ಅರಬಳ್ಳಿ ಅವರ `ನೆನಪಿನ ಡಬ್ಬಿ’ ಪುಸ್ತಕ ಬಿಡುಗಡೆ
ಮೈಸೂರು

ಮಹೇಶ ಅರಬಳ್ಳಿ ಅವರ `ನೆನಪಿನ ಡಬ್ಬಿ’ ಪುಸ್ತಕ ಬಿಡುಗಡೆ

January 8, 2022

ಮೈಸೂರು, ಜ.7(ಎಸ್‍ಪಿಎನ್)- ಲೇಖಕ ಮಹೇಶ ಅರಬಳ್ಳಿ ಅವರು ತಮ್ಮ ತಂದೆ ಕುರಿತು ರಚಿಸಿದ `ನೆನಪಿನ ಡಬ್ಬಿ’ ಪುಸ್ತಕವನ್ನು ಹಿರಿಯ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಶುಕ್ರವಾರ ಮೈಸೂರು ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಕಲಾ ಕೂಟ ಹಾಗೂ ಕವಿತಾ ಪ್ರಕಾಶನ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಓ.ಎಲ್.ನಾಗಭೂಷಣ ಸ್ವಾಮಿ ಅವರು, ಲೇಖಕ ಮಹೇಶ ಅರಬಳ್ಳಿ ಬರೆದಿರುವ `ನೆನಪಿನ ಡಬ್ಬಿ’ ಪುಸ್ತಕ, ಅವರ ತಂದೆಯ ವ್ಯಕ್ತಿ ಚಿತ್ರಣವೂ ಹೌದು, ಜೀವನ ಚರಿತ್ರೆಯೂ ಹೌದು. ಅಂತಯೇ ಲೇಖಕರ ಆತ್ಮಚರಿತ್ರೆಯೂ ಹೌದು. ಇತ್ತೀಚಿನ ಲೇಖಕರು ತಮ್ಮ ವ್ಯಕ್ತಿಚಿತ್ರಣದಲ್ಲಿ ಋಣಾತ್ಮಕ ಅಂಶಗಳನ್ನು ಉಲ್ಲೇಖ ಮಾಡುವವರೆ ಹೆಚ್ಚಾಗಿದ್ದಾರೆ. ಇಂಥವರ ನಡುವೆ ಲೇಖಕ ಮಹೇಶ್ ಅರಬಳ್ಳಿ ತಮ್ಮ ಬರಹದಲ್ಲಿ ಹೆಚ್ಚು ಖುಷಿ ವಿಚಾರಗಳನ್ನೇ ಉಲ್ಲೇಖಿಸಿ, ಸಾರಸ್ವತ ಲೋಕದಲ್ಲಿ ವಿಭಿನ್ನ ಲೇಖಕರಾಗಿ ಹೊರಹೊಮ್ಮಿದ್ದಾರೆ ಎಂದರು.

ಲೇಖಕ ಮಹೇಶ, ನಮ್ಮ-ನಿಮ್ಮಂತೆ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ಜೀವನದ ಏಳು-ಬೀಳು ಕಂಡಿದ್ದಾರೆ. ಅವರ ಬೆಳವಣಿಗೆಯಲ್ಲಿ ಅಪ್ಪ-ಅಮ್ಮ ಹಾಗೂ ಸಹೋದರರ ಪಾತ್ರಗಳು ಮುಖ್ಯ ಪಾತ್ರವಹಿಸಿದೆ. ಮಹೇಶ ಅವರ ಬಾಲ್ಯಾವಸ್ಥೆಯಲ್ಲಿ ಸಿಗುವ ಸೌಲಭ್ಯಗಳನ್ನು ಕೊಡುವ ಸಂದರ್ಭದಲ್ಲಿ ಮಹೇಶ ಅವರ ತಂದೆ ತಮ್ಮ ಜವಾಬ್ದಾರಿ ವಹಿಸಿದ್ದಾರೆ. ಈ ಅನುಭವಗಳು ನಮ್ಮ-ನಿಮ್ಮ ಜೀವನದಲ್ಲೂ ನಡೆದಿವೆ. ಹಾಗಾಗಿ ಮಹೇಶ ಅರಬಳ್ಳಿ `ನೆನಪಿನ ಡಬ್ಬಿ’ ಪುಸ್ತಕ ಓದುಗರನ್ನು ಸೆಳೆಯುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಲೇಖಕ ಮಹೇಶ ಅರಬಳ್ಳಿ ಅವರು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ, ಕುಟುಂಬದೊಂದಿಗಿನ ಒಡನಾಟ ಎಲ್ಲರಿಗೂ ಮಾದರಿಯಾಗಿದೆ. ಅವರ ತಂದೆ-ತಾಯಿ, ಅಣ್ಣ-ತಮ್ಮ, ಸಹೋದರರೊಂದಿಗಿನ ಬಾಂಧವ್ಯವನ್ನು `ನೆನಪಿನ ಡಬಿ’್ಬ ಪುಸ್ತಕದಲ್ಲಿನ ಬಿಡಿ ಬಿಡಿ ಲೇಖನಗಳ ಕಾಣಬಹುದು ಎಂದರು.
ಅವರ `ಮಣ್ಣಿನ ಗುಡ್ಡ’, `ದೊಡ್ಡ ಸಮಸ್ಯೆಗೆ ಸಣ್ಣ ದಾರಿ’, `ಮನೆ-ಮನ-ದೇವರು’, `ಅಟ್ಟದ ಅಚ್ಚರಿ’, `ಶಾಲೆಗೆ ಬೀಗ’, `ಹಸಿರಾಗಿ ಉಳಿದ ಅಜ್ಜಿಯ ಹಸಿರು ಪರ್ಸು’, `ಈ ಅಂಗಿಗೆ ಆ ಪ್ಯಾಂಟು’, `ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿ’, `ಅಪ್ಪ ಸ್ನೇಹಿತನಾದ ಕ್ಷಣ’, `ನೀಲಿ ಹವಾಯಿ ಚಪ್ಪಲಿ’, `ಹಿಟ್ಟಿನ ಗಿರಣಿಯೆಂಬ ಕಾರ್ಖಾನೆ’, `ಅವಕಾಶಗಳೇ ತೂಕದ ಬೊಟ್ಟುಗಳು’, `ನೈಜತೆ ಹಂಬಲದ ಅಪ್ಪ’, `ಅಮೂರ್ತ ಅಪ್ಪನ ಪರಿಣಾಮ’, `ಚಾಮುಂಡಿ ಬೆಟ್ಟದ ಆಕರ್ಷಣೆ’, `ತೆಳುಪದರ ಸಂಜೆ’ ಹಾಗೂ `ಪ್ರಕೃತಿಯಲ್ಲಿ ಲೀನವಾದ ಅಪ್ಪ’ ಲೇಖನ ಸೇರಿದಂತೆ ಒಟ್ಟು 57 ಬಿಡಿ ಬಿಡಿ ಲೇಖನಗಳು ಗಮನ ಸೆಳೆಯಲಿವೆ ಎಂದರು.

ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳೇ ಮಾಯವಾಗುವ ಸಂದರ್ಭದಲ್ಲಿ ಲೇಖಕ ಮಹೇಶ ಅರಬಳ್ಳಿ ಬರಹಗಳು ಇಂದಿನ ಯುವಕರಿಗೆ ಹಾಗೂ ನಗರ ಪ್ರದೇಶದ ಕುಟುಂಬಗಳಿಗೆ ನೆಮ್ಮದಿ ನೀಡುವ ವಿಚಾರವಾಗಿದೆ. ಈ ನಿಟ್ಟಿನಲ್ಲಿ `ನೆನಪಿನ ಡಬ್ಬಿ’ ಪುಸ್ತಕವನ್ನು ಎಲ್ಲರೂ ಖರೀದಿಸಿ ಓದುವಂತೆ ಮನವಿ ಮಾಡಿದರು. ವೇದಿಕೆಯಲ್ಲಿ ಕನ್ನಡ ಕಲಾ ಕೂಟದ ಎಂ.ಚಂದ್ರಶೇಖರ್, ಕವಿತಾ ಪ್ರಕಾಶನದ ಗಣೇಶ್ ಅಮೀನಗಡ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಉಪಸ್ಥಿತರಿದ್ದರು.

Translate »