ಕೆ.ಆರ್.ಪೇಟೆಯಲ್ಲಿ ಮಳೆ; ಅಂಗಡಿಗಳಿಗೆ ನುಗ್ಗಿದ ನೀರು
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಮಳೆ; ಅಂಗಡಿಗಳಿಗೆ ನುಗ್ಗಿದ ನೀರು

August 23, 2021

ಕೆ.ಆರ್.ಪೇಟೆ, ಆ.22(ಶ್ರೀನಿವಾಸ್)- ಪಟ್ಟಣದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರು ಇರುವ ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು, ಎಲೆಕ್ಟ್ರಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ ಸಾಮಗ್ರಿಗಳು ನಷ್ಟವಾಗಿದೆ.
ಪಟ್ಟಣದ ಬಸ್ ನಿಲ್ದಾಣ ಎದುರಿನ ಮುಖ್ಯ ರಸ್ತೆಯಲ್ಲಿರುವ 10 ಕ್ಕೂ ಹೆಚ್ಚು ಬಟ್ಟೆ ಅಂಗಡಿ, ದಿನಸಿ ಅಂಗಡಿ ಹಾಗೂ ಮೊಬೈಲ್ ಅಂಗಡಿಗಳಿಗೆ ನೀರು ನುಗ್ಗಿದರಿಂದ 50 ಲಕ್ಷಕ್ಕೂ ಹೆಚ್ಚು ನಷ್ಟ ಆಗಿದೆ. ಮಹಾಲಕ್ಷ್ಮಿ ಬಟ್ಟೆ ಅಂಗಡಿಯ ನಾರಾಯಣ್ ಮತ್ತು ಮಹೇಂದ್ರ ಪಟೇಲ್ ಅವರಿಗೆ ಸೇರಿದ ಅಂಗಡಿಯಲ್ಲಿ 20 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಬಟ್ಟೆಗಳು ನೀರು ಪಾಲಾಗಿದೆ. ಅಲ್ಲದೆ ಮಾರುತಿ ಸ್ಟುಡಿಯೋ, ಶ್ರೀರಂಗ ಸ್ಯಾರಿ ಸೆಂಟರ್ ಸೇರಿದಂತೆ ಹಲವು ಅಂಗಡಿಗಳಿಗೆ ಚರಂಡಿ ಮೂಲಕ ನುಗ್ಗಿದ ಮಳೆಯ ನೀರು ಸಾಕಷ್ಟು ಹಾನಿಯುಂಟು ಮಾಡಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲ್ಲದೆ ವ್ಯಾಪಾರಕ್ಕೆ ಬಹುತೇಕ ಬಟ್ಟೆಗಳು ಬಳಕೆಗೆ ಇಲ್ಲದಂತೆ ಆಗಿದೆ ಎಂದು ಬಟ್ಟೆ ಅಂಗಡಿಯ ಮಾಲೀಕರು ತಮ್ಮ ನೋವು ಹಂಚಿಕೊಂಡಿದ್ದಾರೆ. ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಂಗಡಿ ಮಾಲೀಕರಿಗೆ ಸರ್ಕಾರವು ಸೂಕ್ತ ಪರಿಹಾರ ಒದಗಿಸುವಂತೆ ಮಾರ್ವಾಡಿ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಇಷ್ಟೆಲ್ಲಾ ಅವಾಂತರಗಳಿಗೆ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಪ್ರಮುಖ ಕಾರಣವಾಗಿದೆ ಎಂದು ದೂರಲಾಗಿದೆ. ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಕಳೆದ 10 ವರ್ಷಗಳಿಂದಲೂ ನಡೆಯುತ್ತಿದ್ದು, ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಅಂಗಡಿ ಮಳಿಗೆಗಳಿಗೆ ನುಗ್ಗಿದೆ. ತಾಲೂಕಿನವರೇ ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಕೂಡಲೇ ಪಟ್ಟಣದಲ್ಲಿ ಅಧ್ವಾನಗೊಂಡಿರುವ ಚರಂಡಿ ವ್ಯವಸ್ಥೆ ಹಾಗೂ ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ಗಮನ ಹರಿಸಬೇಕು. ಮಳೆ ಬಂದರೆ ಕರೆಯಂತಾಗುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಪಟ್ಟಣದ ಜನತೆಗೆ ಅನುಕೂಲ ಮಾಡಿಕೊಡಬೇಕು ಪಟ್ಟಣದ ನಾಗರಿಕರು ಒತ್ತಾಯ ಮಾಡಿದ್ದಾರೆ.

Translate »