ಮೈಸೂರು, ಫೆ.4(ಎಂಟಿವೈ)- ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಮೈಸೂರಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕ್ಯಾನ್ಸರ್ ಕುರಿತ ಜಾಗೃತಿ ನಡಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಕ್ಯಾನ್ಸರ್ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ಸಹ ಯೋಗದಲ್ಲಿ ಇಂದು ಬೆಳಗ್ಗೆ ಅರಮನೆಯ ಉತ್ತರ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಕ್ಯಾನ್ಸರ್ ಜಾಗೃತಿ ನಡಿಗೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಹೆಚ್.ಪ್ರಸಾದ್ ಹಸಿರು ನಿಶಾನೆ ತೋರಿ ಸುವ ಮೂಲಕ ಚಾಲನೆ ನೀಡಿದರು.
ಸೂಕ್ತ ಚಿಕಿತ್ಸೆ ದೊರೆತರೆ ಶೇ.50ರಷ್ಟು ಸಾವು ತಪ್ಪಿಸಬಹುದು: ಬಳಿಕ ಡಿಹೆಚ್‍ಓ ಡಾ.ಕೆ.ಹೆಚ್. ಪ್ರಸಾದ್ ಮಾತನಾಡಿ, ದೇಶದಲ್ಲಿ ಪತ್ತೆಯಾಗುತ್ತಿರುವ ಕ್ಯಾನ್ಸರ್ ಪೀಡಿತರಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರಕದೇ ಶೇ.50ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದನ್ನು ಮನಗಂಡು ವಿಶ್ವ ಆರೋಗ್ಯ ಸಂಸ್ಥೆ ಈ ಬಾರಿ ಕ್ಯಾನ್ಸರ್ ದಿನವನ್ನು `ಆರೈಕೆಯ ಅಂತರವನ್ನು ಕಡಿತಗೊಳಿಸಿ’ ಘೋಷಣೆ ಯೊಂದಿಗೆ ಆಚರಿಸುತ್ತಿದೆ. ಇದರ ಅರ್ಥ ಕ್ಯಾನ್ಸರ್ ಸೋಂಕು ಇರುವುದನ್ನು ಆರಂಭ ದಲ್ಲಿಯೇ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ಕೊಡಿಸು ವುದೇ ಆಗಿದೆ. ಸೋಂಕು ಇರುವುದು ಆರಂಭದ ಹಂತದಲ್ಲಿಯೇ ಪತ್ತೆಯಾದರೆ ಗುಣಪಡಿಸ ಬಹುದಾಗಿದೆ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕರೆ ಸಾವಿನ ದವಡೆಯಿಂದ ಪಾರಾಗಬಹುದು ಎಂದು ಅಭಿಪ್ರಾಯಪಟ್ಟರು.
ಅತೀ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವುದು, ಮದ್ಯಪಾನ, ಧೂಮಪಾನ, ಪಾನ್‍ಪರಾಗ್, ಗುಟ್ಕಾ ಸೇರಿದಂತೆ ಇನ್ನಿತರ ಚಟಕ್ಕೆ ದಾಸರಾಗಿರುವವರು ಹಾಗೂ ವ್ಯಾಯಾಮ ಮತ್ತು ದೈಹಿಕ ಕಸರತ್ತು ಮಾಡದೇ ಇರು ವವರಿಗೆ ಕ್ಯಾನ್ಸರ್ ಸೋಂಕು ಕಾಣಿಸಿಕೊಳ್ಳುತ್ತದೆ. ಪುರುಷರಿಗೆ ಲಂಗ್ಸ್ ಕ್ಯಾನ್ಸರ್, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಎರಡು ವರ್ಷಕ್ಕೊಮ್ಮೆ ಯಾದರೂ ಆರೋಗ್ಯ ತಪಾಸಣೆ ಮಾಡಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ದೇಶದಲ್ಲಿ 22 ಲಕ್ಷ ಕ್ಯಾನ್ಸರ್ ಪೀಡಿತರಿದ್ದಾರೆ. 2018ರಲ್ಲಿ ದೇಶದಲ್ಲಿ ಒಂದೇ ವರ್ಷ 11 ಲಕ್ಷ ಮಂದಿ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಬಳಿಕ ಪ್ರತಿ ವರ್ಷ 7 ರಿಂದ 9 ಲಕ್ಷಮಂದಿ ಕ್ಯಾನ್ಸರ್ ಪೀಡಿತರು ಪತ್ತೆಯಾಗುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 3-4 ಸಾವಿರ ಮಂದಿ ಕ್ಯಾನ್ಸರ್ ಪೀಡಿತರಿ ದ್ದಾರೆ. ಈಗ ಉತ್ತಮ ಚಿಕಿತ್ಸೆ ಲಭ್ಯವಿರುವು ದರಿಂದ ಕ್ಯಾನ್ಸರ್ ಪೀಡಿತರು ಪ್ರಾಣಾಪಾಯ ದಿಂದ ಪಾರಾಗಬಹುದು. ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ಚಿಕಿತ್ಸಾ ಪದ್ಧತಿ, ಪರಿಣಾಮ ಕಾರಿಯಾದ ಔಷಧಿ ಲಭ್ಯವಿರುವ ಕಾರಣ ಕ್ಯಾನ್ಸರ್ ಸೋಂಕಿತರು ಹಾಗೂ ಅವರ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದು ಕೊಳ್ಳಲು ಮುಂದಾಗಬೇಕು ಎಂದರು.
ಗಮನ ಸೆಳೆದ ಜಾಥಾ: ಅರಮನೆ ಮುಂಭಾಗದಿಂದ ಆರಂಭವಾದ ಕ್ಯಾನ್ಸರ್ ಜಾಗೃತಿ ಜಾಥಾ ಪುರಭವನ, ದೊಡ್ಡಗಡಿ ಯಾರ, ಚಿಕ್ಕಗಡಿಯಾರ ವೃತ್ತ, ಡಿ.ದೇವರಾಜ ಅರಸ್ ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬಾ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೂ ಜಾಥಾ ನಡೆಸಿದರು. ಈ ವೇಳೆ ವೈದ್ಯಕೀಯ ವಿದ್ಯಾರ್ಥಿಗಳು ಭಿತ್ತಿ ಫಲಕ ಹಿಡಿದುಕೊಂಡು `ಕ್ಯಾನ್ಸರ್ ಪೀಡಿತರು ಆತಂಕಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಡಾ.ಉದಯ್ ಕುಮಾರ್, ಜಿಲ್ಲಾ ಸರ್ವೆಲನ್ಸ್ ಅಧಿಕಾರಿ ಡಾ. ಶಿವಪ್ರಸಾದ್, ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆ ಹಿರಿಯ ವೈದ್ಯ ಡಾ.ಅರವಿಂದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.