ರಾಜ್ಯಸಭೆ ಚುನಾವಣೆ: 4 ಸ್ಥಾನಕ್ಕೆ 6 ಮಂದಿ ಸ್ಪರ್ಧೆ ನಂಬರ್ ಗೇಮ್ ಸ್ಟಾರ್ಟ್
News

ರಾಜ್ಯಸಭೆ ಚುನಾವಣೆ: 4 ಸ್ಥಾನಕ್ಕೆ 6 ಮಂದಿ ಸ್ಪರ್ಧೆ ನಂಬರ್ ಗೇಮ್ ಸ್ಟಾರ್ಟ್

June 4, 2022

ಬೆಂಗಳೂರು, ಜೂ. 3-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಜೂ.10ರಂದು ನಡೆಯ ಲಿ ರುವ ಚುನಾವಣೆಗೆ 6 ಅಭ್ಯರ್ಥಿ ಗಳು ಅಂತಿಮ ಕಣದಲ್ಲಿದ್ದಾರೆ.

ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾವೊಬ್ಬ ಅಭ್ಯರ್ಥಿಯು ನಾಮಪತ್ರ ಹಿಂಪಡೆ ಯದ ಕಾರಣ 4ನೇ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಕುತೂಹಲಕ್ಕೆ ಎಡೆಮಾಡಿದೆ.

ವಿಧಾನಸಭಾ ಸದಸ್ಯರ ಸಂಖ್ಯಾ ಬಲದ ಆಧಾರದ ಮೇರೆಗೆ ಬಿಜೆಪಿ 2 ಹಾಗೂ ಕಾಂಗ್ರೆಸ್ 1 ಸ್ಥಾನವನ್ನು ಪ್ರಥಮ ಪ್ರಾಶಸ್ತ್ಯ ಮತದಲ್ಲೇ ಗೆಲ್ಲ ಬಹುದಾಗಿದ್ದು, 4ನೇ ಸ್ಥಾನ ಗೆಲ್ಲಲು ಯಾವುದೇ ಪಕ್ಷವೂ ಸಂಖ್ಯಾಬಲ ಹೊಂದಿಲ್ಲವಾದರೂ ಮೂರು ಪಕ್ಷಗಳು ಪ್ರತಿಷ್ಠೆಗೆ ಬಿದ್ದು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
4ನೇ ಅಭ್ಯರ್ಥಿ ಪ್ರಥಮ ಪ್ರಾಶಸ್ತ್ಯ ಮತದಲ್ಲೇ ಗೆಲ್ಲಬೇಕಾದರೆ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಶಾಸಕರನ್ನು ಸೆಳೆಯಬೇಕಾಗುತ್ತದೆ. ಒಂದು ವೇಳೆ ಈ ಕೆಲಸ ವಿಫಲವಾದರೆ 2ನೇ ಪ್ರಾಶಸ್ತ್ಯ ಮತ ದಲ್ಲಿ ಬಿಜೆಪಿಗೆ 4ನೇ ಸ್ಥಾನ ಒಲಿಯಲಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ. ತನ್ನ ಅಭ್ಯರ್ಥಿ ಗೆಲುವು ಅಸಾಧ್ಯವೆಂದು ಜೆಡಿಎಸ್ ಮುಖಂಡರು ಭಾವಿಸಿದಂತಿದೆ. ಅಭ್ಯರ್ಥಿ ಗೆಲ್ಲದೆ ಇದ್ದರೂ ಪರವಾಗಿಲ್ಲ ತಮ್ಮ ಶಾಸಕರು ಅಡ್ಡ ಮತದಾನ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಜೆಡಿಎಸ್ ನಿಗಾ ವಹಿಸಿದೆ ಎಂದು ಹೇಳಲಾಗಿದೆ.

ಸಂಖ್ಯಾ ಬಲವಿಲ್ಲದಿದ್ದರೂ 4ನೇ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಬೇರೆ ಪಕ್ಷಗಳ ಶಾಸಕ ರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿವೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಹಾಲಿ ಶಾಸಕರಲ್ಲಿ ಕೆಲವರು ತಮ್ಮ ಅವಧಿ ಮುಗಿಯುತ್ತಿದ್ದಂತೆ ಪಕ್ಷ ತೊರೆಯಲು ನಿರ್ಧರಿಸಿದ್ದು, ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬಂದಿರುವ ಮಾತು. ಹೀಗಾಗಿ ಜೆಡಿಎಸ್‍ನ ಕೆಲ ಶಾಸಕರ ಜೊತೆ ಭವಿಷ್ಯದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರಲಿರುವ ಶಾಸಕರು ತಮ್ಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮಾಡುವುದು ಕಾಂಗ್ರೆಸ್‍ನ ಕಾರ್ಯತಂತ್ರವಾದರೆ, ಇದೇ ರೀತಿಯ ಕಾರ್ಯತಂತ್ರವನ್ನು ಬಿಜೆಪಿ ಕೂಡ ರೂಪಿಸಿದೆ. ಒಂದು ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯಲು ಸಾಧ್ಯವಾಗದಿದ್ದರೂ 2ನೇ ಪ್ರಾಶಸ್ತ್ಯ ಮತಗಳಿಂದ ತಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂಬುದು ಬಿಜೆಪಿಯ ವಿಶ್ವಾಸ. ಸಂಖ್ಯಾ ಬಲವಿಲ್ಲದಿದ್ದರೂ ತಮ್ಮ ಪಕ್ಷದಿಂದ 2ನೇ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್‍ಗೆ ಮಾತ್ರ ಸಂಖ್ಯಾ ಬಲವಿದೆಯೇ ಎಂದು ಪ್ರಶ್ನಿಸಿದ್ದಲ್ಲದೆ, ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆಂಬ ವಿಶ್ವಾಸದಿದಂದಲೇ ಕಣಕ್ಕಳಿಸಿದ್ದೇವೆ. ಆತ್ಮಸಾಕ್ಷಿಯಿಂದ ಮತ ಚಲಾಯಿಸುವ ಶಾಸಕರು ನಮ್ಮ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ ಎಂದು ಹೇಳುವ ಮೂಲಕ ಜೆಡಿಎಸ್ ಮತ್ತು ಬಿಜೆಪಿ ಬುಟ್ಟಿಗೆ ಕಾಂಗ್ರೆಸ್ ಕೈ ಹಾಕಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾವುದೇ ಅಭ್ಯರ್ಥಿ ನಾಮಪತ್ರ ಹಿಂಪಡೆಯದ ಕಾರಣ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೇಹರ್‍ಸಿಂಗ್, ಕಾಂಗ್ರೆಸ್‍ನ ಜೈರಾಂ ರಮೇಶ್, ಮನ್ಸೂರ್ ಅಲಿಖಾನ್, ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಅಂತಿಮ ಕಣದಲ್ಲಿದ್ದಾರೆ.

Translate »