ಶ್ರೀರಂಗಪಟ್ಟಣದಲ್ಲಿ ಪೊಲೀಸರ ಸರ್ಪಗಾವಲು
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಪೊಲೀಸರ ಸರ್ಪಗಾವಲು

June 4, 2022

ಶ್ರೀರಂಗಪಟ್ಟಣ, ಜೂ.3(ವಿನಯ್ ಕಾರೇಕುರ)- ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಜಾಮಿಯಾ ಮಸೀದಿಗೆ `ಮೂಲ ಮಂದಿರ ಚಲೋ’ ಹೆಸರಿನಲ್ಲಿ ಜಾಥಾ ನಡೆಸಿ, ಅಲ್ಲಿರುವ ಹಿಂದೂ ದೇವ ರಿಗೆ ಪೂಜೆ ಸಲ್ಲಿಸುವುದಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮುಖಂಡರು ಘೋಷಿಸಿದ್ದ ಹಿನ್ನೆಲೆಯಲ್ಲಿ ಶ್ರೀರಂಗ ಪಟ್ಟಣದಲ್ಲಿ ಇಂದು(ಜೂ.3) ಸಂಜೆ 6 ರಿಂದ ಜೂ.5ರಂದು ಮಧ್ಯಾಹ್ನ 12 ಗಂಟೆ ವರೆಗೆ ನಿಷೇಧಾಜ್ಞೆ ಘೋಷಿಸಲಾಗಿದ್ದು, ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬಂದೋಬಸ್ತ್ ಉಸ್ತುವಾರಿಯನ್ನು ಸ್ವತಃ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಯತೀಶ್ ಅವರೇ ವಹಿಸಿದ್ದು, ನಾಲ್ವರು ಡಿವೈಎಸ್ಪಿ, 10 ಮಂದಿ ಇನ್ಸ್ ಪೆಕ್ಟರ್, 25 ಮಂದಿ ಸಬ್ ಇನ್ಸ್‍ಪೆಕ್ಟರ್ ಹಾಗೂ 250 ಮಂದಿ ಸಿವಿಲ್ ಪೊಲೀಸ್ ಸಿಬ್ಬಂದಿ, 2 ಕೆಎಸ್‍ಆರ್‍ಪಿ ತುಕಡಿ, 5 ಡಿಎಆರ್ ತುಕಡಿ, 1 ಕ್ಯೂಆರ್‍ಟಿ ಫೋರ್ಸ್ ನಿಯೋ ಜಿಸಿ ಶ್ರೀರಂಗಪಟ್ಟಣದಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜಾಮಿಯಾ ಮಸೀದಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಣ್ಗಾ ವಲು ಹಾಕಲಾಗಿದೆ. ಜೊತೆಗೆ ಪೊಲೀಸರು ಕೂಡ ವಿಡಿಯೋ ಚಿತ್ರೀಕರಣ ಮಾಡಲಿ ದ್ದಾರೆ. ಶುಕ್ರವಾರ ಎಸ್ಪಿ ಯತೀಶ್, ಡಿವೈಎಸ್ಪಿ ಸಂದೇಶ್ ಕುಮಾರ್ ನೇತೃತ್ವ ದಲ್ಲಿ ಪಟ್ಟಣದ ಪ್ರಮುಖ ಬೀದಿಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಲಾಯಿತು. ಜಾಮಿಯಾ ಮಸೀದಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮದ್ಯ ಮಾರಾಟ ನಿಷೇಧ: ಮೂಲಮಂದಿರ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜೂ.3ರಿಂದ ಸಂಜೆ 6ರಿಂದ ಜೂ.5ರ ಬೆಳಗ್ಗೆ 6 ಗಂಟೆವರೆಗೆ ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯ 5 ಕಿಮೀ ಸುತ್ತಳತೆ ವ್ಯಾಪ್ತಿಯಲ್ಲಿ ಇರುವ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಮುಚ್ಚುವಂತೆ ಹಾಗೂ ಮದ್ಯ ಮಾರಾಟ, ಸಂಗ್ರಹಣೆ, ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಆದೇಶ ಹೊರಡಿಸಿದ್ದಾರೆ.

ಸಂತೆ ಮುಂದೂಡಿಕೆ: ವಿಶ್ವ ಹಿಂದೂ ಪರಿಷತ್‍ನಿಂದ ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಶ್ರೀಮೂಡಲ ಬಾಗಿಲು ಆಂಜನೇಯಸ್ವಾಮಿ ಮೂಲ ಮಂದಿರಕ್ಕೆ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಜೂ.4ರಂದು ನಡೆಯಬೇಕಿರುವ ಸಂತೆಯನ್ನು ಜೂ.5ಕ್ಕೆ ಮುಂದೂಡಲಾಗಿದೆ ಎಂದು ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಮೂಲ ಮಂದಿರ ಚಲೋ ಕಾರ್ಯಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ನಿಷೇಧಾಜ್ಞೆ ಹೇರಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಬೆಳಗೊಳ ಸುನೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. `ಮೈಸೂರು ಮಿತ್ರ’ ಜೊತೆ ಮಾತನಾಡಿದ ಅವರು, ಹಾಲಿ ಜಾಮಿಯಾ ಮಸೀದಿ ಎಂದು ಕರೆಯಲ್ಪಡುತ್ತಿರುವುದು ಈ ಹಿಂದೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು. ಅದನ್ನು ಟಿಪ್ಪು ಕಾಲದಲ್ಲಿ ಅತಿಕ್ರಮಣ ಮಾಡಿ ಮಸೀದಿ ನಿರ್ಮಿಸಲಾಗಿದೆ. ಈಗಲೂ ಕೂಡ ಮಸೀದಿಯೊಳಗೆ ಹಿಂದೂ ದೇವರ ವಿಗ್ರಹಗಳಿವೆ. ಕಲ್ಯಾಣಿಯೂ ಇದೆ. ಇದು ಪುರಾತತ್ವ ಇಲಾಖೆಗೆ ಸೇರಿದ್ದಾಗಿದ್ದು, ಅಲ್ಲಿ ಯಾರೂ ವಾಸ ಮಾಡುವ ಹಾಗಿಲ್ಲ. ಆದರೆ ಮಸೀದಿಯೊಳಗಿರುವ ಹಿಂದೂ ದೇವರ ವಿಗ್ರಹಗಳನ್ನು ಹಾಳುಗೆಡವಲಾಗುತ್ತಿದೆ. ಅಲ್ಲದೇ ಮಸೀದಿಯೊಳಗೆ ಕೆಲವರು ವಾಸವಾಗಿದ್ದಾರೆ. ಇದು ಪುರಾತತ್ವ ಇಲಾಖೆಗೆ ಕಾಯ್ದೆಗೆ ವಿರುದ್ಧವಾಗಿದ್ದು, ಅಲ್ಲಿ ವಾಸವಿರುವ ವರನ್ನು ಹೊರ ಹಾಕಬೇಕು ಹಾಗೂ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ನಮ್ಮ ಆಗ್ರಹವಾಗಿದ್ದು, ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪುರಾತತ್ವ ಇಲಾಖೆಗೆ ಮನವಿ ಮಾಡಲಾಗಿದೆ. ನಾಳೆ (ಜೂ.4) ಬೆಳಗ್ಗೆ 10.30ಕ್ಕೆ ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ `ಮೂಲ ಮಂದಿರ ಚಲೋ’ ಹೆಸರಿನಲ್ಲಿ ಈಗ ಜಾಮಿಯಾ ಮಸೀದಿ ಎಂದು ಕರೆಯಲ್ಪಡುತ್ತಿರುವ ಮೂಲತಃ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯದವರೆಗೆ ಜಾಥಾ ನಡೆಸಿ, ಅಲ್ಲಿ ಹನುಮಾನ್ ಚಾಲಿಸ್ ಪಠಿಸಲು ಉದ್ಧೇಶಿಸಲಾಗಿತ್ತು. ಆದರೆ ನಿಷೇಧಾಜ್ಞೆ ಜಾರಿಯಲ್ಲಿರು ವುದರಿಂದ ಕಾನೂನಿಗೆ ಗೌರವ ನೀಡಿ ಜಾಥಾ ನಡೆಸುವುದನ್ನು ಕೈಬಿಡಲಾಗಿದೆ. ಆದರೆ ಕಾನೂನಿಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಜಾಮಿಯಾ ಮಸೀದಿ ಬಳಿ ಜಮಾಯಿಸಿ ಹನುಮಾನ ಚಾಲಿಸ್ ಪಠಿಸುತ್ತೇವೆ ಎಂದು ಅವರು ಹೇಳಿದರು.

Translate »