ಮೈಸೂರು, ಜೂ.15(ಆರ್‍ಕೆಬಿ)-ಮೈಸೂರು ಮತ್ತು ಹುಣಸೂರು ತಾಲೂಕನ್ನು ಸಂಪರ್ಕಿಸುವ ಕಂತೆಗೌಡನಕೊಪ್ಪಲು, ಹುಸೇನ್‍ಪುರ, ತೆಂಕಲ ಕೊಪ್ಪಲು, ಕೊಮೆಗೌಡನಕೊಪ್ಪಲು, ದಡದಕಲ್ಲಹಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಗಾಮಸ್ಥರಿಗೆ ಇಂದಿಲ್ಲಿ ಭರವಸೆ ನೀಡಿದರು.
ಈ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಅಲ್ಲಿನ ಗ್ರಾಮಸ್ಥರ ಬೇಡಿಕೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ಉಪಮುಖ್ಯಮಂತ್ರಿ ಗಳೂ ಆಗಿರುವ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರ ಗಮನ ಸೆಳೆಯಲಾಗಿತ್ತು. ಮಾಜಿ ಮುಖ್ಯ ಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರು ನಿರ್ಮಿಸಿದ್ದ ಸೇತುವೆ ಈಗ ಹಾಳಾ ಗಿದೆ. ಈ ಸೇತುವೆಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸಚಿವರನ್ನು ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು ಅಧೀಕ್ಷಕ ಅಭಿಯಂತರ ವೀರಭದ್ರಯ್ಯ ಅವರಿಗೆ ರಸ್ತೆ ಕಾಮಗಾರಿ ಕೈಗೊಳ್ಳಲು ದೂರವಾಣಿ ಮೂಲಕ ಸೂಚನೆ ನೀಡಿದ್ದು, ಆದಷ್ಟು ಶೀಘ್ರ ಕಾಮಗಾರಿ ನಡೆಯಲಿದೆ ಎಂದು ಜಿ.ಟಿ.ದೇವೇಗೌಡರು ಗುಂಗ್ರಾಲ್ ಛತ್ರದ ತಮ್ಮ ಗೃಹ ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಕೆ.ಎಸ್.ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.