ಮೈಸೂರು, ಸೆ.10(ಆರ್‍ಕೆ)- ಮೈಸೂರು ನಗರದಾದ್ಯಂತ ರಸ್ತೆ ವಿಭಜಕಗಳಿಗೆ ರಿಫ್ಲೆಕ್ಟರ್ ಅಳವಡಿಸುವ ಕಾರ್ಯಕ್ಕೆ ಸಂಚಾರ ಪೊಲೀಸರು ಬುಧವಾರದಿಂದ ಚಾಲನೆ ನೀಡಿದ್ದಾರೆ.
ದಸರಾ ಸಮೀಪಿಸುತ್ತಿರುವುದರಿಂದ ಮೈಸೂರು ನಗರದ ರಸ್ತೆ, ವೃತ್ತ, ಜಂಕ್ಷನ್‍ಗಳ ಸೌಂದರ್ಯ ಹೆಚ್ಚಿಸಲು ಮೈಸೂರು ಮಹಾನಗರ ಪಾಲಿಕೆಯು ಮುಂದಾಗುತ್ತಿದ್ದಂತೆಯೇ, ಸಂಚಾರ ಪೊಲೀಸರು ರಸ್ತೆ ವಿಭಜಕ (ಮೀಡಿಯನ್) ಗಳಿಗೆ ರಿಫ್ಲೆಕ್ಟರ್ ಅಳವಡಿಸುವುದು, ಪ್ರಮುಖ ರಸ್ತೆಗಳಿಗೆ ಸ್ಟಡ್‍ಗಳನ್ನು ಹಾಕಿ ಮಧ್ಯದ ಭಾಗ ತಿಳಿಯುವಂತೆ ಮಾಡುತ್ತಿದ್ದಾರೆ. ಜಂಕ್ಷನ್‍ಗಳು, ತಿರುವುಗಳಲ್ಲಿ ಸಂಚಾರ ನಿಯಮಗಳ ಫಲಕ, ಸಲಹಾ ಸೂಚಕಗಳನ್ನು ಅಳವಡಿಸಿ ವಾಹನ ಸಂಚಾರ ಸುಗಮಗೊಳಿಸಲಾಗುತ್ತಿದೆ. ಈ ಹಿಂದೆ ಅಳವಡಿಸಿರುವ ಸೋಲಾರ್ ಸ್ಟಡ್‍ಗಳು, ರಿಫ್ಲೆಕ್ಟರ್‍ಗಳು ಕೆಟ್ಟು ನಿಂತಿರುವುದರಿಂದ ಅಪಘಾತಗಳನ್ನು ತಡೆಗಟ್ಟಲು ಸಂಚಾರ ವಿಭಾಗದ ಎಸಿಪಿ ಸಂದೇಶ್‍ಕುಮಾರ್ ನೇತೃತ್ವದಲ್ಲಿ ಮೈಸೂರು ನಗರದ್ಯಾಂತ ಸಂಚಾರಕ್ಕೆ ಅನುಕೂಲವಾಗುವಂತೆ ಉಪಕರಣಗಳನ್ನು ಪೊಲೀಸರು ಅಳವಡಿಸುತ್ತಿದ್ದಾರೆ.
ದೇವರಾಜ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಮುನಿಯಪ್ಪ, ವಿವಿಪುರಂನ ಅರುಣ್ ಕುಮಾರಿ, ಕೆಆರ್‍ನ ವಿನಯ್, ಎನ್‍ಆರ್‍ನ ದಿವಾಕರ್‍ಗೌಡ ಹಾಗೂ ಸಿದ್ಧಾರ್ಥನಗರ ಸಂಚಾರ ಠಾಣೆಯ ಬಸವರಾಜು ಅವರು ತಂತಮ್ಮ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಸೂಚನಾ ಫಲಕ ಹಾಗೂ ಮಾರ್ಗಸೂಚಿ ಉಪಕರಣಗಳನ್ನು ಹಾಕುತ್ತಿದ್ದಾರೆ.