ರೀಡ್ ಅಂಡ್ ಟೇಲರ್ ದಿವಾಳಿ; ಕಂಪನಿಗೆ ಬೀಗ
ಮೈಸೂರು

ರೀಡ್ ಅಂಡ್ ಟೇಲರ್ ದಿವಾಳಿ; ಕಂಪನಿಗೆ ಬೀಗ

May 20, 2020

ಕೆಲಸ ಕಳೆದುಕೊಂಡ ಸಾವಿರಾರು ನೌಕರರು; ಜಿಲ್ಲೆಯ ಕಾರ್ಮಿಕ ವರ್ಗದಲ್ಲಿ ಆತಂಕ
ಮೈಸೂರು, ಮೇ 19- ಅದಾಗಲೇ ದಿವಾಳಿಯಂಚಿಗೆ ಸಾಗಿದ್ದ ನಂಜನ ಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ `ರೀಡ್ ಅಂಡ್ ಟೇಲರ್’ ಹೆಸರಿನಲ್ಲೇ ಗುರುತಿಸಿಕೊಂಡಿರುವ ಜವಳಿ ಉದ್ಯಮ ಕಂಪನಿ `ಆರ್‍ಟಿಐಎಲ್ ಲಿಮಿ ಟೆಡ್’ ಈಗ ಕಾರ್ಖಾನೆ ಯನ್ನು ಪೂರ್ಣ ಸ್ಥಗಿತ ಗೊಳಿಸುತ್ತಿದೆ. ಅದೇ ಕಾರಣವಾಗಿ ಕಂಪನಿಯ ಅಧಿಕಾರಿಗಳು ಸೇರಿದಂತೆ ಸಾವಿರಾರು ನೌಕರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಐದು ದಿನಗಳ ಹಿಂದೆಯೇ ನೋಟಿಸ್ ಜಾರಿ ಮಾಡಿದೆ.

ಮೇ 14ರಂದು ಕಂಪನಿ ಆಡಳಿತ ಕಚೇರಿ ಫಲಕದಲ್ಲಿ ನೋಟಿಸ್ ಪ್ರಕಟಿಸಿ ರುವ ಆರ್‍ಟಿಐಎಲ್ ಲಿ.ನ ಲಿಕ್ವಿಡೇಟರ್ (ದಿವಾಳಿ ಪ್ರಕ್ರಿಯೆ ಅಧಿಕಾರಿ) ರವಿಶಂಕರ್ ದೇವರಕೊಂಡ ಅವರು, ಕಳೆದ 14 ತಿಂಗಳಿಂದ ನಾವು ಪರಿಸ್ಥಿತಿಯನ್ನು ತಕ್ಕ ಮಟ್ಟಿಗೆ ನಿಭಾಯಿಸುತ್ತಾ ಬಂದೆವಾದರೂ, ಈಗ ಕಾರ್ಖಾನೆಯನ್ನು ಅನಿವಾರ್ಯ ವಾಗಿ ಬಂದ್ ಮಾಡಲೇ ಬೇಕಾಗಿ ಬಂದಿದೆ. ಇದರ ಹೊರತು ಬೇರೆ ಮಾರ್ಗ ವಿಲ್ಲದಂತಾಗಿದೆ ಎಂದು ತಿಳಿಸಿದ್ದಾರೆ. ಈಗ ನಮ್ಮಲ್ಲಿ ಯಾವುದೇ ಸೇಲ್ ಆರ್ಡರ್ ಇಲ್ಲ. ಬಾಕಿ ಬಿಲ್ ಪಾವತಿಸದಿರುವ ಕಾರಣ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಿ ದ್ದಾರೆ. ಗ್ರಾಹಕರಿಂದಲೂ ನಮ್ಮ ಉತ್ಪನ್ನ ಗಳಿಗೆ ಬೇಡಿಕೆ ಇಲ್ಲ. ಕಂಪನಿಯ ಸಾಲ ವಿತರಕರಿಂದಲೂ ದುಡಿಯುವ ಬಂಡವಾಳ ದೊರೆಯುತ್ತಿಲ್ಲ. ಕಂಪನಿಯ ಹಣಕಾಸು ಮುಗ್ಗಟ್ಟು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದ್ದರಿಂದ ಕಂಪನಿ ನಡೆಸುವುದು ಕಷ್ಟವಾಗಿದೆ.

ಈ ಸಂಬಂಧ ಮೇ 5ರಂದು ನಡೆದ ಸಭೆಯಲ್ಲಿ ಬ್ಯಾಂಕ್ರಪ್ಟಸಿ ಕೋಡ್-2016ರ ಸೆಕ್ಷನ್ 35(2) ಅನ್ವಯ ಕಂಪನಿಯನ್ನು ಪೂರ್ಣ ಬಂದ್ ಮಾಡುವ ಹಾಗೂ ಎಲ್ಲಾ 182 ನೌಕರರನ್ನೂ ಕೆಲಸದಿಂದ ಬಿಡುಗಡೆಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಕೆಲಸ ಕಳೆದು ಕೊಳ್ಳುವ ಎಲ್ಲಾ ನೌಕರರಿಗೂ ನಿಯಮಾನುಸಾರ ಸಲ್ಲಬೇಕಾದ ಬಾಕಿ ವೇತನ, ಪರಿಹಾರ ಧನ ನೀಡಲಾಗುವುದು ಎಂದÀು ತಿಳಿಸಿದ್ದಾರೆ. ಹೆಸರಾಂತ ಜವಳಿ ಉದ್ಯಮ ಸಂಸ್ಥೆಯಾದ ರೀಡ್ ಅಂಡ್ ಟೇಲರ್ ಕಂಪನಿಯೇ ಮುಚ್ಚಿದ್ದು, ಅದರ 182 ಸಿಬ್ಬಂದಿ ಕೆಲಸ ಕಳೆದುಕೊಳ್ಳು ತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇನ್ನೆಷ್ಟು ಉದ್ದಿಮೆಗಳು ಬಂದ್ ಆಗುತ್ತವೋ? ಅದೆಷ್ಟು ಮಂದಿಯ ನೌಕರಿ ಇಲ್ಲವಾಗುವುದೋ ಎಂಬ ಆತಂಕ ಜಿಲ್ಲೆಯ ಕಾರ್ಮಿಕರದ್ದಾಗಿದೆ.

Translate »