ಕಾವೇರಿ ನೀರು ಸರಬರಾಜು ಯೋಜನೆ ಮೇಲ್ದರ್ಜೆಗೆ
ಮೈಸೂರು ಗ್ರಾಮಾಂತರ

ಕಾವೇರಿ ನೀರು ಸರಬರಾಜು ಯೋಜನೆ ಮೇಲ್ದರ್ಜೆಗೆ

May 20, 2020

ಹುಣಸೂರು, ಮೇ 19(ಕೆಕೆ)-ಹುಣಸೂರು ನಗರಕ್ಕೆ ಮುಂಬರುವ ದಿನಗಳಲ್ಲಿ ಸಮರ್ಪಕ ನೀರು ಪೂರೈಸುವ ಸಲುವಾಗಿ ವಿವಿಧ ಯೋಜನೆಯಡಿ 9 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು.

ಯೋಜನೆ ಅನುಷ್ಠಾನ ಸಂಬಂಧ ನಗರಸಭೆ ಸಭಾಂಗಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ನಗರಸಭೆ ಅಧಿಕಾರಿಗಳು ಹಾಗೂ ಇಂಜಿನಿಯರ್‍ಗಳ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ನಗರಕ್ಕೆ ಮುಂದಿನ 20 ವರ್ಷಗಳ ಅವಧಿಯ ದೂರದೃಷ್ಟಿ ಇಟ್ಟುಕೊಂಡು ನಗರೋತ್ಥಾನ ಯೋಜನೆಯ 3ನೇ ಹಂತದ 5.50 ಕೋಟಿ ರೂ, ನಗರಸಭೆಯ 14ನೇ ಹಣಕಾಸು ಯೋಜನೆಯಡಿ 2 ಕೋಟಿ ರೂ., ಎಸ್‍ಎಫ್‍ಸಿ ವಿಶೇಷ ಅನುದಾನ 1.50ಕೋಟಿ ರೂ. ಸೇರಿದಂತೆ ಒಟ್ಟು 9 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನೆ ರೂಪಿಸಲಾಗಿದೆ. ಸದ್ಯದ ನೀರು ಸರಬರಾಜು ಯೋಜನೆಯನ್ನು ಮೇಲ್ದರ್ಜೆಗೇರಿಸಿದ ನಂತರ ಸುಮಾರು ಲಕ್ಷ ಮಂದಿಗೆ ಸಮರ್ಪಕ ನೀರು ಪೂರೈಸಬಹುದಾಗಿದೆ ಎಂದರು.

5 ಲಕ್ಷ ಲೀ. ಸಾಮಥ್ರ್ಯದ 3 ಟ್ಯಾಂಕ್ ನಿರ್ಮಾಣ : ನಗರೋತ್ಥಾನ ಯೋಜನೆಯ 5.50 ಕೋಟಿ ರೂ. ವೆಚ್ಚದಡಿ ನಗರದ ಕಲ್ಕುಣಿಕೆ ಅಯ್ಯಪ್ಪಸ್ವಾಮಿ ಬೆಟ್ಟ, ನರಸಿಂಹಸ್ವಾಮಿ ತಿಟ್ಟಿನ ದೇವಾಲಯದ ಬಳಿ ಹಾಗೂ ಶಬ್ಬೀರ್ ನಗರದಲ್ಲಿ 5 ಲಕ್ಷ ಲೀ. ಸಾಮಥ್ರ್ಯದ ಓವರ್ ಹೆಡ್ ಟ್ಯಾಂಕ್‍ಗಳನ್ನು ನಿರ್ಮಿಸಲಾಗುವುದು ಎಂದರು.

ಮೋಟಾರ್ ಸಾಮಥ್ರ್ಯ ಹೆಚ್ಚಳ: 14ನೇ ಹಣಕಾಸು ಹಾಗೂ, ಎಸ್‍ಎಫ್‍ಸಿಯ 3.50ಕೋಟಿ ರೂ. ಅನುದಾನದಡಿ ಕೆ.ಆರ್.ನಗರ ತಾಲೂಕಿನ ಚಂದಗಾಲು ಬಳಿಯ ಹುಣಸೂರು ನಗರಕ್ಕೆ ನೀರು ಪೂರೈಸುವ ಕಾವೇರಿ ನೀರು ಸರಬರಾಜು ಯೋಜನೆಯ ಹಾಲೀ 270 ಹೆಚ್‍ಪಿಯಿಂದ 350 ಹೆಚ್‍ಪಿಯ ಎರಡು ಮೋಟಾರ್ ಅಳವಡಿಸುವುದು. ಜಾಕ್‍ವೆಲ್ ಹಾಗೂ ಟ್ರಿಟ್‍ಮೆಂಟ್ ಪ್ಲಾಂಟ್‍ನ್ನು 35 ಲಕ್ಷ ಲೀ. ಸಾಮಥ್ರ್ಯಕ್ಕೆ ಮೇಲ್ದರ್ಜೆಗೇರಿಸುವುದು. ನೂತನವಾಗಿ ನಿರ್ಮಿಸಿರುವ ಟ್ಯಾಂಕ್‍ಗಳಿಗೆ ಹೊಸ ಪೈಪ್‍ಲೈನ್ ಸಂಪರ್ಕ ಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಈಗಾಗಲೇ ಎಲ್ಲಾ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದರು. 2021ರ ಮಾರ್ಚ್ ಒಳಗೆ ಕಾಮಗಾರಿ ಮುಗಿಸಿ ಜನತೆಗೆ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಯೋಜನೆ ಮಂಜೂರಾಗಲು ಸಹಕರಿಸಿರುವ ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಗೂ ಇಂಜಿನಿಯರ್‍ಗಳನ್ನು ಅಭಿನಂದಿಸಿದರು. ನಗರಸಭಾ ಪೌರಾಯುಕ್ತ ಮಂಜುನಾಥ್, ಕೆಯುಡ್ಲ್ಯೂಯುಬಿನ ಎಇಇ ಮಂಜುನಾಥ್, ಇಂಜಿನಿಯರ್‍ಗಳಾದ ಸದಾಶಿವಪ್ಪ, ಅನುಪಮಾ, ರೂಪಾ, ದೀಪಕ್ ಸಮುದಾಯ ಸಮನ್ವಯಾಧಿಕಾರಿ ಸುದರ್ಶನ್ ಉಪಸ್ಥಿತರಿದ್ದರು.

Translate »