ನಂಜಗೂಡು: ಬಸ್ ಸಂಚಾರ ಇದ್ದರೂ ಬಣಗುಟ್ಟಿದ ನಿಲ್ದಾಣ
ಮೈಸೂರು ಗ್ರಾಮಾಂತರ

ನಂಜಗೂಡು: ಬಸ್ ಸಂಚಾರ ಇದ್ದರೂ ಬಣಗುಟ್ಟಿದ ನಿಲ್ದಾಣ

May 20, 2020

ನಂಜನಗೂಡು, ಮೇ 19-ಲಾಕ್‍ಡೌನ್ ಸಡಿಲಿಕೆ ಹಾಗೂ ಸರ್ಕಾರದ ಮಾರ್ಗಸೂಚಿಸಿಯಂತೆ ನಂಜನಗೂಡಿನಲ್ಲೂ ಮಂಗಳವಾರದಿಂದ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದು, ಮಾಹಿತಿ ಕೊರತೆ ಹಿನ್ನೆಲೆ ಮೊದಲ ದಿನ ಪ್ರಾಯಾಣಿಕರಿಲ್ಲದೆ ನಿಲ್ದಾಣ ಬಣಗೂಟ್ಟಿತು.

58 ದಿನಗಳ ಬಳಿಕ ನಗರದಲ್ಲಿ ಬಸ್ ಸಂಚಾರ ಆರಂಭವಾಗಿದ್ದು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧವಿದ್ದರಿಂದ ಸಮರ್ಪಕ ಮಾಹಿತಿ ದೊರಕದೇ ಜನರು ಪರದಾಡುವಂತಾಯಿತು.

ಅಲ್ಲದೆ ನಿಲ್ದಾಣದಲ್ಲಿದ್ದ ಬೇಕರಿ, ಅಂಗಡಿ ಮುಂಗಟ್ಟುಗಳಿಗೆ ತೆರಳಿ ಖರೀದಿ ಮಾಡುವ ಜನರಿಗೂ ನಿಲ್ದಾಣ ಸಿಬ್ಬಂದಿ ತಡೆಹೊಡ್ಡಿದ್ದರಿಂದ ಮಳಿಗೆ ಬಾಡಿಗೆದಾರರು ವ್ಯಾಪಾರವಿಲ್ಲದೇ ದಿನ ಕಳೆಯುವಂತಾಯಿತು.

ಬಸ್ ಸಂಚಾರ ಆರಂಭವಾದ ದಿನದಿಂದಲೇ ಮಳಿಗೆ ಬಾಡಿಗೆ ಪಾವತಿಸುವಂತೆ ಕೆಎಸ್‍ಆರ್‍ಟಿಸಿ ಸಂಸ್ಥೆ ಈ ಹಿಂದೆ ಆದೇಶಿಸಿದೆ. ಆದರೆ ವ್ಯಾಪಾರಕ್ಕೆ ಸಿಬ್ಬಂದಿ ತೊಡಕುಂಟು ಮಾಡುತ್ತಿದ್ದರಿಂದ ವ್ಯಾಪಾರಿಗಳಿಂದ ಅಸಮಾಧಾನ ವ್ಯಕ್ತವಾಯಿತು.

ತಾಲೂಕಿನ ಹುಲ್ಲಹಳ್ಳಿ, ಹುರಾ, ಹೆಡಿಯಾಲ, ಹದಿನಾರು, ಕಸುವಿನಹಳ್ಳಿ ಸೇರಿದಂತೆ ಗ್ರಾಮಾಂತರ ಭಾಗಕ್ಕೆ ಸಾರಿಗೆ ಬಸ್ ಸಂಚಾರವಿತ್ತು. ಪ್ರತಿ ಬಸ್‍ನಲ್ಲಿ ಗರಿಷ್ಠ 30 ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಸ್ ಹತ್ತುವ ಮುನ್ನ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಸ್ಯಾನಿಟೈಜರ್ ಬಳಿಕ ಟಿಕೆಟ್ ವಿತರಿಸಿ ಬಸ್ ಹತ್ತಲು ಪ್ರಯಾಣಿಕರಿಗೆ ಅನುವು ಮಾಡಿಕೊಲಾಯಿತು. 60 ವರ್ಷ ಮೇಲ್ಪಟ್ಟವರು ಹಾಗೂ ಮಕ್ಕಳಿಗೆ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಮೈಸೂರು-ನಂಜನಗೂಡಿಗೆ ತೆರಳುವ ಪ್ರಯಾಣಿಕರಿಗೆ ಮಧ್ಯಾಹ್ನದವರೆಗೆ ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಯಿತು. ಚಾಮರಾಜನಗರ, ಗುಂಡ್ಲುಪೇಟೆ ಮಾರ್ಗಗಳಿಗೆ ಬಸ್ ಸಂಚಾರ ಕುರಿತು ಸ್ಪಷ್ಟ ಆದೇಶ ಇಲ್ಲದ ಕಾರಣ ಆ ಮಾರ್ಗಕ್ಕೆ ಇಂದು ಬಸ್ ಸಂಚಾರವಿರಲಿಲ್ಲ. ಮುಂದಿನ ಆದೇಶ ನೋಡಿ ಸಂಚಾರ ಆರಂಭಿಸುವುದಾಗಿ ಡಿಪೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Translate »